15ರ ಹರೆಯದ ತಮಿಳುನಾಡಿನ ಪ್ರಣವ್ ವೆಂಕಟೇಶ್ ಇದೀಗ ಗ್ರ್ಯಾಂಡ್ಮಾಸ್ಟರ್

ಪ್ರಣವ್ ವೆಂಕಟೇಶ್
ಮಾಮಲ್ಲಾಪುರಂ: ಚೆನ್ನೈನ ಡಿ.ಗುಕೇಶ್ ಮತ್ತು ಆರ್.ಪ್ರಜ್ಞಾನಂದ ಅವರು ಅಮೋಘ ಸಾಧನೆಯೊಂದಿಗೆ ಇಲ್ಲಿ ನಡೆಯುತ್ತಿರುವ 44ನೇ ಚೆಸ್ ಒಲಿಂಪಿಯಾಡ್ನಲ್ಲಿ ಗಮನ ಸೆಳೆದರೆ, ಅವರ ಶಾಲಾ ಸಹಪಾಠಿ ಪ್ರಣವ್ ವೆಂಕಟೇಶ್ ಎಂಬ 15ರ ಬಾಲಕ ಸದ್ದಿಲ್ಲದೇ ಗ್ರ್ಯಾಂಡ್ಮಾಸ್ಟರ್ ಪಟ್ಟಕ್ಕೇರುವ ಮೂಲಕ ಗಮನ ಸೆಳೆದಿದ್ದಾರೆ.
ವೇಲಮ್ಮಾಳ್ ಶಾಲೆಯ ಈ ಪೋರ ರವಿವಾರ ರೊಮಾನಿಯಾದಲ್ಲಿ ಲಿಂಪೇಡಿಯಾ ಓಪನ್ ಗೆಲ್ಲುವ ಮೂಲಕ ಭಾರತದ 75ನೇ ಗ್ರ್ಯಾಂಡ್ಮಾಸ್ಟರ್ ಆಗಿ ದಾಖಲೆಗೆ ಸೇರಿದ್ದಾರೆ.
ತಮಿಳುನಾಡಿನ 27ನೇ ಗ್ರ್ಯಾಂಡ್ಮಾಸ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪ್ರಣವ್, 2021ರ ಸೆರ್ಬಿಯಾ ಓಪನ್ನಲ್ಲಿ ಜಿಎಂ ಹಾದಿಯ ಮೊದಲ ಘಟ್ಟವನ್ನು ಗೆದ್ದಿದ್ದು, ಈ ವರ್ಷದ ಜೂನ್ನಲ್ಲಿ ಬುಡಾಪೆಸ್ಟ್ ನಲ್ಲಿ ನಡೆದ ವೆಝೆಕೆಪೊ ಜಿಎಂ ರೌಂಡ್ ರಾಬಿನ್ ಟೂರ್ನಿಯಲ್ಲಿ ಎರಡನೇ ಹಂತ ಗೆದ್ದಿದ್ದರು.
ಮೂರನೇ ಹಾಗೂ ಅಂತಿಮ ಜಿಎಂ ಪಟ್ಟವನ್ನು ರವಿವಾರ ಏಳು ಸುತ್ತಿನಲ್ಲಿ ಪೂರ್ಣ ಏಳು ಅಂಕ ಪಡೆಯುವ ಮೂಲಕ ಸಂಪಾದಿಸಿದ್ದಾರೆ. "ಟೂರ್ನಿ ಗೆಲ್ಲುವ ಮೂಲಕ ಮತ್ತು ಗ್ರ್ಯಾಂಡ್ಮಾಸ್ಟರ್ ಆಗಿ ಮನೆಗೆ ತೆರಳಲು ಅತೀವ ಸಂತಸವಾಗುತ್ತಿದೆ. ಇದು ನನ್ನ ಪಯಣದ ಆರಂಭ" ಎಂದು ಪ್ರಣವ್ ಪ್ರತಿಕ್ರಿಯಿಸಿದ್ದಾರೆ.
2013-14ರಲ್ಲಿ ಚೆಸ್ ಜಗತ್ತಿಗೆ ಕಾಲಿಟ್ಟ ಪ್ರಣವ್ ಇದುವರೆಗೂ ನಿಯತವಾಗಿ ಸಾಧನೆ ಮಾಡುತ್ತಾ ಮುನ್ನಡೆದಿದ್ದಾರೆ. 2019ರಲ್ಲಿ ರಾಜ್ಯ ಚಾಂಪಿಯನ್ಶಿಪ್ ಗೆದ್ದು ಕಳೆದ ವರ್ಷ ಕೂಡಾ ಈ ಸಾಧನೆ ಪುನರಾವರ್ತಿಸಿದ್ದರು.







