ಎಂಜಿನಿಯರಿಂಗ್ ವಿದ್ಯಾರ್ಥಿ ವಿರುದ್ಧ ಐಸಿಸ್‌ಗೆ ಹಣ ಸಂಗ್ರಹಿಸಿದ ಆರೋಪ: ಕುಟುಂಬದ ನಿರಾಕರಣೆ
\
ಹೊಸದಿಲ್ಲಿ: ಐಸಿಸ್‌ಗೆ ಹಣ ಸಂಗ್ರಹಿಸಿದ ಆರೋಪದಲ್ಲಿ ಆಗ್ನೇಯ ದಿಲ್ಲಿಯಿಂದ ಎಂಜಿನಿಯರಿಂಗ್‌ನ ಪ್ರಥಮ ವರ್ಷದ ವಿದ್ಯಾರ್ಥಿಯೋರ್ವನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶನಿವಾರ ಬಂಧಿಸಿದೆ.
ಆದರೆ, ರಾಷ್ಟ್ರೀಯ ತನಿಖಾ ಸಂಸ್ಥೆಯ ಈ ಆರೋಪವನ್ನು ಆತನ ಕುಟುಂಬ ನಿರಾಕರಿಸಿದೆ.
ಮೊಹ್ಸಿನ್ ಅಹ್ಮದ್ ಉಗ್ರವಾದತ್ತ ಆಕರ್ಷಿತನಾಗಿದ್ದು, ಜಾಗತಿಕ ಭಯೋತ್ಪಾದಕ ಗುಂಪಿಗೆ ಹಣ ಸಂಗ್ರಹಿಸುತ್ತಿದ್ದ ಹಾಗೂ ಕ್ರಿಪ್ಟೋ ಕರೆನ್ಸಿ ಬಳಸಿ ವಿವಿಧ ದೇಶಗಳಿಂದ ಸಿರಿಯಾಕ್ಕೆ ಹಣ ರವಾನಿಸುತ್ತಿದ್ದ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ರವಿವಾರ ತಿಳಿಸಿದೆ.
ಈ ಆರೋಪವನ್ನು ನಿರಾಕರಿಸಿರುವ ಮೊಹ್ಸಿನ್ ಕುಟುಂಬ, ಈ ಪ್ರತಿಪಾದನೆಯನ್ನು ನಾವು ನ್ಯಾಯಾಲಯದಲ್ಲಿ ಪ್ರಶ್ನಿಸಲಿದ್ದೇವೆ ಎಂದಿದೆ.
‘‘ಆತ ಹಣ ಸಂಗ್ರಹಿಸುವುದಾಗಿದ್ದರೆ, ಆತನಲ್ಲಿ ಸಾಕಷ್ಟು ಹಣ ಇರಬೇಕಿತ್ತು. ಮೊನ್ನೆ ಆತ ಕೋಡಿಂಗ್ ಕೋರ್ಸ್ ಮಾಡಲು 4,000 ರೂ. ನೀಡುವಂತೆ ನನಗೆ ಸಂದೇಶ ರವಾನಿಸಿದ್ದ’’ ಎಂದು ಮೊಹ್ಸಿನ್ ಅವರ ಓರ್ವ ಸಹೋದರಿ ಹೇಳಿದ್ದಾರೆ.
‘‘ಆತ ತುಂಬಾ ಪರೋಪಕಾರಿ. ಆತ ಸಮಾಜ ಸೇವೆ ಮಾಡುತ್ತಿದ್ದ. ದೇಣಿಗೆ ಸಂಗ್ರಹಿಸುತ್ತಿದ್ದ. ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಬಡವರಿಗೆ ಆಹಾರ ಧಾನ್ಯ ವಿತರಿಸಿದ್ದ’’ ಎಂದು ಅವರು ಹೇಳಿದ್ದಾರೆ.
‘‘ಈ ಆರೋಪ ಸಂಪೂರ್ಣ ಸುಳ್ಳು. ನಾವು ಅವರನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಿದ್ದೇವೆ. ತಾನು ಏನು ಮಾಡುತ್ತಿದ್ದೇನೆ ಎಂಬುದು ಕೂಡ ಅವನಿಗೆ ತಿಳಿದಿರಲಿಕ್ಕಿಲ್ಲ. ಎಂಜಿನಿಯರಿಂಗ್ ಪರೀಕ್ಷೆಯನ್ನು ಎರಡನೇ ಪ್ರಯತ್ನದಲ್ಲಿ ಆತ ಉತ್ತೀರ್ಣನಾಗಿದ್ದಾನೆ. ನನ್ನ ಸಹೋದರ ಮುಗ್ದ ಹಾಗೂ ನಿಷ್ಕಪಟಿ. ಆತನಿಗೆ ಐಸಿಸ್ ಬಗ್ಗೆ ತಿಳಿದಿದೆ ಎಂದು ನಾನು ಭಾವಿಸಲಾರೆ’’ ಎಂದು ಅವರು ಹೇಳಿದ್ದಾರೆ.
‘‘ಆತ ದಿಲ್ಲಿಗೆ ಬಂದಿರುವುದೇ ಜುಲೈ 12ರಂದು. ಈಗ ಆತ ತನ್ನ ಗೆಳೆಯ ಹಾಗೂ ಸೋದರ ಸಂಬಂಧಿಯೊಂದಿಗೆ ದಿಲ್ಲಿಯ ಬಾಟ್ಲಾ ಹೌಸ್ ಪ್ರದೇಶದಲ್ಲಿ ವಾಸಿಸುತ್ತಿದ್ದಾನೆ ಹಾಗೂ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ಪಡೆಯುತ್ತಿದ್ದಾನೆ’’ ಎಂದು ಮೊಹ್ಸಿನ್ ತಾಯಿ ಹೇಳಿದ್ದಾರೆ.
ಐಸಿಸ್ ಆನ್‌ಲೈನ್ ಹಾಗೂ ಮೇಲ್ಮಟ್ಟದ ಚಟುವಟಿಕೆಗಳ ವಿರುದ್ಧ ಜೂನ್ 25ರಂದು ದಾಖಲಿಸಲಾಗಿದ್ದ ಪ್ರಕರಣದ ಹಿನ್ನೆಲೆಯಲ್ಲಿ ಎನ್‌ಐಎಯ ಶೋಧ ತಂಡ ಮೊಹ್ಸಿನ್ ಅಹ್ಮದ್ ಅವರನ್ನು ಶನಿವಾರ ಬಂಧಿಸಿತ್ತು ಎಂದು ಎನ್‌ಐಎಯ ವಕ್ತಾರ ತಿಳಿಸಿದ್ದಾರೆ.
‘‘ಅಹ್ಮದ್ ಉಗ್ರವಾದಿಯಾಗಿದ್ದ ಹಾಗೂ ಐಸಿಸ್‌ನ ಸಕ್ರಿಯ ಸದಸ್ಯನಾಗಿದ್ದ. ಭಾರತ ಹಾಗೂ ವಿದೇಶದಲ್ಲಿರುವ ಸಹಾನುಭೂತಿ ಉಳ್ಳವರಿಂದ ಐಸಿಸ್‌ಗೆ ಹಣ ಸಂಗ್ರಹಿಸುವುದರಲ್ಲಿ ಭಾಗಿಯಾದ ಆರೋಪದಲ್ಲಿ ಆತನನ್ನು ಬಂಧಿಸಲಾಗಿದೆ’’ ಎಂದು ಅವರು ತಿಳಿಸಿದ್ದಾರೆ.







