ಕೊಡಗು: ಮಾಜಿ ಸಿಎಂ ಸಿದ್ದರಾಮಯ್ಯಗೆ 'ದಲಿತ ರತ್ನ' ಪ್ರಶಸ್ತಿ

ಮಡಿಕೇರಿ ಆ.15 : ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೊಡಗು ಘಟಕದ ವತಿಯಿಂದ ನೀಡಲಾಗುವ 'ದಲಿತ ರತ್ನ' ಪ್ರಶಸ್ತಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಪ್ರದಾನ ಮಾಡಲಾಗುವುದು ಎಂದು ಸಮಿತಿ ಜಿಲ್ಲಾ ಸಂಚಾಲಕ ಎಚ್.ಎಲ್.ದಿವಾಕರ್ ತಿಳಿಸಿದ್ದಾರೆ.
ನಗದರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 4ನೇ ವರ್ಷದ ಪ್ರಶಸ್ತಿಯನ್ನು ಸಮಾಜ ಮುಖಿ ಸೇವೆ, ಶೈಕ್ಷಣಿಕ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ನೀಡಿದ ಸೇವೆಯನ್ನು ಪರಿಗಣಿಸಿ ಅಕ್ಟೋಬರ್ ಕೊನೆ ವಾರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದೆಂದರು.
ಪ್ರತಿಭಟನೆ ಮುಂದೂಡಿಕೆ: ದಲಿತರ ಮೇಲಿನ ದೌರ್ಜನ್ಯ ಮತ್ತು ವಿವಿಧ ಬೇಡಿಕೆ ಆಗ್ರಹಿಸಿ ಆ.14ರ ಮಧ್ಯರಾತ್ರಿ ನಗರದ ಗಾಂಧಿಮೈದಾನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಮಳೆಯ ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಎಲ್ಲರಿಗೂ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ರಾಜ್ಯ ಸಂಘಟನೆಯಿಂದ ಪ್ರತಿಭಟನೆ ಕೈಬಿಡುವಂತೆ ಆದೇಶ ಹೊರಡಿಸಿದ ಹಿನ್ನೆಲೆ ಪ್ರತಿಭಟನೆ ಮುಂದೂಡಲಾಗಿದೆ ಎಂದು ತಿಳಿಸಿದರು.
ಪ್ರೊ.ಬಿ.ಕೃಷ್ಣಪ್ಪ ಅವರ ಜನ್ಮದಿನೋತ್ಸವ ಪ್ರಯುಕ್ತ ದಾವಣಗೆರೆಯಲ್ಲಿ ಆ.13 ರಂದು ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಪರಿವರ್ತನಾ ಶಿಬಿರ ಮತ್ತು ರಾಜ್ಯ ಸಮಿತಿ ಸಭೆಗೆ ಜಿಲ್ಲೆಯಿಂದ 50 ಜನರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ತಾಲೂಕು ಸಂಚಾಲಕ ದೀಪಕ್ ಪೊನ್ನಪ್ಪ, ಜಿಲ್ಲಾ ಸಹಸಂಚಾಲಕ ಎಚ್.ಕೆ.ಗಣೇಶ್, ವಿರಾಜಪೇಟೆ ತಾಲೂಕು ಸಂಚಾಲಕ ವೇಲುಸ್ವಾಮಿ, ಮಡಿಕೇರಿ ನಗರ ಸಂಚಾಲಕ ಸಿದ್ದೇಶ್ವರ್ ಉಪಸ್ಥಿತರಿದ್ದರು.