ಹೊಸ ನಿಯಮ: ಇನ್ನು ಮುಂದೆ ಜಿಎಸ್‍ಟಿ ನೋಂದಾಯಿತ ಬಾಡಿಗೆದಾರರಿಗೆ 18% ತೆರಿಗೆ ಪಾವತಿಸುವ ಹೊರೆ !

ಹೊಸದಿಲ್ಲಿ: ಜಿಎಸ್‍ಟಿ ಅಡಿ ನೋಂದಣಿ ಹೊಂದಿರುವ ಬಾಡಿಗೆದಾರರೊಬ್ಬರು ತಾವು ಬಾಡಿಗೆಗೆ ಪಡೆದ ವಸತಿ ಕಟ್ಟಡದ ಬಾಡಿಗೆಗೆ ಶೇ 18 ಜಿಎಸ್‍ಟಿ ಪಾವತಿಸಬೇಕಿದೆ. ಜುಲೈ 18ರಿಂದ ಜಾರಿಗೆ ಬಂದ ಹೊಸ ಜಿಎಸ್‍ಟಿ ನಿಯಮಗಳನ್ವಯ ಇದು ಜಾರಿಯಾಗಿದೆ. ಜಿಎಸ್‍ಟಿ ಅಡಿ ನೋಂದಣಿಗೊಂಡಿರುವ ಬಾಡಿಗೆದಾರರು ಮಾತ್ರ ಈ ಶೇ 18 ಜಿಎಸ್‍ಟಿ ಅನ್ನು ತಾವು ಪಾವತಿಸಿದ ಬಾಡಿಗೆ ಮೇಲೆ ನೀಡಬೇಕಿದೆ.
ಈ ಹಿಂದೆ ಬಾಡಿಗೆಗೆ ಅಥವ ಲೀಸ್‍ಗೆ ನೀಡಲಾಗಿದ್ದ ವಾಣಿಜ್ಯ ಸ್ಥಳಗಳಿಗಷ್ಟೇ ಜಿಎಸ್‍ಟಿ ಅನ್ವಯವಾಗಿತ್ತು. ಆದರೆ ಹೊಸ ನಿಯಮದನ್ವಯ ಜಿಎಸ್‍ಟಿ ಅಡಿ ನೋಂದಣಿ ಹೊಂದಿರುವ ಬಾಡಿಗೆದಾರರೊಬ್ಬರು ರಿವರ್ಸ್ ಚಾರ್ಜ್ ಮೆಕ್ಯಾನಿಸಂ (ಆರ್‍ಸಿಎಂ) ಅಡಿ ತೆರಿಗೆ ಪಾವತಿಸಬೇಕಿದೆ. ನಂತರ ಕಡಿತಕ್ಕಾಗಿ ಪಾವತಿಸಿದ ಜಿಎಸ್‍ಟಿ ಅನ್ನು ಇನ್‍ಪುಟ್ ಟ್ಯಾಕ್ಸ್ ಕ್ರೆಡಿಟ್ ಅಡಿ ಕ್ಲೇಮ್ ಮಾಡಬಹುದು.
ಆದರೆ ವಸತಿ ಕಟ್ಟಡದ ಮಾಲೀಕ ಜಿಎಸ್‍ಟಿ ಪಾವತಿಸುವ ಬಾಧ್ಯತೆ ಹೊಂದಿಲ್ಲ. ಸಾಮಾನ್ಯ ವೇತನ ಪಡೆಯುವ ವ್ಯಕ್ತಿಯೊಬ್ಬರು ಬಾಡಿಗೆಗೆ ಅಥವಾ ಲೀಸ್‍ಗೆ ಮನೆ ಅಥವ ಫ್ಲ್ಯಾಟ್ ಪಡೆದುಕೊಂಡಿದ್ದರೆ ಅವರು ಜಿಎಸ್‍ಟಿ ಪಾವತಿಸಬೇಕಾಗಿಲ್ಲ.
ಬಾಡಿಗೆಗೆ ಪಡೆದ ವಸತಿ ಕಟ್ಟಡದಲ್ಲಿ ಸೇವೆ ಒದಗಿಸುವ ಜಿಎಸ್‍ಟಿ ನೋಂದಣಿ ಹೊಂದಿದ ವ್ಯಕ್ತಿ ನೀಡುವ ಬಾಡಿಗೆ ಮೇಲೆ ಶೇ 18 ಜಿಎಸ್‍ಟಿ ಪಾವತಿಸಬೇಕಿದೆ.
ಜಿಎಸ್‍ಟಿ ಕಾನೂನಿನ ಪ್ರಕಾರ ನೋಂದಣಿಗೊಂಡವರು, ವ್ಯಕ್ತಿಗಳು ಅಥವಾ ಕಾರ್ಪೊರೇಟ್ ಸಂಸ್ಥೆಗಳಾಗಿರಬಹುದು,. ಒಂದು ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ವಾರ್ಷಿಕ ವಹಿವಾಟು ಹೊಂದಿರುವ ಉದ್ಯಮಿ ಅಥವಾ ವೃತ್ತಿಪರರು ಜಿಎಸ್‍ಟಿ ನೋಂದಣಿ ಮಾಡಿಕೊಳ್ಳಬೇಕಿದೆ. ಸೇವೆಗಳನ್ನು ಮಾತ್ರ ಒದಗಿಸುವ ವ್ಯಕ್ತಿಯೊಬ್ಬನಿಗೆ ವಾರ್ಷಿಕ ಮಿತಿ ರೂ 20 ಲಕ್ಷವಾಗಿದ್ದರೆ ಅದಕ್ಕಿಂತ ಹೆಚ್ಚಿನ ಆದಾಯವಿದ್ದರೆ ಜಿಎಸ್‍ಟಿ ನೋಂದಣಿ ಮಾಡಬೇಕಿದೆ.
ಅದೇ ರೀತಿ ಉತ್ಪನ್ನಗಳ ಪೂರೈಕೆದಾರರ ವಾರ್ಷಿಕ ವಹಿವಾಟು ಮಿತಿ ರೂ 40 ಲಕ್ಷ ಆಗಿದ್ದು, ಈಶಾನ್ಯ ಭಾರತದವರಾಗಿದ್ದರೆ ಈ ಮಿತಿ ವರ್ಷಕ್ಕೆ ರೂ 10 ಲಕ್ಷ ಆಗಿದೆ.
ಜಿಎಸ್‍ಟಿ ಮಂಡಳಿಯ 47ನೇ ಸಭೆಯಲ್ಲಿ ಅನುಮೋದನೆಗೊಂಡ ಈ ಹೊಸ ಬಲದಾವಣೆಗಳು, ವಸತಿ ಕಟ್ಟಡಗಳನ್ನು ಬಾಡಿಗೆಗೆ ಅಥವಾ ಲೀಸಿಗೆ ಪಡೆದುಕೊಂಡಿರುವ ಕಂಪೆನಿಗಳು ಹಾಗೂ ವೃತ್ತಿಪರರ ಮೇಲೆ ಅನ್ವಯವಾಗಿದೆ.
ಕಂಪೆನಿಗಳು ಗೆಸ್ಟ್ ಹೌಸ್‍ಗಳಿಗಾಗಿ ಅಥವಾ ಉದ್ಯೋಗಿಗಳ ವಸತಿಗಾಗಿ ಬಾಡಿಗೆಗೆ ಪಡೆದುಕೊಂಡಿರುವ ಕಟ್ಟಡದ ಬಾಡಿಗೆಗಳ ಮೇಲೆ ಶೇ 18 ಜಿಎಸ್‍ಟಿ ಪಾವತಿಸಬೇಕಿದೆ. ಇದರಿಂದಾಗಿ ಉದ್ಯೋಗಿಗಳಿಗೆ ಉಚಿತ ವಸತಿ ಒದಗಿಸುವ ಕಂಪನಿಗಳ ಮೇಲೆ ಹೆಚ್ಚಿನ ಹೊರೆ ಬೀಳಲಿದೆ.