ಕೂಟದ ನಾಯಕರಿಗೆ ನೌಕರರ ಬಗ್ಗೆ ಕಳಕಳಿಯಿಲ್ಲ: ಸಾರಿಗೆ ಸಂಘಟನೆಗಳ ಆರೋಪ

ಸಾಂದರ್ಭಿಕ ಚಿತ್ರ
ಬೆಂಗಳೂರು: ಕೂಟದ ನಾಯಕರಿಗೆ ಸಾರಿಗೆ ನಿಗಮಗಳಲ್ಲಿ ದುಡಿಯುತ್ತಿರುವ ನೌಕರರ ಬಗ್ಗೆ ಯಾವುದೇ ಕಳಕಳಿ ಇಲ್ಲ ಹಾಗೂ ನೌಕರರಿಗೆ ಪರಿಹಾರ ಕೊಡಲು ಯಾವುದೇ ರೀತಿಯ ಒಪ್ಪಂದ ಬೇಕಾಗಿಲ್ಲ ಎಂದು ಸಾರಿಗೆ ನಿಗಮಗಳ ವಿವಿಧ ಸಂಘಟನೆಗಳು ಪ್ರಕಟನೆಯಲ್ಲಿ ತಿಳಿಸಿವೆ.
ಆ.2ರಂದು ನಗರದ ಎಐಟಿಯುಸಿ ಕಚೇರಿಯಲ್ಲಿ ಕೆಎಸ್ಆರ್ಟಿಸಿ ಸ್ಟಾಫ್ ವರ್ಕರ್ಸ್ ಫಡೇರೇಷನ್, ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಷನ್, ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಯುನೈಟೆಡ್ ಎಂಪ್ಲಾಯೀಸ್ ಯೂನಿಯನ್, ಕೆಎಸ್ಆರ್ಟಿಸಿ ಎಸ್ಸಿ ಮತ್ತು ಎಸ್ಟಿ ಎಂಪ್ಲಾಯೀಸ್ ಯೂನಿಯನ್ ಸಭೆ ನಡೆಸಿತ್ತು. ಆ ಸಭೆಯಲ್ಲಿ ಕೂಟದ ಸದ್ಯರು ವಜಾ ಆಗಿರುವ ಕಾರ್ಮಿಕರನ್ನೂ ಸಂಸ್ಥೆಗೆ ತೆಗೆದುಕೊಳ್ಳಬೇಕು. ಅದಾದ ಬಳಿಕ ಸರಕಾರಿ ನೌಕರರಿಗೆ ಸರಿಸಮಾನ ವೇತನವನ್ನು ನೀಡಬೇಕು ಎಂದು ಒತ್ತಾಯಿಸಿದರು. ಬಹುತೇಕ ಸಂಘಟನೆಗಳು ಮೊದಲು ವೇತನ ಹೆಚ್ಚಳಕ್ಕೆ ಆಧ್ಯತೆ ನೀಡಬೇಕು, ಜೊತೆಗೆ ಅಕ್ರಮವಾಗಿ ಶಿಕ್ಷೆಗೆ ಗುರಿಯಾಗಿರುವ ನೌಕರರನ್ನು ವಾಪಸ್ಸು ತರಬೇಕು ಎಂದು ಅಭಿಪ್ರಾಯಪಟ್ಟವು. ಆದರೆ ಕೂಟವು ಇದನ್ನು ನಿರಾಕರಿಸಿದೆ.
ಇತರೆ ಸಂಘಟನೆಗಳು ತಾಳ್ಮೆಯಿಂದ ವರ್ತಿಸಿದರೂ, ಕೂಟದ ಪ್ರತಿನಿಧಿಗಳು ಸಭೆಯಲ್ಲಿ ಗದ್ದಲವನ್ನು ಸೃಷ್ಟಿಸಿದ್ದಾರೆ. ಕೂಗಾಡುತ್ತಾ ಸಭೆಯಿಂದ ಹೊರಬಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಎಐಟಿಯುಸಿ ಹಾಗೂ ಅದರ ಅಧ್ಯಕ್ಷರ ವಿರುದ್ಧ ದಿಕ್ಕಾರ ಕೂಗಿದ್ದಾರೆ. ಸಭೆಯ ನಿರ್ಧಾರಗಳ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ. ಕೂಟದ ನಾಯಕರಿಗೆ ಸಾರಿಗೆ ನಿಗಮಗಳ ನೌಕರರ ಬಗ್ಗೆ ಯಾವುದೇ ಕಳಕಳಿಯಿಲ್ಲ ಮತ್ತು ಅವರಿಗೆ ಪರಿಹಾರ ಕೊಡಲು ಯಾವುದೇ ರೀತಿಯ ಒಪ್ಪಂದ ಬೇಕಿಲ್ಲ. ಈ ನಾಯಕತ್ವವು ತನ್ನ ಸ್ವಾರ್ಥಕ್ಕಾಗಿ ಕಾರ್ಮಿಕರ ಹಿತಾಸಕ್ತಿಗಳನ್ನು ಹಾಗೂ ಸಂಸ್ಥೆಯನ್ನು ನಾಶ ಮಾಡಲು ಹೊರಟಿದೆ ಎಂದು ಇತರೆ ಸಂಘಟನೆಗಳು ಆರೋಪಿಸಿವೆ.







