ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ; ಪೊಲೀಸರಿಂದ ಶಾಂತಿ ಸಭೆ

ಬೆಂಗಳೂರು, ಆ.9: ಚಾಮರಾಜಪೇಟೆಯ ಈದ್ಗಾ ಮೈದಾನ ವಿವಾದಕ್ಕೆ ಸಂಬಂಧಿಸಿದಂತೆ ಶಾಂತಿ ಸಭೆ ನಡೆಸಿದ ಪೊಲೀಸರು, ಕೋಮು ಸೌಹಾರ್ದತೆಗೆ ಧಕ್ಕೆಯಾಗುವ ಚಟುವಟಿಕೆಗಳಿಗೆ ಯಾವುದೇ ಆಸ್ಪದ ಕೊಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಇಲ್ಲಿನ ಚಾಮರಾಜಪೇಟೆ ಪೊಲೀಸ್ ಠಾಣೆಯ ಆವರಣದಲ್ಲಿ ಡಿಸಿಪಿ ಲಕ್ಷ್ಮಣ ನಿಂಬರಗಿ ನೇತೃತ್ವದಲ್ಲಿ ಹಿಂದೂಪರ ಸಂಘಟನೆಗಳ ಮುಖಂಡರೊಂದಿಗೆ ಶಾಂತಿ ಸಭೆ ನಡೆಸಿ, ಮೈದಾನ ಕುರಿತ ದೂರುಗಳನ್ನು ಆಲಿಸಿದರು.
ಇದೇ ವೇಳೆ ಪ್ರಸ್ತಾಪಿಸಿದ ಪೊಲೀಸರು, ಸಮಾಜದ ಸ್ವಾಸ್ಥ್ಯಕ್ಕೆ ಹಾನಿಯುಂಟು ಮಾಡುವ ಯಾವುದೇ ಚಟುವಟಿಕೆಗೆ ಆಸ್ಪದ ಕೊಡಬಾರದು. ಯಾವುದೇ ರೀತಿಯ ವಿವಾದ ಇದ್ದರೂ, ಕಾನೂನು ರೀತ್ಯಾ ಬಗೆಹರಿಸಿಕೊಳ್ಳಬೇಕು. ಈ ಸಂಬಂಧ ಸರಕಾರಕ್ಕೆ ಮನವಿ ಸಲ್ಲಿಸಲು ಅವಕಾಶವಿದೆ ಎಂದು ನುಡಿದರು.
ಇದಕ್ಕೂ ಮುನ್ನ ಹಿಂದೂ ಸಂಘಟನೆಗಳ ಸದಸ್ಯರು ಮಾತನಾಡಿ, ಈದ್ಗಾ ಮೈದಾನವೂ ಎಲ್ಲರಿಗೂ ಸೇರಿದೆ. ಇಲ್ಲಿ ರಾಷ್ಟ್ರಧ್ವಜ ಹಾರಿಸಲು ಅನುವು ಮಾಡಿಕೊಡಬೇಕು. ಜತೆಗೆ, ಬೇರೆಯವರಿಗೆ ಅವಕಾಶ ನೀಡಬಾರದು ಎಂದು ಒತ್ತಾಯ ಮಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಿಸಿಪಿ ಲಕ್ಷ್ಮಣ ನಿಂಬರಗಿ, ಇಂದು ಹಿಂದೂ ಸಂಘಟನೆ ಕರೆದು ಸಭೆ ಮಾಡಿದ್ದು, ನಾಳೆ(ಬುಧವಾರ) ಸ್ಥಳೀಯ ಮುಸ್ಲಿಮರ ಸಭೆ ನಡೆಸಲಿದ್ದೇವೆ. ಆನಂತರ, ಇಬ್ಬರ ಅಭಿಪ್ರಾಯ ಆಲಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದರು.
ವಿವಾದ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಯಾರೇ ಆಗಲಿ ಕೋಮು ದ್ವೇಷ ಬಿಂಬಿಸುವ ಸಂದೇಶಗಳನ್ನು ಹಂಚಿಕೆ ಮಾಡಬಾರದು. ಒಂದು ವೇಳೆ, ಅನಗತ್ಯ ಗೊಂದಲ ಸೃಷ್ಟಿಸಿದರೆ, ಕಾನೂನುರೀತ್ಯಾ ಕ್ರಮ ಕೈಗೊಳ್ಳಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.







