ಮೃತಪಟ್ಟ ಅಭಿಮಾನಿ ಫಸಿ ಉದ್ದೀನ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಸಿದ್ದರಾಮಯ್ಯ

ಮೈಸೂರು: ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಅಮೃತ ಮಹೋತ್ಸವದಲ್ಲಿ ಭಾಗವಹಿಸಿ ವಾಪಾಸಾಗುವ ವೇಳೆ ಅಪಘಾತದಲ್ಲಿ ಮೃತಪಟ್ಟ ಸಿದ್ದರಾಮಯ್ಯ ಅವರ ಅಭಿಮಾನಿ ಫಸಿ ಉದ್ದೀನ್ ಅವರ ನಿವಾಸಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ ಮಾಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಹಡಗನಹಳ್ಳಿ ಗ್ರಾಮಕ್ಕೆ ರವಿವಾರ ಆಗಮಿಸಿದ ಸಿದ್ದರಾಮಯ್ಯ, ಅಭಿಮಾನಿ ಫಸಿ ಉದ್ದೀನ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಈ ವೇಳೆ ಫಸಿ ಉದ್ದೀನ್ ತಂದೆ ಮತ್ತು ಅವರ ಕುಟುಂಬದವರೊಂದಿಗೆ ಕೆಲ ಸಮಯ ಮಾತುಕತೆ ನಡೆಸಿ ನಿಮ್ಮ ಕಷ್ಟಕ್ಕೆ ನಾನು ಸದಾ ಇರುತ್ತೇನೆ ಎಂದು ಧೈರ್ಯ ತುಂಬಿದರು.
ಬಳಿಕ ಮಾತನಾಡಿದ ಸಿದ್ದರಾಮಯ್ಯ, ನಿಮ್ಮಅಭಿಮಾನಕ್ಕೆ ನಾನು ಚಿರರುಣಿ, ನಿಮ್ಮೆಲ್ಲಾ ಕಷ್ಟಗಳಲ್ಲಿ ನಾನು ಭಾಗಿಯಾಗುತ್ತೇನೆ. ಫಸಿ ಉದ್ದೀನ್ ಮಕ್ಕಳಿಗೆ ಸಹಾಯ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ವೆಂಕಟೇಶ್, ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.





