ಮಾಟಮಂತ್ರದ ವೇಳೆ ಐದು ವರ್ಷದ ಪುತ್ರಿಯನ್ನು ಹೊಡೆದು ಕೊಂದ ನಾಗ್ಪುರದ ದಂಪತಿ: ಪೊಲೀಸರಿಂದ ಮಾಹಿತಿ

ನಾಗ್ಪುರ: ದುಷ್ಟಶಕ್ತಿಗಳನ್ನು ಓಡಿಸಲು ಐದು ವರ್ಷದ ಬಾಲಕಿಯೊಬ್ಬಳ ಮೇಲೆ ಮಾಟಮಂತ್ರ(Black Magic) ಮಾಡುತ್ತಿದ್ದಾಗ ಬಾಲಕಿಯ ಪೋಷಕರು ಬಾಲಕಿಯನ್ನು ಹೊಡೆದು ಸಾಯಿಸಿರುವ ಘಟನೆ ಮಹಾರಾಷ್ಟ್ರದ ನಾಗ್ಪುರ ಸಿಟಿಯಲ್ಲಿ ರವಿವಾರ ನಡೆದಿದೆ.
ಶುಕ್ರವಾರ-ಶನಿವಾರದ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಪೊಲೀಸರು ಬಾಲಕಿಯ ತಂದೆ ಸಿದ್ಧಾರ್ಥ್ ಚಿಮ್ನೆ (45), ತಾಯಿ ರಂಜನಾ (42) ಹಾಗೂ ಚಿಕ್ಕಮ್ಮ ಪ್ರಿಯಾ ಬನ್ಸೋದ್ (32) ಅವರನ್ನು ಬಂಧಿಸಿದ್ದಾರೆ.
ಯೂಟ್ಯೂಬ್‌ನಲ್ಲಿ ಸ್ಥಳೀಯ ಸುದ್ದಿ ವಾಹಿನಿಯನ್ನು ನಡೆಸುತ್ತಿರುವ ಸುಭಾಷ್ ನಗರದ ನಿವಾಸಿ ಚಿಮ್ನೆ, ಕಳೆದ ತಿಂಗಳು ಗುರು ಪೂರ್ಣಿಮೆಯಂದು ತನ್ನ ಪತ್ನಿ, 5 ಮತ್ತು 16 ವರ್ಷದ ಇಬ್ಬರು ಹೆಣ್ಣುಮಕ್ಕಳೊಂದಿಗೆ ತಕಲ್‌ಘಾಟ್ ಪ್ರದೇಶದ ದರ್ಗಾಕ್ಕೆ ಹೋಗಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಂದಿನಿಂದ, ತನ್ನ ಕಿರಿಯ ಮಗಳ ವರ್ತನೆಯಲ್ಲಿ ಬದಲಾವಣೆಯಾಗಿದೆ ಎಂದು ಶಂಕಿಸಿದ ವ್ಯಕ್ತಿ ತನ್ನ ಮಗಳು ಕೆಲವು ದುಷ್ಟ ಶಕ್ತಿಗಳ ಪ್ರಭಾವಕ್ಕೆ ಒಳಗಾಗಿದ್ದಾಳೆಂದು ನಂಬಿದ್ದನು ಹಾಗೂ ದುಷ್ಟ ಶಕ್ತಿಯನ್ನು ಓಡಿಸಲು ಮಾಟಮಂತ್ರದ ಮೊರೆ ಹೋಗಲು ನಿರ್ಧರಿಸಿದನು ಎಂದು ಅಧಿಕಾರಿ ಹೇಳಿದರು.
ಬಾಲಕಿಯ ಪೋಷಕರು ಹಾಗೂ ಚಿಕ್ಕಮ್ಮ ರಾತ್ರಿಯಲ್ಲಿ ಈ ಆಚರಣೆಯನ್ನು ಮಾಡಿದ್ದು ಅದರ ವೀಡಿಯೊವನ್ನು ಸಹ ಚಿತ್ರೀಕರಿಸಿದರು, ಪೊಲೀಸರು ಅವರ ಫೋನ್‌ನಿಂದ ವಶಪಡಿಸಿಕೊಂಡಿದ್ದಾರೆ.
ವೀಡಿಯೊ ಕ್ಲಿಪ್‌ನಲ್ಲಿ ಆರೋಪಿಗಳು ಅಳುತ್ತಿದ್ದ ಬಾಲಕಿಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಿರುವುದು ಕಂಡುಬಂದಿದೆ. ಮಗುವಿಗೆ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಅವರಿಗೆ ಉತ್ತರಿಸಲು ಅದಕ್ಕೆ ಸಾಧ್ಯವಾಗಲಿಲ್ಲ ಎಂದು ಅಧಿಕಾರಿ ಹೇಳಿದರು.
ಮಾಟಮಂತ್ರದ ಸಮಯದಲ್ಲಿ ಮೂವರು ಆರೋಪಿಗಳು ಬಾಲಕಿಗೆ ಕಪಾಳಮೋಕ್ಷ ಮಾಡಿ ತೀವ್ರವಾಗಿ ಥಳಿಸಿದ್ದಾರೆ. ನಂತರ ಬಾಲಕಿ ಪ್ರಜ್ಞಾಹೀನಳಾಗಿ ನೆಲದ ಮೇಲೆ ಕುಸಿದು ಬಿದ್ದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಆರೋಪಿಗಳು ಶನಿವಾರ ಬೆಳಗ್ಗೆ ಮಗುವನ್ನು ದರ್ಗಾಕ್ಕೆ ಕರೆದೊಯ್ದಿದ್ದಾರೆ.
ಬಳಿಕ ಬಾಲಕಿಯನ್ನು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ಅಲ್ಲಿಂದ ಓಡಿ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಸರಕಾರಿ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ತನ್ನಮೊಬೈಲ್ ನಲ್ಲಿ ಅನುಮಾನಾಸ್ಪದವಾಗಿ ಆಸ್ಪತ್ರೆಯಿಂದ ಪರಾರಿಯಾದ ಆರೋಪಿಗಳ ಕಾರಿನ ನಂಬರ್ ಅನ್ನು ಸೆರೆ ಹಿಡಿದಿದ್ದು, ಇದರ ಆಧಾರದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.







