ಟ್ವಿಟ್ಟರ್ ಪ್ರೊಫೈಲ್ ಚಿತ್ರದಲ್ಲಿ ನೆಹರೂರನ್ನು ಕೈಬಿಟ್ಟ ಮಮತಾ ಬ್ಯಾನರ್ಜಿಯನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ಹೊಸದಿಲ್ಲಿ: ದೇಶದ 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹಾಕಿರುವ ಟ್ವಿಟ್ಟರ್ ಡಿಸ್‍ಪ್ಲೇ ಚಿತ್ರದಲ್ಲಿ ಪ್ರಮಖ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳಿದ್ದರೂ ದೇಶದ ಮೊದಲ ಪ್ರಧಾನಿ ನೆಹರೂ ಅವರ ಚಿತ್ರವಿಲ್ಲದೇ ಇರುವುದಕ್ಕೆ ರಾಜ್ಯದ ಕಾಂಗ್ರೆಸ್ ಘಟಕ ಮುಖ್ಯಮಂತ್ರಿಯನ್ನು ತರಾಟೆಗೆ ತೆಗೆದುಕೊಂಡಿದೆ.
ಪಂಡಿತ್ ಜವಾಹರ್‍ಲಾಲ್ ನೆಹರೂ ಅವರು ದೇಶದ ಮೊದಲ ಸ್ವಾತಂತ್ರ್ಯ ದಿನದಂದು ನೀಡಿದ ಖ್ಯಾತ `ಟ್ರಿಸ್ಟ್ ವಿದ್ ಡೆಸ್ಟಿನಿ'' ಕುರಿತಂತೆ ಬಾಲಕಿಯೊಬ್ಬಳು ರಚಿಸಿದ ಚಿತ್ರವೊಂದನ್ನು ಆಕೆಯ ತಂದೆ ಟ್ವಿಟ್ಟರ್‍ನಲ್ಲಿ ಶೇರ್ ಮಾಡಿದ್ದರಲ್ಲದೆ ``ಪ್ರಥಮ ಸ್ವಾತಂತ್ರ್ಯ ದಿನದ ಕ್ಷಣದ ಚಿತ್ರಣ ನೀಡಿ ನನ್ನ ಪುತ್ರಿ ಕೆಲವು ಮೂಲಭೂತ ಇತಿಹಾಸ ಪಾಠವನ್ನು ನೆನಪಿಸಿದ್ದಾಳೆ,''ಎಂದು ಬರೆದಿದ್ದರು.
ಈ ಟ್ವೀಟ್ ಅನ್ನು ರಿಟ್ವೀಟ್ ಮಾಡಿದ ಪಶ್ಚಿಮ ಬಂಗಾಳ ಕಾಂಗ್ರೆಸ್, ಜೊತೆಗೆ ಮಮತಾ ಬ್ಯಾನರ್ಜಿ ಹಾಗೂ ಟಿಎಂಸಿಯ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‍ಗಳನ್ನೂ ಟ್ಯಾಗ್ ಮಾಡಿದೆ. ``ಬಾಲಕಿ (ಕಿಡ್) ಒಬ್ಬಳಿಂದ ಮಮತಾ, ಟಿಎಂಸಿಗೆÉ ಇತಿಹಾಸದ ಪಾಠ. ಏಕೆಂದರೆ ಅವರು ಉದ್ದೇಶಪೂರ್ವಕವಾಗಿ ತಮ್ಮ ಸ್ವಾತಂತ್ರ್ಯ ದಿನದ ಡಿಪಿಯಲ್ಲಿ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರ ಚಿತ್ರವನ್ನು ಕೈಬಿಟ್ಟಿದ್ದಾರೆ,'' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಬಾಲಕಿ ರಚಿಸಿದ ಚಿತ್ರವನ್ನು ಪೋಸ್ಟ್ ಮಾಡುವ ವೇಳೆ ಆಕೆಯ ತಂದೆ ತಮ್ಮ ಟ್ವೀಟ್‍ನಲ್ಲಿ ಕೂಡ ಮಮತಾ ಮತ್ತು ಟಿಎಂಸಿಯ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‍ಗಳನ್ನು ಟ್ಯಾಗ್ ಮಾಡಿದ್ದರು.
History lesson for @MamataOfficial @AITCofficial from a kid ! Because they purposefully ommitted the first prime minister #JawaharlalNehru from their independence day DP to please their political masters ! https://t.co/SjLQzMj7Al
— West Bengal Congress (@INCWestBengal) August 14, 2022