ಟನ್ ಕಬ್ಬಿಗೆ 3.5 ಸಾವಿರ ನಿಗದಿಗೆ ಒತ್ತಾಯಿಸಿ ಆ.12ರಂದು ಹೆದ್ದಾರಿ ತಡೆ ಚಳವಳಿ: ಕುರುಬೂರು ಶಾಂತಕುಮಾರ್

ಮಂಡ್ಯ, ಆ.8: ಟನ್ ಕಬ್ಬಿಗೆ ಎಫ್.ಆರ್.ಪಿ. ದರ 3,500 ರೂ. ನಿಗದಿಗೆ ಒತ್ತಾಯಿಸಿ ಆ.12 ರಂದು ಬೆಳಗ್ಗೆ 11 ಗಂಟೆಗೆ ರಾಜ್ಯ, ರಾಷ್ಟ್ರೀಯ ಹೆದ್ದಾರಿ ತಡೆ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರಪ್ರದೇಶ ಸರಕಾರ ಟನ್ ಕಬ್ಬಿಗೆ 3,500 ರೂ. ನಿಗದಿ ಮಾಡಿದ್ದರೆ, ಕೇಂದ್ರ 3,050 ರೂ. ನಿಗದಿ ಮಾಡಿದೆ. ಸಕ್ಕರೆ ಇಳುವರಿಯನ್ನು 10ರಿಂದ 10.25ಕ್ಕೆ ಏರಿಕೆ ಮಾಡಿರುವುದರಿಂದ ಟನ್ ಕಬ್ಬಿಗೆ 75 ರೂ. ಕಡಿತವಾಗುತ್ತದೆ. ಕೇಂದ್ರ ಸರಕಾರ ಉದ್ದಿಮೆದಾರರ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಕಬ್ಬು ಬೆಳೆಗಾರರಿಗೆ ಅನ್ಯಾಯ ಮಾಡುತ್ತಿದೆ ಎಂದು ಕಿಡಿಕಾರಿದರು.
ಕಬ್ಬಿಗೆ ನ್ಯಾಯಯುತ ಮತ್ತು ಹೆಚ್ಚುವರಿ ಎಸ್‍ಎಪಿ ದರದರ ನಿಗದಿ ಮಾಡಬೇಕು. ಅತಿವೃಷ್ಟಿ ಬೆಳೆ ನಷ್ಟ ಪರಿಹಾರ ನೀಡಬೇಕು. ಸಮರ್ಪಕವಾಗಿ ರಸಗೊಬ್ಬರ ಪೂರೈಸಬೇಕು. ಮೊಸರು, ಮಜ್ಜಿಗೆ, ಬೆಲ್ಲ, ಕೃಷಿ ಉಪಕರಣಗಳು, ಹನಿ ನೀರಾವರಿ ಉಪಕರಣಗಳು, ರಸಗೊಬ್ಬರ, ಕೀಟನಾಶಕಗಳ ಮೇಲೆ ವಿಧಿಸಿರುವ ಜಿಎಸ್ಟಿ ರದ್ದುಗೊಳಿಸಬೇಕು, ರೈತರ ಸಾಲಮನ್ನಾ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಎಂ.ಬಿ. ಚೇತನ್, ಅತ ್ತಹಳ್ಳಿ ದೇವರಾಜ್, ಕೆ.ಆರ್.ಎಸ್. ರಾಮೇಗೌಡ ಹಾಗೂ ಮಹೇಶ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.