ಬೆಂಗಳೂರು | ಕಾಂಗ್ರೆಸ್ ನೇತೃತ್ವದಲ್ಲಿ ‘ಸ್ವಾತಂತ್ರ್ಯ ನಡಿಗೆ’: ಹರಿದು ಬಂದ ಜನಸಾಗರ
50 ಸಾವಿರ ಮೆಟ್ರೋ ಟಿಕೆಟ್ ಖರೀದಿ
ಬೆಂಗಳೂರು, ಆ.15: ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಾಂಗ್ರೆಸ್ (Congress) ಪಕ್ಷದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ‘ಸ್ವಾತಂತ್ರ್ಯದ ನಡಿಗೆ’ಯಲ್ಲಿ ಸುಮಾರುಒಂದು ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ನಗರದ ಮೆಜೆಸ್ಟಿಕ್ ಬಳಿಯಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭವಾದ ನಡಿಗೆಯು ಸಂಜೆ 5 ಗಂಟೆ ವೇಳೆಗೆ ಬಸವನಗುಡಿ ನ್ಯಾಷನಲ್ ಕಾಲೇಜಿನವರೆಗೆ ಸಾಗಿ ಸಮಾರೋಪಗೊಂಡಿತು.
ರಾಜ್ಯಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಉಪ ನಾಯಕಯು.ಟಿ.ಖಾದರ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರು, ಶಾಸಕರು, ವಿಧಾನಪರಿಷತ್ ಸದಸ್ಯರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ರಾಷ್ಟ್ರಧ್ವಜವನ್ನು ಹಿಡಿದುಕೊಂಡು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.
ಕಲಾವಿದರು ಡೊಳ್ಳು ಕುಣಿತ, ವೀರಗಾಸೆ ಸೇರಿದಂತೆಇನ್ನಿತರ ನೃತ್ಯಗಳನ್ನು ಪ್ರದರ್ಶಿಸುವ ಮೂಲಕ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದವರನ್ನು ಹುರಿದುಂಬಿಸಿದರು.ಪಾದಯಾತ್ರೆ ಸಾಗುವ ಮಾರ್ಗದ ಎರಡು ಬದಿಗಳಲ್ಲಿ ರಾಷ್ಟ್ರ ನಾಯಕರ ಭಾವಚಿತ್ರಗಳ ಕಟೌಟ್‍ಗಳು ರಾರಾಜಿಸುತ್ತಿದ್ದವು.ಸಾರ್ವಜನಿಕರಿಗೆಉಚಿತವಾಗಿಕುಡಿಯುವ ನೀರು, ಕಲ್ಲಂಗಡಿ, ಸೇಬು ನೀಡಲುಅಲ್ಲಲ್ಲಿಕಾಂಗ್ರೆಸ್ ಪಕ್ಷದ ಮುಖಂಡರು ಮಳಿಗೆಗಳನ್ನು ಹಾಕಿದ್ದರು.ಅಲ್ಲದೆ, ಪಾದಯಾತ್ರೆ ಮಾರ್ಗದಲ್ಲಿ ಸ್ವಚ್ಛತೆಯನ್ನು ಕಾಪಾಡಲು ಸೇವಾದಳದ ಕಾರ್ಯಕರ್ತರನ್ನು ನಿಯೋಜಿಸಲಾಗಿತ್ತು.
ಬೆಂಗಳೂರು ನಗರದ ಒಳಗಡೆ ಸಂಚಾರದಟ್ಟಣೆ ನಿಯಂತ್ರಿಸಲು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ತುಮಕೂರುರಸ್ತೆ ಮಾರ್ಗವಾಗಿ ಆಗಮಿಸುವ ವಾಹನಗಳಿಗೆ ಬೆಂಗಳೂರು ಅಂತರ್ ರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಬಳಿ, ಹಳೆ ಮದ್ರಾಸ್ ರಸ್ತೆ ಕಡೆಯಿಂದ ಆಗಮಿಸುವವರ ವಾಹನಗಳಿಗೆ ಕೆ.ಆರ್.ಪುರ ಸಮೀಪದ ಐಟಿಐ ನಿಲ್ದಾಣದ ಬಳಿ ಹಾಗೂ ಮೈಸೂರು ರಸ್ತೆ ಮಾರ್ಗವಾಗಿ ಆಗಮಿಸುವವರಿಗೆ ಕೆಂಗೇರಿ ಬಳಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು.
ಪಾದಯಾತ್ರೆಯಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಂಡವರಿಗೆಕಾಂಗ್ರೆಸ್ ಪಕ್ಷದ ವತಿಯಿಂದಟೀ ಶರ್ಟ್ ಹಾಗೂ ಟೋಪಿಗಳನ್ನು ವಿತರಿಸಲಾಯಿತು.ಅಲ್ಲದೆ, ಮೆಟ್ರೋದಲ್ಲಿ ಪ್ರಯಾಣಿಸಲು ಸುಮಾರು 50 ಸಾವಿರ ಟಿಕೆಟ್‍ಗಳನ್ನು ಖರೀದಿಸಲಾಗಿತ್ತು .ಇದರಿಂದಾಗಿ, ಕೆಂಗೇರಿ, ನಾಗಸಂದ್ರ, ಮೆಜೆಸ್ಟಿಕ್, ನ್ಯಾಷನಲ್ ಕಾಲೇಜು ಸೇರಿದಂತೆ ಇನ್ನಿತರ ಮೆಟ್ರೋ ನಿಲ್ದಾಣಗಳಲ್ಲಿ ಜನಸಂದಣಿಉಂಟಾಗಿತ್ತು.ಇದರಿಂದಾಗಿ, ಜನರನ್ನು ನಿಯಂತ್ರಿಸಲು ಮೆಟ್ರೋ ನಿಲ್ದಾಣದಲ್ಲಿನ ಭದ್ರತಾ ಸಿಬ್ಬಂದಿ ಹರಸಾಹಸ ಪಡುವಂತಾಯಿತು.
ಪಾದಯಾತ್ರೆ ಸಂದರ್ಭದಲ್ಲಿ ಸಾರ್ವಜನಿಕರ ವಾಹನಗಳ ಸಂಚಾರಕ್ಕೆತೊಂದರೆಯಾಗದಂತೆತಡೆಯಲು ನೃಪತುಂಗರಸ್ತೆಯಿಂದ ಹಡ್ಸನ್ ವೃತ್ತದವರೆಗೆರಸ್ತೆಯ ಮಧ್ಯದಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದರು.ಅಲ್ಲದೆ, ಕುಡಿಯುವ ನೀರು ಹಾಗೂ ಹಣ್ಣು ಹಂಪಲುಗಳನ್ನು ವಿತರಿಸುತ್ತಿದ್ದ ಮಳಿಗೆಗಳ ಬಳಿ ಜನ ಸಂದಣಿ ಉಂಟಾಗದಂತೆ ಎಚ್ಚರಿಕೆ ವಹಿಸಿದ್ದರು.
ನ್ಯಾಷನಲ್ ಕಾಲೇಜು ಮೈದಾನಕ್ಕೆ ಪಾದಯಾತ್ರೆತಲುಪಿದ ಬಳಿಕ ಕಾಂಗ್ರೆಸ್ ಪಕ್ಷದ ನಾಯಕರುತ್ರಿವರ್ಣ ಬಣ್ಣದ ಬಲೂನುಗಳನ್ನು ಬಾನಂಗಳಕ್ಕೆ ಹಾರಿಸುವ ಮೂಲಕ ನಡಿಗೆಯನ್ನು ಅಂತ್ಯಗೊಳಿಸಿದರು.ಆನಂತರ, ರಾಜ್ಯ ಹಾಗೂ ರಾಷ್ಟ್ರಮಟ್ಟದಕಲಾವಿದರಿಂದ ಸಂಗೀತ, ನೃತ್ಯ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.