ಬೆಂಗಳೂರಿನಲ್ಲಿ ಕಾಂಗ್ರೆಸ್ನಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಭೆ

ಉಡುಪಿ, ಆ.12: ಸ್ವಾತಂತ್ರ್ಯ ಸಂಗ್ರಾಮದಲ್ಲಿ ವೀರಯೋಧರ ತ್ಯಾಗ, ಬಲಿದಾನವನ್ನು ನೆನಪಿಸುವ ಹಾಗೂ ಶಾಂತಿ ಸಾಮರಸ್ಯ ದೇಶಪ್ರೇಮದ ಸಂದೇಶ ವನ್ನು ಯುವ ಜನತೆಗೆ ತಿಳಿಯಪಡಿಸುವ ಕೆಲಸ ಕಾಂಗ್ರೆಸ್ನಿಂದ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿ ಬೆಂಗಳೂರಿನಲ್ಲಿ ಆ.15ರಂದು ಹಮ್ಮಿಕೊಂಡಿರುವ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ಕುಮಾರ್ ಕೊಡವೂರು ಕರೆ ನೀಡಿದ್ದಾರೆ.
ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ನಡೆದ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಕೆಪಿಸಿಸಿ ಆದೇಶ ದಂತೆ ಪ್ರತೀ ಜಿಲ್ಲೆಯಲ್ಲಿಯೂ 75 ಕಿ.ಮೀ. ಪಾದಯಾತ್ರೆ ಕಾರ್ಯಕರ್ತರ ಪಾಲ್ಗೊಳ್ಳುವಿಕೆಯಿಂದ ಯಶಸ್ವಿಯಾಗಿ ನಡೆದಿದೆ. ಇದೇ ಆ.13 ಹಾಗೂ 14 ರಂದು ಕಾಪುವಿನಲ್ಲಿ ಬೈಕ್ ರ್ಯಾಲಿ ನಡೆಯಲಿದ್ದು, ದೇಶ ಪ್ರೇಮದ ಸಂದೇಶವನ್ನು ಜನತೆಗೆ ತಿಳಿಯಪಡಿಸುವ ಈ ರ್ಯಾಲಿಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕು ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್ ಮಾತನಾಡಿ, ರಾಜ್ಯದಲ್ಲಿ ಪಕ್ಷಕ್ಕೆ ಪೂರಕ ವಾತಾವರಣವಿದ್ದು, ಇನ್ನು ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ಬರುವುದರಿಂದ ಬೂತು ಮಟ್ಟದಲ್ಲಿ ಸಂಘಟನೆಯನ್ನು ಬಲಿಷ್ಟ ಗೊಳಿಸಲಾಗುವುದು. ಕಾರ್ಯಕರ್ತರ ಉತ್ಸಾಹಕ್ಕೆ ಪೂರಕವಾಗಿ ಕಾರ್ಯಕ್ರಮ ಗಳನ್ನು ರೂಪಿಸಲಾಗುವುದು ಎಂದರು.
ಪಕ್ಷದ ಮುಖಂಡರಾಗಿದ್ದು ಇತ್ತೀಚೆಗೆ ನಿಧನರಾದ ಗೋಪಾಲ ಶೆಟ್ಟಿ ನೆಲ್ಲೂರು, ವಸಂತ ಚಿಪ್ಲೂಣಕರ್ ಮಾಳ, ಪ್ರಶಾಂತ ಶೆಟ್ಟಿ ಯಾನೆ ಕಾಳಪ್ಪ ಶೆಟ್ಟಿ, ಶೇಡಿಮನೆ ಸಂಜೀವ ಶೆಟ್ಟಿ ಗುಂಡಿಬೈಲು ಅತ್ರಾಡಿ, ಇಬ್ರಾಹಿಮ್ ಕೆಮ್ಮಣ್ಣು, ಮೊಹಿದ್ದಿನ್ ಕೆಮ್ಮಣ್ಣು, ಇವರಿಗೆ ಜಿಲ್ಲಾ ಉಪಾಧ್ಯಕ್ಷ ನೀರೆಕೃಷ್ಣ ಶೆಟ್ಟಿ ನುಡಿ ನಮನ ಸಲ್ಲಿಸಿದರು.
ಮಾಜಿ ಶಾಸಕ ಗೋಪಾಲ ಪೂಜಾರಿ, ವೆರೋನಿಕಾ ಕರ್ನೆಲಿಯೋ, ದಿನೇಶ್ ಪುತ್ರನ್, ನವೀನ್ಚಂದ್ರ ಶೆಟ್ಟಿ, ಬಿ.ನರಸಿಂಹ ಮೂರ್ತಿ, ಕುಶಲ ಶೆಟ್ಟಿ, ಪ್ರಖ್ಯಾತ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಕೀರ್ತಿ ಶೆಟ್ಟಿ, ಶಬ್ಬಿರ್ ಅಹ್ಮದ್, ಹರಿಪ್ರಸಾದ ಶೆಟ್ಟಿ, ಮದನ್ಕುಮಾರ್, ರಮೇಶ್ ಕಾಂಚನ್, ಡಾ. ಸುನಿತಾ ಶೆಟ್ಟಿ, ಶಂಕರ ಕುಂದರ್, ರೋಶನಿ ಒಲಿವರಾ, ದೀಪಕ್ ಕೋಟ್ಯಾನ್, ಯತೀಶ್ ಕರ್ಕೇರ, ಚಂದ್ರಶೇಖರ ಶೆಟ್ಟಿ, ಉದ್ಯಾವರ ನಾಗೇಶ್ ಕುಮಾರ್, ಉಪೇಂದ್ರ ಮೆಂಡನ್, ಬಿ.ಬಾಲಕೃಷ್ಣ ಪೂಜಾರಿ, ವೈ.ಸುಕುಮಾರ್, ಅಬ್ದುಲ್ ಅಜೀಜ್, ಶಶಿಧರ ಶೆಟ್ಟಿ ಎಲ್ಲೂರು, ಇಸ್ಮಾಯಿಲ್ ಆತ್ರಾಡಿ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣಯ್ಯ ಸೇರಿಗಾರ್ ಸ್ವಾಗತಿಸಿ ಜಿಲ್ಲಾ ವಕ್ತಾರ ಬಿಪಿನ್ ಚಂದ್ರಪಾಲ್ ವಂದಿಸಿದರು.ಭಾಸ್ಕರ ರಾವ್ ಕಿದಿಯೂರು ಕಾರ್ಯಕ್ರಮ ನಿರ್ವಹಿಸಿದರು.