"ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಪ್ರೋತ್ಸಾಹಧನ ತೀರಾ ಕಡಿಮೆ"
ಕಾಮನ್ವೆಲ್ತ್ ಪದಕ ವಿಜೇತ ಕ್ರೀಡಾಪಟು ಗುರುರಾಜ್ ಪೂಜಾರಿ ಬೇಸರ

ಗುರುರಾಜ್
ಉಡುಪಿ, ಆ.7: ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಪದಕ ವಿಜೇತ ಕ್ರೀಡಾಪಟುಗಳಿಗೆ ತುಂಬಾ ಕಡಿಮೆ ಪ್ರೋತ್ಸಾಹಧನ ಘೋಷಣೆ ಮಾಡಲಾಗುತ್ತದೆ. ಹರ್ಯಾಣ, ಪಂಜಾಬ್ ರಾಜ್ಯಗಳಲ್ಲಿ ಕಂಚು ಪದಕ ಗೆದ್ದವರಿಗೂ 40-50 ಲಕ್ಷ ರೂ. ಈಗಾಗಲೇ ಘೋಷಣೆ ಮಾಡಲಾಗಿದೆ. ಆದರೆ ಕರ್ನಾಟಕ ಸರಕಾರ ಕಂಚು ಗೆದ್ದ ನನಗೆ ಕೇವಲ ಎಂಟು ಲಕ್ಷ ರೂ. ಘೋಷಣೆ ಮಾಡಿದೆ. ಇನ್ನು ಹೆಚ್ಚಿನ ಸಹಕಾರವನ್ನು ನಾನು ಸರಕಾರದ ಕಡೆಯಿಂದ ಬಯಸುತ್ತೇನೆ ಎಂದು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪದಕ ವಿಜೇತ ಗುರುರಾಜ್ ಪೂಜಾರಿ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೇಟ್ ಲಿಫ್ಟಿಂಗ್ ತರಬೇತಿ ತುಂಬಾ ದುಬಾರಿ ಆಗಿದೆ. ಇದಕ್ಕೆ ತಿಂಗಳಿಗೆ 30-40ಸಾವಿರ ರೂ. ಖರ್ಚು ತಗಲುತ್ತದೆ. ಇದಕ್ಕಾಗಿ ಪ್ರೋತ್ಸಾಹಧನವನ್ನು ಹೆಚ್ಚು ನೀಡಿದರೆ ಹೆಚ್ಚು ತರಬೇತಿ ಪಡೆದು ಹೆಚ್ಚಿನ ಪದಕಗಳನ್ನು ಗಳಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯ ತುಂಬಾ ಹಿಂದೆ ಇದೆ. ಹರ್ಯಾಣ, ಪಂಜಾಬ್ ರಾಜ್ಯಗಳಲ್ಲಿ ಕಂಚು ಪದಕ ಗೆದ್ದವರಿಗೆ 40-50 ಲಕ್ಷ ರೂ. ಘೋಷಣೆ ಮಾಡಲಾಗಿದೆ. ಕರ್ನಾಟಕ ಸರಕಾರ ಕಂಚು ಗೆದ್ದ ನನಗೆ ಕೇವಲ ಎಂಟು ಲಕ್ಷ ರೂ. ಘೋಷಣೆ ಮಾಡಿದೆ. ಇನ್ನು ಹೆಚ್ಚಿನ ಪ್ರೋತ್ಸಾಹ ನೀಡುವಂತೆ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡುತ್ತೇನೆ. ಇದರಿಂದ ಕ್ರೀಡಾ ಕ್ಷೇತ್ರದಲ್ಲಿ ಇನ್ನುಷ್ಟು ಸಾಧನೆ ಮಾಡಿ ದೇಶ, ಕರ್ನಾಟಕಕ್ಕೆ ಪದಕ ತರಲು ಸಾಧ್ಯವಾಗುತ್ತದೆ ಎಂದರು.
ಪ್ರಸ್ತುತ ನಾನು ಚಂಢೀಗಡದ ಏರ್ಪೋರ್ಸ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಕಳೆದ ಎಂಟು ವರ್ಷಗಳಿಂದ ಊರು ಬಿಟ್ಟು ಅಲ್ಲಿ ಇರುವುದರಿಂದ ತುಂಬಾ ಸಮಸ್ಯೆ ಆಗುತ್ತದೆ. ಆದುದರಿಂದ ಕರ್ನಾಟಕ ಸರಕಾರ ನನಗೆ ರಾಜ್ಯ ದಲ್ಲಿಯೇ ಉದ್ಯೋಗ ನೀಡಿದರೆ ತುಂಬಾ ಸಹಾಯವಾಗುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಪದಕ ಪಡೆಯಲು ನನಗೆ ಸಹಕಾರವಾಗುತ್ತದೆ. ಅಲ್ಲದೆ ಕುಟುಂಬಕ್ಕೂ ಬೆಂಬಲವಾಗಿರಲು ಆಗುತ್ತದೆ ಎಂದು ಅವರು ಮನವಿ ಮಾಡಿದರು.
ಉಡುಪಿ ಜಿಲ್ಲೆಗೆ ಸುಸಜ್ಜಿತ ಕ್ರೀಡಾಂಗಣ ಹಾಗೂ ವೇಟ್ ಲಿಫ್ಟಿಂಗ್ ಸೆಟ್ ಬೇಕಾಗಿದೆ. ಒಲಪಿಂಕ್ ಗುಣಮಟ್ಟದ ಒಂದು ಜಿಮ್ ಇದ್ದರೆ ವೇಟ್ ಲಿಫ್ಟಿಂಗ್ ನಲ್ಲಿ ಸಾಧನೆ ಮಾಡಲು ಇಲ್ಲಿನ ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ. ಈ ಮೂಲಕ ಜಿಲ್ಲೆಯ ಮಕ್ಕಳಿಗೆ ವೇಟ್ ಲಿಫ್ಟಿಂಗ್ ಕ್ರೀಡೆಯನ್ನು ಪರಿಚಯಿಸಬಹು ದಾಗಿದೆ. ಇದರಿಂದ ಇಲ್ಲಿನ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗಳಿಸಿ ಸಾಧನೆ ಮಾಡಬಹುದಾಗಿದೆ ಎಂದು ಅವರು ಹೇಳಿದರು.
ಪದಕ ವಿಜೇತರಿಗೆ ಬೆಲೆಯೇ ಇಲ್ಲ!
ರಾಜ್ಯ ಸರಕಾರ ಕ್ರೀಡೆಯ ಬಗ್ಗೆ ಸಾಕಷ್ಟು ನಿರ್ಲಕ್ಷ್ಯ ತೋರುತ್ತಿದೆ. ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ನೀಡುವ ಪ್ರೋತ್ಸಾಹಧನ ವನ್ನು ಒಂದು ವರ್ಷದೊಳಗೆ ನೀಡುವ ಬದಲು ಎರಡು, ಮೂರು ವರ್ಷಗಳಿಗೆ ಮುಂದೂಡಲಾಗುತ್ತಿದೆ ಎಂದು ಗುರುರಾಜ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದರು.
ಅಂತಾರಾಷ್ಟ್ರೀಯ ಪದಕ ವಿಜೇತರಿಗೆ ಇಲ್ಲಿ ಬೆಲೆಯೇ ಇಲ್ಲ. ಆದುದರಿಂದ ಸರಕಾರ ಅಂತಾರಾಷ್ಟ್ರೀಯ ಪದಕ ವಿಜೇತರಿಗೆ ಪ್ರೋತ್ಸಾಹಧನವನ್ನು ಘೋಷಣೆ ಮಾಡಿ ಕೂಡಲೇ ನೀಡಬೇಕು. ಇದರಿಂದ ಮುಂದಿನ ಕ್ರೀಡಾಕೂಟಕ್ಕೆ ಸಜ್ಜಾಗಲು ಸಹಾಯವಾಗುತ್ತದೆ ಎಂದು ಅವರು ಹೇಳಿದರು.