ಮರಿಗೌಡರ ವಿಚಾರಧಾರೆಗಳನ್ನು ಬದುಕಲ್ಲಿ ಅಳವಡಿಸಿಕೊಳ್ಳಿ: ಭುವನೇಶ್ವರಿ

ಉಡುಪಿ, ಆ.8: ಡಾ.ಎಂ.ಹೆಚ್ ಮರಿಗೌಡರ ವಿಚಾರಧಾರೆಯನ್ನು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಹಾಗೂ ಕೃಷಿಕರು ಜೀವನದಲ್ಲಿ ಅಳವಡಿಸಿಕೊಂಡು ಅದರ ಲಾಭವನ್ನು ಪಡೆದುಕೊಳ್ಳುವಂತೆ ಉಡುಪಿ ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ ಹೇಳಿದ್ದಾರೆ.
ಸೋಮವಾರ ಮಣಿಪಾಲ ಶಿವಳ್ಳಿಯ ತೋಟಗಾರಿಕಾ ಇಲಾಖೆಯ ಆವರಣದಲ್ಲಿ ನಡೆದ ಡಾ.ಮರಿಗೌಡರ ೧೦೬ನೇ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜಿಸಲಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದರು.
ಮರಿಗೌಡರು ತೋಟಗಾರಿಕೆ ಇಲಾಖೆಯಲ್ಲಿ ಸಲ್ಲಿಸಿರುವ ನಿಸ್ವಾರ್ಥ ಸೇವೆ, ಶ್ರಮ, ತತ್ವ, ಆದರ್ಶಗಳನ್ನು ಇಲಾಖೆಯ ಅಧಿಕಾರಿಗಳು ತಮ್ಮ ಸಾರ್ವಜನಿಕ ಸೇವೆಯಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಮರಿಗೌಡರ ನೆನಪಿಗಾಗಿ ಶಿವಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ರೈತರಿಗೆ ನರ್ಸರಿ ಗಿಡಗಳನ್ನು ವಿತರಿಸಿ, ಕ್ಷೇತ್ರದಲ್ಲಿ ಉಡುಪಿ ಮಲ್ಲಿಗೆ ಗಿಡಗಳನ್ನು ನೆಡಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಹೇಮಂತ್ ಕುಮಾರ್, ಸಹಾಯಕ ತೋಟಗಾರಿಕೆ ನಿರ್ದೇಶಕ ವರುಣ ಕೆ.ಜೆ, ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.