ಕಾಮನ್‌ವೆಲ್ತ್ ಪದಕ ವಿಜೇತ ಗುರುರಾಜ್‌ಗೆ ಹುಟ್ಟೂರಿನಲ್ಲಿ ಅದ್ದೂರಿ ಸ್ವಾಗತ

ಕುಂದಾಪುರ: ಕಾಮನ್‌ವೆಲ್ತ್ ಕ್ರೀಡಾಕೂಟದ ಭಾರ ಎತ್ತುವ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಬಳಿಕ ತನ್ನ ಹುಟ್ಟೂರಿಗೆ ರವಿವಾರ ಆಗಮಿಸಿದ ಗುರುರಾಜ್ ಪೂಜಾರಿಗೆ ಸಂಭ್ರಮ ಸಡಗರದಿಂದ ಬರ ಮಾಡಿಕೊಳ್ಳಲಾಯಿತು.
ತಂದೆ ತಾಯಿ ಅಪ್ಪುಗೆಯ ಮೂಲಕ ಮಗನನ್ನು ಸ್ವಾಗತಿಸಿ, ಮನೆಯವರು ಗುರುರಾಜ್ ದಂಪತಿಗೆ ಆರತಿ ಎತ್ತಿ ಒಳಗೆ ಬರ ಮಾಡಿಕೊಂಡರು. ಇಡೀ ಮನೆಯಲ್ಲಿ ಸಡಗರ ಕಂಡುಬಂದರೆ, ಪಟಾಕಿ ಸಿಡಿಸಿ ಸಿಹಿ ಹಂಚಿ ಊರವರು, ಮನೆಯವರು ಸಂಭ್ರಮಿಸಿದರು.
ಶಾಸಕರಿಂದ ಸ್ವಾಗತ: ಹುಟ್ಟೂರಿಗೆ ಆಗಮಿಸುತ್ತಿದ್ದು ಗುರುರಾಜ್ ಅವರನ್ನು ವಂಡ್ಸೆ ನೆಂಪುವಿನಲ್ಲಿ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಸ್ವಾಗತಿಸಿ ಅಭಿನಂದಿಸಿದರು.
ಗುರುರಾಜ್ ನಮ್ಮೂರ ಹುಡುಗ ಎನ್ನುವುದಕ್ಕೆ ನಮಗೆ ಹೆಮ್ಮೆ. ಪ್ರಯತ್ನ ಪಟ್ಟರೆ ಗ್ರಾಮಿಣ ಭಾಗದ ವಿದ್ಯಾರ್ಥಿಗಳು ಸಾಧನೆ ಮಾಡುಬಹುದು ಎಂಬುದನ್ನು ಗುರುರಾಜ್ ಕಾಮನ್‌ವೆಲ್ತ್ ಪದಕ ಗೆಲ್ಲುವ ಮೂಲಕ ಸಾಬೀತು ಮಾಡಿದ್ದಾರೆ. ಮುಂದಿನ ಕಾಮನ್‌ವೆಲ್ತ್ ಸ್ಪರ್ಧೆಯಲ್ಲಿ ಚಿನ್ನದ ತರುವ ಎಲ್ಲಾ ಪ್ರಯತ್ನ ಮಾಡುವಂತಾಗಲಿ ಎಂದು ಹಾರೈಸಿದರು.
ಉಡುಪಿ ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಸಕ ಡಾ.ರೋಶನ್ ಕುಮಾರ್ ಶೆಟ್ಟಿ, ಕೊಲ್ಲೂರು ಪ್ರೌಢಶಾಲೆ ದೈಹಿಕ ಶಿಕ್ಷಕ ಸುಕೇಶ್ ಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಗುರುತಂದೆ ಮಹಾಬಲ ಪೂಜಾರಿ, ತಾಯಿ, ಪತ್ನಿ ಹಾಗೂ ಕುಟುಂಬದವರು ಹಾಜರಿದ್ದರು.
"ಇವತ್ತು ನಾವು ಎಲ್ಲಿಗೆ ಹೋದರು, ಅಲ್ಲಿ ನೋಡಿ ಗುರು ತಂದೆ ಬಂದರು ಅಂತ ಹೇಳುತ್ತಾರೆ. ನಿಮ್ಮ ಮಗ ದೇಶಕ್ಕಾಗಿ ಪದಕ ತಂದಿದ್ದಾನೆ ಹೇಳುವಾಗ ನನಗೆ ತುಂಬಾ ಖುಷಿ ಆಗುತ್ತದೆ. ನಾನು ಗುರುರಾಜ್ ತಂದೆ ಎಂದು ಹೇಳಿ ಕೊಳ್ಳುವುದಕ್ಕೆ ಹೆಮ್ಮೆ ಆಗುತ್ತದೆ. ಕಷ್ಟ ಇದ್ದರೂ ಮಗ ಎನು ಮಾಡಿದರೂ ಒಳ್ಳೆಯದಕ್ಕೆ ಮಾಡುತ್ತಾನೆ ಎಂದು ಗೊತ್ತಿತ್ತು. ಈಗ ಪದಕ ತರುವ ಮೂಲಕ ನಮ್ಮ ಹೆಸರನ್ನು ಎತ್ತರಕ್ಕೆ ಏರಿಸಿದ್ದಾನೆ".
-ಮಹಾಬಲ ಪೂಜಾರಿ, ಗುರುರಾಜ್ ಪೂಜಾರಿ ತಂದೆ







