ದೇಶದಲ್ಲಿ ಮುಂದಿನ ತಿಂಗಳು 5ಜಿ ಸೇವೆ ಆರಂಭ ಸಾಧ್ಯತೆ: ಮೊದಲ ಹಂತದಲ್ಲಿ ಬೆಂಗಳೂರು ಸೇರಿದಂತೆ 13 ನಗರಗಳಲ್ಲಿ ಆರಂಭ

ಹೊಸದಿಲ್ಲಿ: ದೇಶದಲ್ಲಿ ಮುಂದಿನ ತಿಂಗಳು 5ಜಿ ಸೇವೆ ಆರಂಭವಾಗುವ ಸಾಧ್ಯತೆ ಇದ್ದು, ಮೊದಲ ಹಂತದಲ್ಲಿ ಬೆಂಗಳೂರು ಸೇರಿದಂತೆ 13 ಸ್ಥಳಗಳಲ್ಲಿ ಈ ಸೇವೆ ಲಭ್ಯವಾಗಲಿದೆ.
ಪ್ರಮುಖ ಟೆಲಿಕಾಂ ಕಂಪೆನಿಗಳಾದ ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವಿಐ (ಈ ಹಿಂದೆ ವೊಡಾಫೋನ್-ಐಡಿಯಾ) ಈಗಾಗಲೇ ದೇಶದಲ್ಲಿ ತಮ್ಮ 5ಜಿ ಸೇವೆಯನ್ನು ಆರಂಭಿಸಲು ಹಾರ್ಡ್‌ವೇರ್ ಕೆಲಸದಲ್ಲಿ ನಿರತವಾಗಿವೆ.
ಈ ಹಿಂದೆ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಅವರು, ಈ ವರ್ಷದ ಅಂತ್ಯದ ಒಳಗೆ 5ಜಿ ಸೇವೆಗಳನ್ನು ಎಲ್ಲರಿಗೂ ಪರಿಚಯಿಸಲಾಗುವುದು ಎಂದು ಹೇಳಿದ್ದಾರೆ. ಆದರೆ, ಈಗ ಬಹಿರಂಗಗೊಂಡ ‘ಹಿಂದೂ’ ಹಾಗೂ ‘ಬ್ಯುಸಿನಸ್ ಲೈನ್’ನ ವರದಿ ಪ್ರಕಾರ ಸೆಪ್ಟಂಬರ್ 19 ರಂದು ನಡೆಯಲಿರುವ ಭಾರತದ ಮೊಬೈಲ್ ಸಮಾವೇಶ (ಐಎಂಸಿ)ದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 5ಜಿ ನೆಟ್‌ವರ್ಕ್ ಅನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಿದ್ದಾರೆ.
5ಜಿಯನ್ನು ಲೋಕಾರ್ಪಣೆಗೊಳಿಸುವ ದಿನಾಂಕವನ್ನು ಕೇಂದ್ರ ಸರಕಾರ ಇದುವರೆಗೆ ಅಧಿಕೃತವಾಗಿ ಘೋಷಿಸಿಲ್ಲ. ಆದರೆ, ಟೆಲಿಕಾಂ ಸಚಿವರು, 5ಜಿ ಬಿಡುಗಡೆ ಸರಿಸುಮಾರು ಅಕ್ಟೋಬರ್ ತಿಂಗಳಲ್ಲಿ ನಡೆಯಲಿದೆ ಎಂದಿದ್ದಾರೆ. ಅದು ಸರಿಸುಮಾರು ರಾಷ್ಟ್ರೀಯ ಮೊಬೈಲ್ ಕಾಂಗ್ರೆಸ್ ಸಮಾವೇಶದ ಸಂದರ್ಭವೇ ಆಗುತ್ತದೆ. ಆದುದರಿಂದ ಪ್ರಧಾನಿ ನರೇಂದ್ರ ಮೋದಿ ಅವರು 5ಜಿ ಸೇವೆಗಳ ಅರಂಭವನ್ನು ಮುಂದಿನ ತಿಂಗಳ ಅಂತ್ಯದಲ್ಲಿ ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ.
ಕೇಂದ್ರ ಸರಕಾರ ಇತ್ತೀಚೆಗೆ 5ಜಿ ತರಂಗ ಗುಚ್ಚದ ಹರಾಜನ್ನು ಪೂರ್ಣಗೊಳಿಸಿತ್ತು. ಅದು ಈಗಾಗಲೇ ಅನುಮೋದನೆ ಪ್ರಕ್ರಿಯೆಯಲ್ಲಿ ಇದೆ. ಬಿಡ್ ಮೂಲಕ ಟೆಲಿಕಾಂ ನೆಟ್‌ವರ್ಕ್‌ಗಳಿಗೆ ತರಂಗ ಗುಚ್ಛವನ್ನು ಮಂಜೂರು ಮಾಡಲಾಗಿತ್ತು. ಭಾರತದ 5ಜಿ ತರಂಗಗುಚ್ಛದ ಹರಾಜು ೧.5 ಲಕ್ಷ ಕೋಟಿ ಮೌಲ್ಯದ್ದಾಗಿದೆ. ಇದಲ್ಲದೆ, ಅಂದು ಹರಾಜು ಪ್ರಕ್ರಿಯೆಯಲ್ಲಿ ಮೂರು ಪ್ರಮುಖ ಟೆಲಿಕಾಂ ಕಂಪೆನಿಗಳಾದ ರಿಲಾಯನ್ಸ್ ಜಿಯೊ, ಏರ್‌ಟೆಲ್, ವಿಐ ಹಾಗೂ ಅದಾನಿ ಡಾಟಾ ನೆಟ್ ವರ್ಕ್ ಕೂಡ ಪಾಲ್ಗೊಂಡಿತ್ತು.
ಆಗಸ್ಟ್ ಅಂತ್ಯದ ಒಳಗೆ ಭಾರತದಲ್ಲಿ 5 ಜಿ ನೆಟ್‌ವರ್ಕ್ ಅನ್ನು ಆರಂಭಿಸಲಾಗುವುದು ಎಂದು ಭಾರ್ತಿ ಏರ್‌ಟೆಲ್ ಈಗಾಗಲೇ ಹೇಳಿದೆ. ಅಲ್ಲದೆ, ಅದು ಸ್ಯಾಮ್‌ಸಂಗ್, ನೋಕಿಯಾ ಹಾಗೂ ಎರಿಕ್ಸನ್‌ನಂತಹ ಕಂಪೆನಿಗಳೊಂದಿಗೆ ಪಾಲುದಾರತ್ವವನ್ನು ಘೋಷಿಸಿದೆ. ಇನ್ನೊಂದೆಡೆ ಇತರ ವರದಿಗಳು ರಿಲಾಯನ್ಸ್ ತನ್ನ 5ಜಿ ಸೇವೆಯನ್ನು ಆಗಸ್ಟ್ 15ರಂದು ಆರಂಭಿಸಲಿದೆ ಎಂದು ಹೇಳಿದೆ.
ಬೆಲೆಯ ದೃಷ್ಟಿಯಿಂದ ನೋಡಿದರೆ 5ಜಿಯ ಬೆಲೆ ಜಗತ್ತಿನ ಇತರ ಭಾಗಗಳಿಗೆ ಸ್ಪರ್ಧಾತ್ಮಕವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. 5ಜಿ ಸೇವೆ ಮೊದಲ ಹಂತದಲ್ಲಿ ಅಹ್ಮದಾಬಾದ್, ಬೆಂಗಳೂರು, ಚಂಡಿಗಢ, ಚೆನ್ನೈ, ದಿಲ್ಲಿ, ಗಾಂಧಿನಗರ, ಗುರುಗ್ರಾಮ, ಹೈದರಾಬಾದ್, ಜಾಮ್‌ನಗರ, ಕೋಲ್ಕತಾ, ಲಕ್ನೋ, ಮುಂಬೈ ಹಾಗೂ ಪುಣೆ ಸೇರಿದಂತೆ 13 ನಗರಗಳಲ್ಲಿ ಆರಂಭವಾಗಲಿದೆ.