ಕಾಫಿನಾಡಿನಲ್ಲಿ ನಿಲ್ಲದ ಮಳೆಯ ಆರ್ಭಟ: ಅಲ್ಲಲ್ಲಿ ಮನೆಗಳಿಗೆ ಹಾನಿ

ಚಿಕ್ಕಮಗಳೂರು: ಜಿಲ್ಲಾದ್ಯಂತ ಮುಂಗಾರು ಮಳೆಯ ಆರ್ಭಟ ರವಿವಾರವೂ ಮುಂದುವರಿದಿದ್ದು, ಭಾರೀ ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಲೆನಾಡು ಭಾಗದ ಹಲವು ಗ್ರಾಮಗಳಲ್ಲಿ ಭಾರೀ ಮಳೆಯಿಂದಾಗಿ ಹಲವು ಮನೆಗಳಿಗೆ ಹಾನಿಯಾಗಿದ್ದರೇ, ಅಲ್ಲಲ್ಲಿ ಭೂಕುಸಿತದಂತಹ ಪ್ರಾಕೃತಿಕ ವಿಕೋಪಗಳ ಸರಣಿ ಮುಂದುವರಿದಿದೆ.
ಜಿಲ್ಲೆಯ ಮಲೆನಾಡು ಭಾಗದ ಮೂಡಿಗೆರೆ, ಕೊಪ್ಪ, ಕಳಸ, ಶೃಂಗೇರಿ, ಎನ್.ಆರ್.ಪುರ ತಾಲೂಕುಗಳ ವ್ಯಾಪ್ತಿಯಲ್ಲಿ ರವಿವಾರವೂ ಧಾರಾಕಾರ ಮಳೆಯಾಗಿದ್ದು, ನಿರಂತರ ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಲೆನಾಡು ಭಾಗದಲ್ಲಿ ಹರಿಯುವ ಭದ್ರಾ, ತುಂಗಾ, ಹೇಮಾವತಿ ಸೇರಿದಂತೆ ಸಣ್ಣಪುಟ್ಟ ಹಳ್ಳಕೊಳ್ಳಗಳೂ ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಕೆಲ ಗ್ರಾಮಗಳಲ್ಲಿ ನದಿ, ಹಳ್ಳಗಳ ನೆರೆ ನೀರು ಕಾಫಿ, ಅಡಿಕೆ, ಭತ್ತದ ಗದ್ದೆಗಳಿಗೆ ನುಗ್ಗಿ ಅಪಾರ ನಷ್ಟ ಸಂಭವಿಸಿದೆ. ಭಾರೀ ಮಳೆಯಿಂದಾಗಿ ಅಲ್ಲಲ್ಲಿ ಹಲವು ಮನೆಗಳಿಗೆ ಹಾನಿಯಾಗಿದ್ದರೇ, ಭೂ ಕುಸಿತದಿಂದಾಗಿ ಹಲವು ಗ್ರಾಮಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಜಿಲ್ಲೆಯ ಕಳಸ ತಾಲೂಕಿನ ಹೊರನಾಡು ಗ್ರಾಪಂ ವ್ಯಾಪ್ತಿಯಲ್ಲಿರುವ ಕವನಹಳ್ಳ ಗ್ರಾಮದಲ್ಲಿ ಶನಿವಾರ ರಾತ್ರಿ ಸುರಿದ ಮಳೆಯಿಂದಾಗಿ ಯಶೋಧ ಎಂಬವರ ಮನೆಯ ಹಿಂಬದಿಯಲ್ಲಿ ಭೂ ಕುಸಿತ ಸಂಭವಿಸಿದೆ. ಭೂ ಕುಸಿತದಿಂದಾಗಿ ಧರೆಯ ಮಣ್ಣು ಯಶೋಧ ಅವರ ಮನೆಯ ಹಿಂಬದಿಯ ಗೋಡೆ ಮೇಲೆ ಉರುಳಿದ ಪರಿಣಾಮ ಗೋಡೆ ಕುಸಿದು ಮನೆ ಜಖಂಗೊಂಡಿದೆ. ಮೆನಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದು, ಕುಟುಂಬದ ಸದಸ್ಯರು ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಮನೆಯಲ್ಲಿದ್ದ ಸಾಮಗ್ರಿಗಳನ್ನು ಸ್ಥಳಾಂತರ ಮಾಡಿದ್ದು, ಈ ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಭೂಕುಸಿತ ಹೆಚ್ಚಾಗಿ ಮನೆ ಸಂಪೂರ್ಣವಾಗಿ ಮಣ್ಣುಪಾಲಾಗುವ ಭೀತಿ ಕುಟುಂಬಸ್ಥರದ್ದಾಗಿದೆ.
ಕಳಸ ಸುತ್ತಮುತ್ತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಕಳಸ-ಹೊರನಾಡು ಸಂಪರ್ಕದ ಹೆಬ್ಬಾಳೆ ಸೇತುವೆ ಮತ್ತೆ ಮುಳುಗಡೆಯಾಗುವ ಭೀತಿ ಎದುರಾಗಿದೆ. ಸೇತುವೆ ಮುಳುಗಡೆಗೆ ಅರ್ಧ ಅಡಿ ನೀರು ಬಾಕಿ ಇದ್ದು, ರವಿವಾರ ರಾತ್ರಿ ಮಳೆ ಹೆಚ್ಚಾದಲ್ಲಿ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಲ್ಲಲ್ಲಿ ಭಾರೀ ಮಳೆಯಾಗುತ್ತಿದ್ದು, ನಿರಂತರ ಮಳೆಯಿಂದಾಗಿ ಹೇಮಾವತಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ತಗ್ಗುಪ್ರದೇಶದಲ್ಲಿ ನದಿಯ ನೆರೆ ನೀರು ಭತ್ತ, ಕಾಫಿ, ಅಡಿಕೆ ತೋಟಗಳಿಗೆ ನುಗ್ಗಿ ಬೆಳೆ ಹಾನಿ ಸಂಭವಿಸಿದೆ.
ಉಳಿದಂತೆ ಕೊಪ್ಪ, ಎನ್.ಆರ್.ಪುರ, ಶೃಂಗೇರಿ ತಾಲೂಕು ವ್ಯಾಪ್ತಿಯಲ್ಲೂ ರವಿವಾರ ಉತ್ತಮ ಮಳೆಯಾಗಿದ್ದು, ಈ ತಾಲೂಕು ವ್ಯಾಪ್ತಿಯಲ್ಲಿ ರವಿವಾರ ಬೆಳಗ್ಗೆ ಸಾಧಾರಣ ಮಳೆಯಾಗಿದ್ದು, ಮಧ್ಯಾಹ್ನದ ಬಳಿಕ ಮಳೆ ಬಿರುಸುಗೊಂಡಿದೆ. ಶೃಂಗೇರಿ ಪಟ್ಟಣದಲ್ಲಿ ಹರಿಯುವ ತುಂಗಾ ನದಿ ಕೂಡ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಶೃಂಗೇರಿ ದೇವಾಲಯ ಸಮೀಪದ ಕಪ್ಪೆಶಂಕರ ಮಂಟಪ ತುಂಗಾ ನದಿ ನೀರಿನಲ್ಲಿ ಮುಳುಗಡೆಯಾಗಿದ್ದು, ದೇವಾಲಯ ಸಮೀಪದ ಗಾಂಧಿ ಮೈದಾನವೂ ತುಂಗಾ ನದಿಯ ನೆರೆ ನೀರಿನಲ್ಲಿ ಮುಳುಗಡೆಯಾಗುವ ಭೀತಿ ಎದುರಾಗಿದೆ.
ಚಿಕ್ಕಮಗಳೂರು ತಾಲೂಕಿನಾದ್ಯಂತ ರವಿವಾರ ಬೆಳಗ್ಗೆಯಿಂದ ಸಂಜೆವರೆಗೆ ಸಾಧಾರಣ ಮಳೆಯಾಗಿದ್ದು, ನಿರಂತರ ಮಳೆಯಿಂದಾಗಿ ಚಿಕ್ಕಮಗಳೂರು ನಗರದ ಶಂಕರಪುರ ಬಡಾವಣೆ ಹಾಗೂ ಹೊಸಕೋಟೆ, ಮಾರನಹಳ್ಳಿ ಗ್ರಾಮಗಳಲ್ಲಿ ತಲಾ ಒಂದೊಂದು ಮನೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ಕಡೂರು, ತರೀಕೆರೆ, ಅಜ್ಜಂಪುರ ತಾಲೂಕು ವ್ಯಾಪ್ತಿಯಲ್ಲೂ ರವಿವಾರ ಸಾಧಾರಣ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಜಿಲ್ಲಾದ್ಯಂತ ಸದ್ಯ ಭತ್ತದ ಗದ್ದೆಗಳಲ್ಲಿ ಕೃಷಿ ಚಟುವಟಿಕೆ, ನಾಟಿ ಕಾರ್ಯ ನಡೆಯುತ್ತಿದ್ದು, ನಿರಂತರ ಮಳೆ ಭತ್ತದ ಗದ್ದೆಗಳ ಕೃಷಿ ಚಟುವಟಿಕೆಗೆ ಅಡ್ಡಿಯುಂಟು ಮಾಡಿದೆ. ಕಾಫಿ, ಅಡಿಕೆ ತೋಟಗಳ ಕೃಷಿ ಕೆಲಸಕ್ಕೂ ನಿರಂತರ ಮಳೆ ತೊಂದರೆಯನ್ನುಂಟು ಮಾಡಿದೆ.






.jpg)
.jpg)

