ಮಳೆ-ಪ್ರವಾಹದಿಂದ ಹಾನಿ: ಕೇಂದ್ರಕ್ಕೆ ಪರಿಹಾರ ಕೋರಿ ಪ್ರಸ್ತಾವನೆ ಸಲ್ಲಿಸಲು ರಾಜ್ಯ ಸರಕಾರದ ಸಿದ್ಧತೆ

ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ತಿಂಗಳಿಂದ ಸುರಿಯುತ್ತಿರುವ ಮಳೆ(rain), ಪ್ರವಾಹ(flood) ಪರಿಸ್ಥಿತಿ ಹಿನ್ನೆಲೆಯಲ್ಲಿ ಸಂಭವಿಸಿರುವ ಹಾನಿಗೆ ಕೇಂದ್ರ ಸರಕಾರದಿಂದ ಪರಿಹಾರ ಕೋರಿ ಒಂದೆರಡು ದಿನಗಳಲ್ಲಿ ಪ್ರಸ್ತಾವನೆ ಸಲ್ಲಿಸಲು ರಾಜ್ಯ ಸರಕಾರ ಸಿದ್ಧತೆ ಮಾಡಿಕೊಂಡಿದೆ.
ಜೂನ್ ತಿಂಗಳಿಂದಲೇ ರಾಜ್ಯದ 21 ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದ್ದು, ಕೃಷಿ ಹಾಗೂ ತೋಟಗಾರಿಕೆಯ 1.30 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದ್ದು, 71ಮಂದಿ ಜೀವ ಹಾನಿಯಾಗಿದೆ. 500ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ.ಗ್ರಾಮೀಣ ಪ್ರದೇಶ ಹಾಗೂ ಮುಖ್ಯ ರಸ್ತೆಗಳು ಸೇರಿ 13ಸಾವಿರ ಕಿ.ಮೀ.ನಷ್ಟು ರಸ್ತೆ ಹಾನಿಗೊಳಗಾಗಿದೆ. ಸಾವಿರಕ್ಕೂ ಹೆಚ್ಚು ಸೇತುವೆಗಳು ಕೊಚ್ಚಿ ಹೋಗಿವೆ.
4ಸಾವಿರಕ್ಕೂ ಹೆಚ್ಚು ಶಾಲೆ, 200ಕ್ಕೂ ಹೆಚ್ಚು ಅಂಗನವಾಡಿ ಕಟ್ಟಡಗಳು ಭಾಗಶಃ ಅಥವಾ ಪೂರ್ಣ ಹಾನಿಗೊಳ ಗಾಗಿದ್ದು, 16 ಸಾವಿರಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಬಿದ್ದಿವೆ. ಒಂದೂವರೆ ಸಾವಿರಕ್ಕೂ ಹೆಚ್ಚು ವಿದ್ಯುತ್ ಪರಿವರ್ತಕಗಳು ದುರಸ್ತಿಯಾಗಿವೆ. ನಿರಂತರ ಮಳೆ ಹಿನ್ನೆಲೆಯಲ್ಲಿ ಬೆಳೆ ನಷ್ಟದ ಸಂಪೂರ್ಣ ಅಂದಾಜು ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಮಳೆ ನಿಂತ ಬಳಿಕ ಸಮಗ್ರ ವರದಿ ತಯಾರಿಸಿ ಕೇಂದ್ರ ಸರಕಾರಕ್ಕೆ ಸಲ್ಲಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ.
ಮಳೆ, ಪ್ರವಾಹದಿಂದ ಆಗಿರುವ ಹಾನಿಗೆ ತಾತ್ಕಲಿಕ ಪರಿಹಾರಕ್ಕಾಗಿ 200 ಕೋಟಿ ರೂ.ಗಳನ್ನು ರಾಜ್ಯ ಸರಕಾರ ಬಿಡುಗಡೆ ಮಾಡಿದೆ. ರಾಜ್ಯದ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 657ಕೋಟಿ ರೂ. ಹಣವಿದೆ. ಕೇಂದ್ರ ಸರಕಾರದ 650 ಕೋಟಿ ರೂ., ರಾಜ್ಯ ಸರಕಾರದ 150 ಕೋಟಿ ಸೇರಿ ಸುಮಾರು 800ಕೋಟಿ ರೂ.ಗಳನ್ನು ವಿಪತ್ತು ನಿರ್ವಹಣಾ ನಿಧಿಯನ್ನಾಗಿ ಕಾಯ್ದಿರಿಸಲಾಗಿದೆ. ಆದರೆ, ಇದು ಅತ್ಯಂತ ಕಡಿಮೆಯಾಗಿದ್ದು, ಹೆಚ್ಚಿನ ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಲು ಸರಕಾರ ನಿರ್ಧರಿಸಿದೆ.
ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಮಲೆನಾಡು ಭಾಗದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಬಯಲು ಸೀಮೆಯ ಹಾಸನ, ಮಂಡ್ಯ, ಮೈಸೂರು, ದಾವಣಗೆರೆ, ತುಮಕೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಭಾಗದ ಹುಬ್ಬಳ್ಳಿ-ಧಾರವಾಡ, ಹಾವೇರಿ, ಬೀದರ್, ಕಲಬುರಗಿ, ಬೆಳಗಾವಿ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ಗಂಭೀರ ಸ್ವರೂಪದ ಹಾನಿಯಾಗಿದೆ ಎಂದು ಅಂದಾಜು ಮಾಡಲಾಗಿದೆ.
ಇದನ್ನೂ ಓದಿ: "ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಪ್ರೋತ್ಸಾಹಧನ ತೀರಾ ಕಡಿಮೆ"







