ವಿಶಾಖಪಟ್ಟಣಂ: ಮತ್ತೋರ್ವ ಮಹಿಳೆಯ ಹತ್ಯೆ

ವಿಶಾಖಪಟ್ಟಣಂ, ಆ. 15: ವಿಝಾಗ್ ನಗರದ ಪೆಂಡುರ್ತಿ ಪೊಲೀಸ್ ಠಾಣಾ ವ್ಯಾಪ್ತಿಯ ಸುಜಾತನಗರದ ಚಿನಮುಶಿದಿವಾಡಾ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಅಪಾರ್ಟ್ಮೆಂಟ್ನಲ್ಲಿ 47 ವರ್ಷದ ಮಹಿಳೆಯ ಮೃತದೇಹ ಪತ್ತೆಯಾಗಿದೆ.
ಮೃತಪಟ್ಟ ಮಹಿಳೆಯನ್ನು ಎ. ಲಕ್ಷ್ಮೀ ಎಂದು ಗುರುತಿಸಲಾಗಿದೆ. ಅವರ ಮೃತದೇಹ ರಕ್ತದ ಮಡುವಿನಲ್ಲಿ ಬಿದ್ದಿತ್ತು. ತಲೆಗೆ ಗಾಯವಾಗಿತ್ತು. ಅವರು ವಿಝಿಯಾನಗರಮ್ ಜಿಲ್ಲೆಯ ಕೊಥವಾಲಾಸ ಮಂಡಲದ ವ್ಯಾಪ್ತಿಯಲ್ಲಿ ಬರುವ ಗನಿಸೆಟ್ಟಿಪಾಳೆಂ ಗ್ರಾಮದ ನಿವಾಸಿ. ಅವರು ಈ ನಿರ್ಮಾಣ ಹಂತದಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ವಾಚ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ತನ್ನ ಪತಿ ದೇಮುಡು ಬಾಬು ಅವರೊಂದಿಗೆ ಅಲ್ಲೇ ಜೀವಿಸುತ್ತಿದ್ದರು.
ಈ ಹಿಂದೆ ಆಗಸ್ಟ್ 8ರಂದು ವಿಝಾಗ್ ನಗರದ ಪೆಂದುರ್ತಿ ಪೊಲೀಸ್ ಠಾಣೆ ವ್ಯಾಪ್ತಿಯ ಅಡಿಯಲ್ಲಿ ಬರುವ ಸಪ್ತಗಿರಿ ನಗರದ ಸಮೀಪ ಚಿನಮುಶಿದಿವಾಡಾದಲ್ಲಿರುವ ನಿರ್ಮಾಣ ಹಂತದಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಎಸ್. ಅಪ್ಪಾ ರಾವ್(60) ಹಾಗೂ ಅವರ ಪತ್ನಿ ಎಸ್. ಲಕ್ಷ್ಮೀ (55) ಮೃತದೇಹ ಪತ್ತೆಯಾಗಿತ್ತು. ದಂಪತಿಯ ತಲೆಗೆ ಗಾಯವಾಗಿದ್ದು, ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾಗಿದ್ದರು.
ಪೊಲೀಸರು ಇದುವರೆಗೆ ಈ ಎರಡೂ ಕೊಲೆಗಳ ಆರೋಪಿಗಳನ್ನು ಪತ್ತೆ ಹಚ್ಚಿಲ್ಲ. ಎಸ್, ಲಕ್ಷೀ ಹಾಗೂ ಅವರ ಪತಿಯನ್ನು ಹತ್ಯೆಗೈದ ವ್ಯಕ್ತಿಯೇ ಎ. ಲಕ್ಷೀ ಅವರನ್ನು ಹತ್ಯೆಗೈದಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.







