ದಿಲ್ಲಿಯಲ್ಲಿ 2,000ಕ್ಕೂ ಅಧಿಕ ಸಜೀವ ಗುಂಡುಗಳು ವಶ: ಆರು ಜನರ ಸೆರೆ

ಹೊಸದಿಲ್ಲಿ,ಆ.12: ಸ್ವಾತಂತ್ರೋತ್ಸವಕ್ಕೆ ಮುನ್ನ ಮದ್ದುಗುಂಡುಗಳ ಕಳ್ಳ ಸಾಗಣೆಯಲ್ಲಿ ತೊಡಗಿದ್ದ ಆರು ಜನರನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 2,251 ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಆರೋಪಿಗಳನ್ನು ಗುಂಡುಗಳಿದ್ದ ಎರಡು ಚೀಲಗಳೊಂದಿಗೆ ದಿಲ್ಲಿಯ ಆನಂದ ವಿಹಾರ ಪ್ರದೇಶದಿಂದ ಬಂಧಿಸಲಾಗಿದೆ.
ಈ ಮದ್ದುಗುಂಡುಗಳನ್ನು ಉತ್ತರ ಪ್ರದೇಶದ ಲಕ್ನೋಕ್ಕೆ ಸಾಗಿಸಲು ಆರೋಪಿಗಳು ಉದ್ದೇಶಿಸಿದ್ದರು. ಈವರೆಗೆ ಬಂಧಿಸಲ್ಪಟ್ಟಿರುವ ಆರು ಜನರ ಪೈಕಿ ಓರ್ವ ಡೆಹ್ರಾಡೂನ್ ನಿವಾಸಿಯಾಗಿದ್ದು,ಗನ್ ಹೌಸ್ ವೊಂದರ ಮಾಲಕನಾಗಿದ್ದಾನೆ. ಮೇಲ್ನೋಟಕ್ಕೆ ಇದೊಂದು ಕ್ರಿಮಿನಲ್ ಜಾಲದಂತೆ ಕಂಡು ಬರುತ್ತಿದೆಯಾದರೂ ಭಯೋತ್ಪಾದನೆ ಕೋನದ ಸಾಧ್ಯತೆಯನ್ನು ಪೊಲೀಸರು ಈವರೆಗೆ ತಳ್ಳಿಹಾಕಿಲ್ಲ ಎಂದು ಎಸಿಪಿ ವಿಕ್ರಮಜಿತ ಸಿಂಗ್ ತಿಳಿಸಿದರು.
ಆ.15ರಂದು 75ನೇ ಸ್ವಾತಂತ್ರೋತ್ಸವಕ್ಕೆ ದೇಶವು ಸಜ್ಜಾಗುತ್ತಿರುವ ಹಿನ್ನೆಲೆಯಲ್ಲಿ ದಿಲ್ಲಿಯಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪೊಲೀಸರು ಗಸ್ತು ಕಾರ್ಯ ಮತ್ತು ವಾಹನಗಳ ತಪಾಸಣೆಯನ್ನೂ ತೀವ್ರಗೊಳಿಸಿದ್ದಾರೆ. ಮೆಟ್ರೋ,ರೈಲು ಮತ್ತು ವಿಮಾನ ನಿಲ್ದಾಣಗಳು ಹಾಗೂ ಮಾರುಕಟ್ಟೆಗಳು ಸೇರಿದಂತೆ ದಿಲ್ಲಿಯ ಎಲ್ಲ ಸೂಕ್ಷ್ಮ ಸ್ಥಳಗಳಲ್ಲಿ ಬಿಗು ಭದ್ರತಾ ವ್ಯವಸ್ಥೆಗಳನ್ನು ಏರ್ಪಡಿಸಲಾಗಿದೆ.
ಹೋಟೆಲ್ ಗಳು,ಪಾರ್ಕಿಂಗ್ ಪ್ರದೇಶಗಳು ಮತ್ತು ರೆಸ್ಟಾರಂಟ್ ಗಳಲ್ಲಿ ತಪಾಸಣೆಗಳನ್ನು ನಡೆಸಲಾಗುತ್ತಿದೆ.