ಹುಬ್ಬಳ್ಳಿ: ಲಾಟರಿ ಗೆದ್ದ ವ್ಯಕ್ತಿಯ ಬದಲು ಸ್ನೇಹಿತನ ಅಪಹರಣ!

ಹುಬ್ಬಳ್ಳಿ: ಇಲ್ಲಿನ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಅಪಹರಣ ಕೊನೆಗೂ ಸುಖಾಂತ್ಯ ಕಂಡಿದೆ. ಆಗಸ್ಟ್ 6ರಂದು ವಿದ್ಯಾರ್ಥಿಯನ್ನು ಅಪಹರಿಸಿದ್ದ ಅಪಹಕರಣಕಾರರು ಭಾರಿ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಕೊನೆಗೆ ಏಳು ಮಂದಿ ಅಪಹರಣಕಾರರನ್ನು ಬಂಧಿಸಿ ವಿದ್ಯಾರ್ಥಿಯನ್ನು ಬಿಡುಗಡೆಗೊಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿ ಗೋಕುಲ ರಸ್ತೆಯಲ್ಲಿ ಕಾಲೇಜಿನಿಂದ ಮನೆಗೆ ಹೋಗುತ್ತಿದ್ದ ಮಂಟೂರರಸ್ತೆ ನಿವಾಸಿ ಗರೀಬ್ ನವಾಝ್ ಮುಲ್ಲಾ (21) ಎಂಬ ವಿದ್ಯಾರ್ಥಿಯನ್ನು ಅಪಹರಿಸಲಾಗಿತ್ತು. ಇದೀಗ ಆತನನ್ನು ಸುರಕ್ಷಿತವಾಗಿ ಮನೆಗೆ ಕರೆ ತರಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಅಪಹರಣದ ಬಳಿಕ ವಿದ್ಯಾರ್ಥಿಯ ಸಹೋದರ ಬೆಂಡಿಗೇರಿ ಠಾಣೆಯಲ್ಲಿ ದೂರು ನೀಡಿದ್ದರು. ಆರೋಪಿಗಳ ಬಂಧನಕ್ಕೆ ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಲಭು ರಾಮ್ ನಾಲ್ಕು ತಂಡ ರಚಿಸಿದ್ದರು.
ಪೊಲೀಸ್ ತಂಡ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ. ಅಪಹರಣಕ್ಕೆ ಒಳಗಾದ ವಿದ್ಯಾರ್ಥಿಯ ಸ್ನೇಹಿತ ತಾಳಿಕೋಟೆ ಮೂಲದ ದಿಲಾವರ್ ಎಂಬಾತ ಪೇಯಿಂಗ್ ಗೆಸ್ಟ್ ಆಗಿ ಹುಬ್ಬಳ್ಳಿಯಲ್ಲಿ ಪರೀಕ್ಷೆಗೆ ಸಜ್ಜಾಗುತ್ತಿದ್ದ. ಗರೀಬ್ ನವಾಝ್ ಹಾಗೂ ದಿಲಾವರ್ ಆನ್‍ಲೈನ್ ಕ್ಯಾಸಿನೊ ಆಡಿದ್ದರು ಎನ್ನಲಾಗಿದ್ದು, ದಿಲಾವರ್ ದೊಡ್ಡ ಮೊತ್ತ ಗೆದ್ದಿದ್ದ. ಈ ಮೊತ್ತವನ್ನು ಪಡೆಯಲು ದಿಲಾವರ್ ಚಾಲ್ತಿ ಖಾತೆಯ ಸಂಖ್ಯೆಯನ್ನು ನೀಡಬೇಕಿತ್ತು. ತನ್ನ ಬಳಿ ಚಾಲ್ತಿ ಖಾತೆ ಇಲ್ಲದ ಕಾರಣ ಅಬ್ದುಲ್ ಕರೀಂ ಎಂಬವರ ನೆರವು ಕೋರಿದ್ದ ಎಂದು ತಿಳಿದು ಬಂದಿದೆ.
ದಿಲಾವರ್ ದೊಡ್ಡ ಮೊತ್ತವನ್ನು ಬ್ಯಾಂಕ್ ಖಾತೆಯಿಂದ ಪಡೆದ ಬಳಿಕ ಹುಬ್ಬಳ್ಳಿಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಕರೀಂ ಈ ಸಂಚು ರೂಪಿಸಿದ. ತನ್ನ ಸ್ನೇಹಿತರಿಗೆ ಕರೆ ಮಾಡಿ ದಿಲಾವರ್ ಅಪಹರಣಕ್ಕೆ ಸಂಚು ರೂಪಿಸಿದ. ಆದರೆ ಗರೀಬ್ ನವಾಝ್ ಬಳಿ ಲಾಟರಿ ಹಣ ಇದೆ ಎಂಬ ತಪ್ಪುಕಲ್ಪನೆಯಿಂದ ಗರೀಬ್ ನವಾಝ್ ನನ್ನು ಅಪಹರಿಸಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಅಪಹೃತ ವ್ಯಕ್ತಿ ತಮಗೆ ಬೇಕಾದವನಲ್ಲ ಎಂದು ತಿಳಿದಾಗ ಗರೀಬ್ ನವಾಝ್ ಬಿಡುಗಡೆಗೆ 15 ಲಕ್ಷ ರೂಪಾಯಿ ಬೇಡಿಕೆ ಮುಂದಿಟ್ಟಿದ್ದರು ಎಂದು newindianexpress.com ವರದಿ ಮಾಡಿದೆ.