ಕುಂದಾಪುರ: ಸ್ವಾತಂತ್ರ್ಯ ಹೋರಾಟಗಾರರಿಗೆ ಬೆಳಕಿನ ನಮನ

ಕುಂದಾಪುರ, ಆ.13: ದೇಶವ ಸ್ವಾತಂತ್ರ್ಯ ಹೋರಾಟದಲ್ಲಿ ಕಮ್ಯೂನಿಸ್ಟ್ ಪಕ್ಷ ಮತ್ತು ಕಮ್ಯುನಿಸ್ಟ್ ಚಳವಳಿಯು ಅತ್ಯಂತ ಕ್ರಾಂತಿಕಾರಿ ಪಾತ್ರವಹಿಸಿತ್ತು ಎಂದು ಸಿಪಿಎಂ ಕುಂದಾಪುರ ವಲಯ ಕಾರ್ಯದರ್ಶಿ ಎಚ್.ನರಸಿಂಹ ಹೇಳಿದ್ದಾರೆ.
ಅವರು ಕುಂದಾಪುರ ಹಂಚು ಕಾರ್ಮಿಕರ ಭವನದಲ್ಲಿ ಶುಕ್ರವಾರ ನಡೆದ ಸ್ವಾತಂತ್ರ್ಯ ಹೋರಾಟಗಾರರಿಗೆ ಬೆಳಕಿನ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದಿನ ಸಿಪಿಎಂ ಪಕ್ಷದ ಪ್ರಧಾನ ಕಾರ್ಯದರ್ಶಿ ಆಗಿದ್ದ ಹರಿಕಿಷನ್ ಸಿಂಗ್ ಸುರ್ಜಿತ್ ಬಾಲಕನಾಗಿದ್ದ ಪಂಜಾಬಿನ ಅಂದಿನ ಬ್ರಿಟೀಷ್ ಅಧಿಕಾರಿಗಳ ಕಚೇರಿ ಮೇಲಿದ್ದ ಇಂಗ್ಲಿಷ್ ಧ್ವಜ ಇಳಿಸಿ, ರಾಷ್ಟ್ರಧ್ವಜ ಹಾರಿಸಿದರು. ಬಳಿಕ ಕೋರ್ಟ್ನಲ್ಲಿ ಬಾಲಕನೆಂಬ ಕಾರಣಕ್ಕಾಗಿ ಮರಣ ದಂಡನೆಯಿಂದ ಪಾರಾದರು. ಕೇರಳದ ಸಿಪಿಎಂ ಮುಖಂಡರಾಗಿದ್ದ ಎ.ಕೆ.ಗೋಪಾಲನ್ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿಯೇ ಅತೀ ಹೆಚ್ಚು ಕಾಲ ಕಠಿಣ ಕಾರಾಗೃಹ ಶಿಕ್ಷೆ ಅನುಭವಿಸಿದ್ದರು. ಅಲ್ಲದೇ ಕೊನೆವರೆಗೂ ಕಠಿಣ ಶಿಕ್ಷೆಗೆ ಗುರಿಪಡಿಸಿದರೂ ಬ್ರಿಟೀಷರಿಗೆ ತಪ್ಪೋಪ್ಪಿಗೆ ಪತ್ರ ಬರೆದಿಲ್ಲ ಎಂದರು.
ಪಕ್ಷದ ಮುಖಂಡ ಸುರೇಶ್ ಕಲ್ಲಾಗರ ಮಾತನಾಡಿ, ಸಂಪೂರ್ಣ ಸ್ವಾತಂತ್ರ್ಯದ ಬೇಡಿಕೆಯನ್ನು ಕಾಂಗ್ರೆಸ್ ಅಧಿವೇಶನದಲ್ಲಿ ಮೊದಲು ಘೋಷಿಸಿದವರು ಕಮ್ಯೂನಿಸ್ಟರು. ಅಸಮಾನತೆ, ಬಡತನ, ಅನಕ್ಷರತೆ ನಿರ್ಮೂಲನೆ ಸ್ವಾತಂತ್ರ್ಯದ ಉದ್ದೇಶವಾಗಬೇಕು ಎಂದು ಹೋರಾಡಿದರು. ಸ್ವಾತಂತ್ರ್ಯದ ಬಗ್ಗೆ ಕಮ್ಯುನಿಷ್ಟ ರಲ್ಲಿ ಸ್ಪಷ್ಟತೆ ಇತ್ತು. ಇದರಿಂದ ಮಹಾತ್ಮ ಗಾಂಧಿ ನೇತೃತ್ವದಲ್ಲಿ ರೈತರು, ಕಾರ್ಮಿಕರು ಹೋರಾಡಿ ಸ್ವಾತಂತ್ರ್ಯ ಗಳಿಸಲು ಸಾಧ್ಯವಾಯಿತು. ಭಗತ್ ಸಿಂಗ್ ರಷ್ಯಾ ಕ್ರಾಂತಿಯಿಂದ ಸ್ಪೂರ್ತಿ ಪಡೆದಿದ್ದರು. ಮುಂದೆ ಅವರ ಸಹಚರರು ಕಮ್ಯುನಿಸ್ಟ್ ಪಕ್ಷ ಸೇರ್ಪಡೆಯಾಗಿರುವುದು ಇತಿಹಾಸ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದೀಪಗಳನ್ನು ಬೆಳಗಿಸಿ ಶ್ರದ್ಧಾಂಜಲಿ ನೀಡಿ ಗೌರವಿಸ ಲಾಯಿತು. ಚಂದ್ರಶೇಖರ ವಿ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮುಖಂಡರಾದ ಕೆ.ಶಂಕರ್, ಮಹಾಬಲ ವಡೇರಹೋಬಳಿ, ರಾಜು ದೇವಾ ಡಿಗ, ರವಿ ವಿ.ಎಂ., ಲಕ್ಷ್ಮಣ ಡಿ. ಉಪಸ್ಥಿತರಿದ್ದರು.