ಆತ ನನ್ನಂತೆ ಮೇಸ್ತ್ರಿಯಾಗುವುದು ನನಗೆ ಇಷ್ಟವಿರಲಿಲ್ಲ: ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದ ನದೀಮ್ ಅರ್ಷದ್ ತಂದೆ

Photo: Twitter/Tribhuwanchauh1
ಬರ್ಮಿಂಗ್ಹ್ಯಾಮ್: ರವಿವಾರ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದು ವಿಶ್ವ ದರ್ಜೆಯ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತನ್ನ 90.18 ಮೀ ದೂರದ ಎಸೆತದೊಂದಿಗೆ, ನದೀಮ್ ಭಾರತದ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಕೂಡ ಹೊಂದಿರದ ದಾಖಲೆಯನ್ನು ಸೃಷ್ಟಿಸಿದ್ದಾರೆ (ನೀರಜ್ ಚೋಪ್ರಾ ಅವರ ಅತ್ಯುತ್ತಮ ಎಸೆತ 89.94 ಮೀ.). ಗಾಯದ ಕಾರಣ ಚೋಪ್ರಾ ಈ ಬಾರಿಯ ಸ್ಪರ್ಧೆಯಿಂದ ಹಿಂದೆ ಸರಿದಿದ್ದು, ಮುಂಬರುವ ದಿನಗಳಲ್ಲಿ ಈ ಇಬ್ಬರ ನಡುವೆ ಆರೋಗ್ಯಕರ ಪೈಪೋಟಿ ತೀವ್ರಗೊಳ್ಳುವ ನಿರೀಕ್ಷೆಯಿದೆ.
ವಿಶ್ವ ಚಾಂಪಿಯನ್ಶಿಪ್ ನ ಚಿನ್ನದ ಪದಕ ವಿಜೇತ ಗ್ರೆನಡಾದ ಆಂಡರ್ಸನ್ ಪೀಟರ್ಸ್ ಅವರನ್ನು ಹಿಂದಿಕ್ಕಿದ ಅರ್ಷದ್ ನದೀಮ್ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಪೀಟರ್ಸ್ ಅವರು 88.64 ಮೀ ಎಸೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಪಾಕಿಸ್ತಾನದ ಪಂಜಾಬ್ನ ಮಿಯಾನ್ ಚನ್ನು ಪಟ್ಟಣವು ಈ ಐತಿಹಾಸಿಕ ಕ್ಷಣವನ್ನು ಸ್ಮೃತಿಪಟಲದಲ್ಲಿ ಇರಿಸಲು ತಡರಾತ್ರಿವರೆಗೂ ಎಚ್ಚರದಲ್ಲಿತ್ತು. ವೃತ್ತಿಯಲ್ಲಿ ಮೇಸ್ತ್ರಿಯಾಗಿರುವ ನದೀಮ್ ತಂದೆ ಮುಹಮ್ಮದ್ ಅಶ್ರಫ್, ತಮ್ಮ ಮಗನ ವೃತ್ತಿಜೀವನದ ಅತಿದೊಡ್ಡ ಕ್ಷಣವನ್ನು ವೀಕ್ಷಿಸಲು ಕಾತುರರಾಗಿದ್ದರು.
ಜಾವೆಲಿನ್ ಪಟು ನದೀಮ್ ಸಾಧನೆಗೆ ತನ್ನ ತಂದೆಯ ನೆಚ್ಚಿನ ಕ್ರೀಡೆಯಾದ ಪಾಕಿಸ್ತಾನದ ಅತ್ಯಂತ ಜನಪ್ರಿಯ ಗ್ರಾಮೀಣ ಕ್ರೀಡೆಯಾದ ನೆಜಾಬಾಜಿ - ಟೆಂಟ್ ಪೆಗ್ಗಿಂಗ್ ನೊಂದಿಗೆ ಸಾಕಷ್ಟು ಸಂಬಂಧವಿದೆ. ಅವರ ಪಟ್ಟಣದ ಬಹುಪಾಲು ಗಂಡಸರಂತೆ ನದೀಮ್ ತಂದೆಯು ನೆಜಾಬಾಜಿ ಕ್ರೀಡೆ ಅಭ್ಯಾಸ ಮಾಡುತ್ತಿದ್ದರು. ಕುದುರೆ ಸವಾರಿಯೊಂದಿಗೆ ಈಟಿ ಬಳಕೆಯು ಅಷ್ಟೇ ಪ್ರಮುಖವಾಗಿರುವ ಈ ಕ್ರೀಡೆಯು ಅಲ್ಲಿನ ಗಂಡಸರ ಧೈರ್ಯ ಪ್ರದರ್ಶಿಸುವ ಆಟವಾಗಿದೆ. ಇದನ್ನು ವೀಕ್ಷಿಸಲು ತಂದೆಯೊಂದಿಗೆ ನದೀಮ್ ಕೂಡಾ ಮೈದಾನಕ್ಕೆ ಹೋಗುತ್ತಿದ್ದರು. ಕ್ರಮೇಣ ತನ್ನ ತಂದೆಯ ಒತ್ತಾಯದ ಮೇರೆಗೆ, ನದೀಮ್ ಕೂಡಾ ನೆಜಾಬಾಜಿ ಆಟದ ತರಬೇತಿಯನ್ನು ಪ್ರತಿದಿನ ಪಡೆಯುತ್ತಿದ್ದರು. ಈ ಅಭ್ಯಾಸವು ನದೀಮ್ ರಿಗೆ ವಿವಿಧ ಹೊರಾಂಗಣ ಕ್ರೀಡೆಗಳಿಗೆ ತಮ್ಮನ್ನು ಒಡ್ಡುವಂತೆ ಮಾಡಿತ್ತು.
ಅಲ್ಲಿಂದ, ಶೀಘ್ರದಲ್ಲೇ ಟೇಪ್-ಬಾಲ್ ಕ್ರಿಕೆಟ್ ಆಟಕ್ಕೆ ಬದಲಿಸಿಕೊಳ್ಳುತ್ತಾರೆ ನದೀಮ್. ಇದು ಶಾಲೆಯ ಅಥ್ಲೆಟಿಕ್ಸ್ ಈವೆಂಟ್ ಆಗಿದ್ದು, ಅಲ್ಲಿ ಎತ್ತರದವನಾಗಿದ್ದ ನದೀಮ್ ನ ಜಾವೆಲಿನ್ ಥ್ರೋ ಪ್ರತಿಭೆಯನ್ನು ಗುರುತಿಸಲಾಯಿತು. ಕೋಚ್ ರಶೀದ್ ಅಹ್ಮದ್ ಸಾಕಿ ಅವರ ಅಡಿಯಲ್ಲಿ ನದೀಮ್ ಈಟಿ ಎಸೆಯಲು ತರಬೇತಿ ಪಡೆದರು.
ಎಂಟು ಮಂದಿ ಒಡಹುಟ್ಟಿದವರೊಂದಿಗೆ ಮೂರನೇ ಹಿರಿಯವನಾಗಿರುವ ನದೀಮ್ ಗೆ ಅವರ ತಂದೆ ಯಾವಾಗಲೂ ಹಾಲು ಮತ್ತು ತುಪ್ಪ ಸಿಗುವಂತೆ ನೋಡಿಕೊಳ್ಳುತ್ತಿದ್ದರು. ಅಷ್ಟು ಮಾತ್ರಕ್ಕೆ ಅವರು ತಮ್ಮ ಕ್ರೀಡಾಪಟು ಮಗನಿಗೆ ಬೆಂಬಲವನ್ನು ನೀಡುತ್ತಿದ್ದರು. "ಆ ಸಮಯದಲ್ಲಿ ನಾನು ಗುತ್ತಿಗೆ ಕಾರ್ಮಿಕನಾಗಿದ್ದೆ, ದಿನಕ್ಕೆ 400-500 ಗಳಿಸುತ್ತಿದ್ದೆ, ಆ ಗಳಿಕೆಯಿಂದ ಎಲ್ಲಾ ಮಕ್ಕಳನ್ನು ಚೆನ್ನಾಗಿ ನೋಡುವುದು ಕಷ್ಟಕರವಾಗಿತ್ತು. ಆದರೆ ನದೀಮನಿಗೆ ಹಾಲು ತುಪ್ಪ ಸಿಗುವಂತೆ ನಾನು ನೋಡಿಕೊಂಡೆ. ಅವನು ನನ್ನಂತೆ ಕೆಲಸ ಮಾಡುವುದು ನನಗೆ ಇಷ್ಟವಿರಲಿಲ್ಲ, ಅವನು ಉತ್ತಮ ಜೀವನವನ್ನು ನಡೆಸಬೇಕೆಂದು ನಾನು ಯಾವಾಗಲೂ ಬಯಸುತ್ತೇನೆ, ಅದನ್ನು ಆತ ತನ್ನ ಆಟದಲ್ಲಿ ಪ್ರದರ್ಶಿಸಿದ್ದಾನೆ, ”ಎಂದು ತಂದೆ ಹೇಳುತ್ತಾರೆ.
ಜಾವೆಲಿನ್ ಎಸೆತವನ್ನು ಗಂಭೀರವಾಗಿ ಮುಂದುವರಿಸಲು ಆರಂಭಿಸಿದಾಗ ನದೀಮ್ ಸಾಧಾರಣ ದೂರಕ್ಕಷ್ಟೇ ಎಸೆಯುತ್ತಿದ್ದರು. ತನ್ನ ಕುಟುಂಬವನ್ನು ಪೋಷಿಸಲು ಸರ್ಕಾರಿ ಕೆಲಸವನ್ನು ಹುಡುಕುತ್ತಿದ್ದ ಅವರು ಪಾಕಿಸ್ತಾನ ನೀರು ಮತ್ತು ವಿದ್ಯುತ್ ಅಭಿವೃದ್ಧಿ ಪ್ರಾಧಿಕಾರ (WAPDA) ದ ಕ್ರೀಡಾ ಕೋಟಾದಲ್ಲಿ ಹಾಜರಾಗಿದ್ದರು. ಅಲ್ಲಿ ಅವರ 55 ಮೀ ಎಸೆತವು ಐದು ಬಾರಿ ಪಾಕಿಸ್ತಾನದ ರಾಷ್ಟ್ರೀಯ ಚಾಂಪಿಯನ್ ಮತ್ತು ಮಾಜಿ ಏಷ್ಯನ್ ಪದಕ ವಿಜೇತ ಜಾವೆಲಿನ್ ಎಸೆತಗಾರ ಸೈಯದ್ ಹುಸಿಯಾನ್ ಬುಖಾರಿ ಅವರ ಗಮನವನ್ನು ಸೆಳೆಯುತ್ತದೆ.
ಟ್ರಯಲ್ಸ್ ನಂತರ ನದೀಮ್ ಅವರನ್ನು ಕೋಚ್ ಭೇಟಿಯಾಗುತ್ತಾರೆ. ಲಾಹೋರ್ನ ವಿವಿಧ ಮೈದಾನಗಳಲ್ಲಿ ತರಬೇತಿ ನೀಡುವ ಬುಖಾರಿ ತರಬೇಟಿ ಮೇರೆಗೆ, ನದೀಮ್ ಎರಡು ತಿಂಗಳಲ್ಲಿ 60 ಮೀ ಗುರಿಯನ್ನು ದಾಟುತ್ತಾರೆ. ನದೀಮ್ ಮೇಲಿನ ಭರವಸೆಯ ಮೇರೆಗೆ ನದೀಮ್ಗೆ ಕ್ರೀಡಾ ಕೋಟಾ ಉದ್ಯೋಗಕ್ಕೆ ಅವಕಾಶ ನೀಡುವಂತೆ WAPDA ಯಲ್ಲಿನ ಉನ್ನತ ಅಧಿಕಾರಿಗಳನ್ನು ಬುಖಾರಿ ಒತ್ತಾಯಿಸುತ್ತಾರೆ.
“ನಾನು ಅರ್ಷದ್ ನದೀಮ್ ನನ್ನು ಮೊದಲ ಬಾರಿಗೆ ನೋಡಿದಾಗ, ಇಷ್ಟು ಚಿಕ್ಕ ವಯಸ್ಸಿನ ಅವನ ಬಲವಾದ ತೋಳುಗಳಿಂದ ನಾನು ಪ್ರಭಾವಿತನಾಗಿದ್ದೆ. ಅಲ್ಲದೆ ಅವನಲ್ಲಿ ಒಂದು ಕಿಡಿಯನ್ನು ನೋಡಿದೆ. ಆತ ಟ್ರಯಲ್ಸ್ನಲ್ಲಿ 55 ಮೀ ಎಸೆದಿದ್ದರೂ, ಸರಿಯಾದ ರೀತಿಯಲ್ಲಿ ತರಬೇತಿ ಪಡೆದರೆ, ಆತ ಸುಧಾರಿಸುತ್ತಾನೆ ಎಂದು ನನಗೆ ಖಚಿತವಾಗಿತ್ತು. ಹಾಸ್ಟೆಲ್ ಸೇರಿದ ಬಳಿಕ ಒಳ್ಳೆಯ ಡಯಟ್ ಸಿಕ್ಕಿತು. ಇದು ಆತನ ತರಬೇತಿ ತಂತ್ರವನ್ನು ಸುಧಾರಿಸಿತು. ಎರಡು ತಿಂಗಳೊಳಗೆ ಆತ 60 ಮೀ ಮತ್ತು ನಾಲ್ಕು ತಿಂಗಳ ನಂತರ, 18 ನೇ ವಯಸ್ಸಿನಲ್ಲಿ, ಪಾಕಿಸ್ತಾನ ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ 70.46 ಮೀ ಎಸೆಯುವ ಮೂಲಕ 70 ಮೀ ಗುರಿ ದಾಟಿದ, ”ಎಂದು ಕೋಚ್ ನದೀಮ್ ಅವರ ಆರಂಭಿಕ ದಿನಗಳನ್ನು ಮೆಲುಕು ಹಾಕುತ್ತಾರೆ.
"ನಾನು ನನ್ನ ಮೋಟಾರುಬೈಕಿನಲ್ಲಿ ಈಟಿಯನ್ನು ಹೊತ್ತುಕೊಂಡು ನದಿಯ ದಡ ಮತ್ತು ಮೈದಾನದ ಬಳಿ ತರಬೇತಿಗೆ ಹೋಗುವಾಗ ಜನರು 'ಈ ಕಂಬಗಳೊಂದಿಗೆ ನೀವು ಯಾವ ಕ್ರೀಡೆಯನ್ನು ಆಡುತ್ತೀರಿ?' ಎಂದು ನನ್ನನ್ನು ಕೇಳುವುದನ್ನು ನಾನು ನೋಡಿದ್ದೇನೆ. ಆ ಸಮಯದಲ್ಲಿ, ನಾನು ಭಾರತೀಯ ಚಾಂಪಿಯನ್ ರಮಣದೀಪ್ ಸಿಂಗ್ ಅವರ ಸ್ನೇಹಿತನಾಗಿದ್ದೆ. ಪಾಕಿಸ್ತಾನಿ ಯುವಕರು ಜಾವೆಲಿನ್ ಎಸೆತಗಾರನಾಗಲು ಬಯಸುವ ದಿನದ ಬಗ್ಗೆ ನಾನು ಯಾವಾಗಲೂ ಕನಸು ಕಾಣುತ್ತೇನೆ. ಅರ್ಷದ್ ಮತ್ತು ನಿಮ್ಮ (ಭಾರತೀಯರ) ಚಾಂಪಿಯನ್ ನೀರಜ್ ಚೋಪ್ರಾ ಅವರು ಕನಸನ್ನು ನನಸಾಗಿಸಲು ನಮಗೆ ಸಹಾಯ ಮಾಡಿದ್ದಾರೆ” ಎಂದು ಕೋಚ್ ಬುಖಾರಿ ಹೇಳುತ್ತಾರೆ.
2015 ರಲ್ಲಿ 70 ಮೀ ಮಾರ್ಕ್ ದಾಟಿದ ನಂತರದ ಮೂರು ವರ್ಷಗಳಲ್ಲಿ, 2018 ರಲ್ಲಿ ಜಕಾರ್ತಾದಲ್ಲಿ ನಡೆದ ಏಷ್ಯನ್ ಗೇಮ್ಸ್ನಲ್ಲಿ ಅರ್ಷದ್ 80.75 ಮೀ ಎಸೆಯುವ ಮೂಲಕ 80 ಮೀ ಗುರಿಯನ್ನು ದಾಟಿದರು. ಕಳೆದ ನಾಲ್ಕು ವರ್ಷಗಳಲ್ಲಿ ಅರ್ಷದ್ 85 ಮೀ ಮಾರ್ಕ್ ಅನ್ನು ನಾಲ್ಕು ಬಾರಿ ಅತ್ಯುತ್ತಮವಾಗಿ ದಾಟಿದ್ದಾರೆ. ಕಳೆದ ವರ್ಷ ಇರಾನ್ನಲ್ಲಿ ನಡೆದ ಇಮಾಮ್ ರೆಜಾ ಕಪ್ನಲ್ಲಿ 86.38 ಮೀ. ದೂರಕ್ಕೆ ನದೀಮ್ ಜಾವೆಲಿನ್ ಎಸೆದಿದ್ದಾರೆ.
ಅಲ್ಲಿ, ಮೊದಲ ಬಾರಿಗೆ ನದೀಮ್ ಮತ್ತು ನೀರಜ್ ಪರಸ್ಪರ ಸ್ಪರ್ಧಿಸಿದ್ದನ್ನು ನೆನಪಿಸಿಕೊಂಡ ಬುಖಾರಿ, “2016 ರಲ್ಲಿ ಗುವಾಹಟಿಯಲ್ಲಿ ನಡೆದ ಸೌತ್ ಏಷ್ಯನ್ ಗೇಮ್ಸ್ನಲ್ಲಿ ನೀರಜ್ ಮತ್ತು ನದೀಮ್ ಪರಸ್ಪರ ಸ್ಪರ್ಧಿಸಿದ್ದರು, ಅಲ್ಲಿ ನೀರಜ್ ಚಿನ್ನ ಮತ್ತು ಅರ್ಷದ್ ಕಂಚಿನ ಪದಕವನ್ನು ಗೆದ್ದರು. ನಂತರ, 2017 ರಲ್ಲಿ ಭುವನೇಶ್ವರದಲ್ಲಿ ನಡೆದ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಅವರು ಒಟ್ಟಿಗೆ ಸ್ಪರ್ಧಿಸಿದರು. ಪಾಕಿಸ್ತಾನ ಮತ್ತು ಭಾರತದ ಜಾವೆಲಿನ್ ಎಸೆತಗಾರರು ಚೆನ್ನಾಗಿ ಬೆಸೆದುಕೊಂಡಿದ್ದಾರೆ. ನಾವು ಪ್ರತಿಯೊಬ್ಬರೂ ಒಬ್ಬರನ್ನೊಬ್ಬರು ಗಮನಿಸುತ್ತೇವೆ. ಅರ್ಷದ್ ಹಾಗೂ ಚೋಪ್ರಾರನ್ನು ನೋಡುವಾಗಲೂ ಅದೇ ಆಗಿತ್ತು. ಜಕಾರ್ತದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಅರ್ಷದ್ ಕಂಚಿನ ಪದಕ ಗೆದ್ದಾಗ ಮತ್ತು ನೀರಜ್ ಚೋಪ್ರಾ ಅವರನ್ನು ಅಭಿನಂದಿಸಿದ್ದಾರೆ” ಎಂದು ಹೇಳಿದ್ದಾರೆ.
“ಜೂನಿಯರ್ ವಿಶ್ವ ಚಾಂಪಿಯನ್ನಲ್ಲಿ ಚಿನ್ನ ಗೆದ್ದ ನೀರಜ್ ಸಾಧನೆಯು ಅವರ ಸಂಪೂರ್ಣ ಕಠಿಣ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ. ನಾವು ಪಾಕಿಸ್ತಾನಿಗಳೂ ಅದನ್ನು ಪ್ರಶಂಸಿಸುತ್ತೇವೆ. ಟೋಕಿಯೊದಲ್ಲಿ ನೀರಜ್ ತನ್ನ ಅರ್ಹತಾ ಗುಂಪಿನಲ್ಲಿ ಅಗ್ರಸ್ಥಾನ ಪಡೆದಾಗ ಮತ್ತು ಅರ್ಷದ್ ಎರಡನೇ ಅರ್ಹತಾ ಗುಂಪಿನಲ್ಲಿ ಅಗ್ರಸ್ಥಾನ ಪಡೆದರು, ಆಗ ನೀರಜ್ ವರ್ಸಸ್ ಅರ್ಷದ್ ಬಗ್ಗೆಯೇ ಮಾತುಕತೆ ಇತ್ತು. ಇದನ್ನು ಸ್ಪರ್ಧೆ ಅಥವಾ ಆರೋಗ್ಯಕರ ಪೈಪೋಟಿ ಎಂದು ನೋಡಿದರೂ ಇದು ಯುವಕರಲ್ಲಿ ಜಾವೆಲಿನ್ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ” ಎಂದು ಬುಖಾರಿ ಹೇಳಿದ್ದಾರೆ.
ಕೃಪೆ: TheNewIndianExpress
These two athlete from Indian subcontinent Neeraj Chopra and Arshad Nadeem will going to dominate the entire world in Javelin. #arshadnadeem #NeerajChopra#CWG22 #JavelinThrow #CommonwealthGames2022 #GoldMedal pic.twitter.com/I5oyfBFpiZ
— Tribhuwan त्रिभुवन (@Tribhuwanchauh1) August 7, 2022
#CWG2022 #ArshadNadeem
— Express Sports (@IExpressSports) August 8, 2022
Watch CWG gold medalist Arshad Nadeem's 90 plus throw and World Champion and silver winner Anderson Peter's reaction.
READ: https://t.co/7335RmR8yT (@Nitinsharma631)
: (@thecgf)pic.twitter.com/NxhJGHgL6c
What a superb performance from Arshad Nadeem!
— Commonwealth Sport (@thecgf) August 7, 2022
He earns Pakistan their first track and field Gold after 60 years , setting precedence with a new Games record.
Congratulations @NOCPakistan #CommonwealthGames2022 | #B2022 pic.twitter.com/6H5YlKxeLg