ಕಾಮನ್‌ವೆಲ್ತ್ ಪದಕ ವಿಜೇತ ಗುರುರಾಜ್‌ಗೆ ಉಡುಪಿ ಜಿಲ್ಲಾಡಳಿತದಿಂದ ಸ್ವಾಗತ- ಸನ್ಮಾನ

ಉಡುಪಿ: ಇಂಗ್ಲೆಂಡ್‌ನ ಬರ್ಮಿಂಗ್ ಹ್ಯಾಂನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ವೇಟ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದು, ರವಿವಾರ ಜಿಲ್ಲೆಗೆ ಆಗಮಿಸಿದ ಕುಂದಾಪುರದ ಗುರುರಾಜ ಪೂಜಾರಿ ಅವರನ್ನು ಜಿಲ್ಲಾಡಳಿತದ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಅಜ್ಜರಕಾಡು ಮಹಾತ್ಮಗಾಂಧಿ ಮೈದಾನದಲ್ಲಿ ನಡೆದ ಅಭಿನಂದನಾ ಕಾರ್ಯ ಕ್ರಮದಲ್ಲಿ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್., ಪೌರಾಯುಕ್ತ ಡಾ.ಉದಯ ಶೆಟ್ಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ, ಗುರುರಾಜ ಪೂಜಾರಿ ಅವರನ್ನು ಸನ್ಮಾನಿಸಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅವಧಿಯಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಪಡೆಯುವ ಮೂಲಕ ಗುರುರಾಜ ಪೂಜಾರಿ, ಉಡುಪಿ ಜಿಲ್ಲೆಯ ಸೌಂದರ್ಯವನ್ನು ಹೆಚ್ಚಿಸಿದ್ದಾರೆ. ಆ ಮೂಲಕ ದೇಶದಲ್ಲಿ ಜಿಲ್ಲೆಯ ಹೆಸರನ್ನು ಪ್ರಖ್ಯಾತಗೊಳಿಸಿದ್ದಾರೆ ಎಂದರು.
ಗ್ರಾಮೀಣ ಪ್ರದೇಶದ ಪ್ರತಿಭೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಹ ಉನ್ನತ ಸಾಧನೆಗಳನ್ನು ಮಾಡಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಕಾರು ಚಾಲಕನ ಮಗನಾಗಿ, ಆರ್ಥಿಕ ಸಂಕಷ್ಟದ ನಡುವೆಯೂ ಈ ರೀತಿಯ ಸಾಧನೆ ಮಾಡಿರುವ ಗುರುರಾಜ್ ಪೂಜಾರಿ ಯುವಜನತೆಗೆ ಹಾಗೂ ಕ್ರೀಡಾಪಟುಗಳಿಗೆ ಸ್ಪೂರ್ತಿ ಹಾಗೂ ಪ್ರೇರಣೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಇವರು ಇನ್ನಷ್ಟು ಪದಕ ಗೆದ್ದು ದೇಶಕ್ಕೆ ಕೀರ್ತಿ ತರಲಿ ಎಂದು ಹಾರೈಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಗುರುರಾಜ ಪೂಜಾರಿ, ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್‌ನಲ್ಲಿ ರಜತ ಪಡೆಯುವ ಗುರಿಯಿಂದ 4 ವರ್ಷಗಳಿಂದ ಕಠಿಣ ಪರಿಶ್ರಮ ಪಟ್ಟಿದ್ದು, ಬರ್ಮಿಂಗ್ ಹ್ಯಾಂಗೆ ತೆರಳಿದ ನಂತರ ಅನಾರೋಗ್ಯ ಸಮಸ್ಯೆ ತಲೆದೋರಿತ್ತು. ಇದರಿಂದ ನನಗೆ ಕ್ರೀಡಾಕೂಟದಲ್ಲಿ ಭಾಗವಹಿಸುವುದೇ ಅನುಮಾನ ವಾಗಿತ್ತು. ಆದರೆ ಕೋಚ್‌ನ ಮಾರ್ಗದರ್ಶನ, ಆತ್ಮ ವಿಶ್ವಾಸ ಮತ್ತು ಎಲ್ಲರ ಹಾರೈಕೆಯಿಂದ ಗುಣಮುಖನಾಗಿ ಸ್ಪರ್ಧೆಯಲ್ಲಿ ಭಾಗವಹಿಸಿ, ತೀವ್ರ ಪೈಪೋಟಿಯ ನಡುವೆ ಕಂಚಿನ ಪದಕ ಪಡೆದು, ವೇಟ್ ಲಿಪ್ಟಿಂಗ್‌ನ 61 ಕೆಜಿ ವಿಭಾಗದಲ್ಲಿ ದೇಶಕ್ಕೆ ಇದೇ ಮೊದಲ ಬಾರಿಗೆ ಪದಕ ಪಡೆದ ಇತಿಹಾಸ ಸೃಷ್ಠಿಸಲು ಸಾಧ್ಯವಾಯಿತು ಎಂದರು.
ಈ ಸಂದರ್ಭದಲ್ಲಿ ಗುರುರಾಜ ಪೂಜಾರಿ ಅವರ ತಂದೆ, ಪತ್ನಿ ಸೌಜನ್ಯ, ಅಜ್ಜರಕಾಡು ಕ್ರೀಡಾ ವಸತಿ ಶಾಲೆಯ ಕ್ರೀಡಾಪಟುಗಳು, ನೇಷನ್ ಫಸ್ಟ್ ತಂಡದ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.
ಪತ್ನಿಗೆ ಪದಕ ಅರ್ಪಣೆ ಮಾಡಿದ್ದೆ!
ನಾನು ಹೊಸದಾಗಿ ಮದುವೆಯಾಗಿದ್ದು, ಒಂದು ವರ್ಷದೊಳಗೆ ಅವಳನ್ನು ಮನೆಯಲ್ಲಿ ಬಿಟ್ಟು ಹೋಗಿದ್ದೆ. ನನಗೆ ತುಂಬಾ ಪ್ರೋತ್ಸಾಹ ನೀಡಿದ ಪತ್ನಿಗೆ ನಾನು ಈ ಪದಕವನ್ನು ಅರ್ಪಣೆ ಮಾಡಿದ್ದೆ ಎಂದು ಗುರುರಾಜ್ ಪೂಜಾರಿ ಹೇಳಿದರು.
ಯಾವುದೇ ಹಿನ್ನೆಲೆ ಇರುವ ಕ್ರೀಡಾಪಟುಗಳು ಬದ್ಧತೆಯಿಂದ ಕಠಿಣ ಅಭ್ಯಾಸ, ಗುರಿಯೊಂದಿಗೆ ಮುನ್ನಡೆದರೆ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. 14-15ವರ್ಷ ಪ್ರಾಯದಲ್ಲೇ ಮಕ್ಕಳಿಗೆ ಒಂದೇ ಕ್ರೀಡೆಯಲ್ಲಿ ಹೆಚ್ಚಿನ ತರಬೇತಿ ನೀಡಬೇಕು. ಆಗ ಗುರಿ ಸಾಧನೆ ಮಾಡಬಹುದಾಗಿದೆ. ಕರ್ನಾಟಕಕ್ಕೆ ಇನ್ನು ಪದಕ ಸಿಗುವುದು ಸಾಧ್ಯತೆ ಕಡಿಮೆ ಇದೆ. ಈಗಾಗಲೇ ಭಾರತವು 40 ಪದಕ ಪಡೆದಿದ್ದು, ಇನ್ನು ಎರಡು ಮೂರು ದಿನಗಳಲ್ಲಿ ಹೆಚ್ಚಿನ ಪದಕ ಪಡೆಯಲಿದೆ. ಒಟ್ಟಾರೆಯಾಗಿ ನಾವು ಮೂರನೇ ಸ್ಥಾನಕ್ಕೆ ಏರುವ ಸಾಧ್ಯತೆಗಳಿವೆ ಎಂದರು.







