ಮಧ್ವರಾಜ್ ಭಟ್

ಉಡುಪಿ: ಕಟ್ಟಡಗಳ ವಿನ್ಯಾಸಕಾರ, ಮಣಿಪಾಲದ ಆರ್ಕಿಟೆಕ್ಟ್ ವಿಭಾಗದ ನಿವೃತ್ತ ಉದ್ಯೋಗಿ, ಪಾಜಕಕ್ಷೇತ್ರ ನಿವಾಸಿ ಮಧ್ವರಾಜ್ ಭಟ್ (70) ಮಂಗಳವಾರ ಬೆಳಗ್ಗಿನ ಜಾವ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.
ಕಳೆದ ಆ.13ರಂದು ಪೆರ್ಡೂರು ಪಕ್ಕಾಲು ಬಳಿ ನಡೆದ ಬೈಕ್ ಮತ್ತು ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ನಿಧನರಾದರು.
ಉಡುಪಿ ಶ್ರೀಕೃಷ್ಣ ಮಠದ ಸುತ್ತು ಪೌಳಿಯ ನಿರ್ಮಾಣದಲ್ಲಿ, ರಾಜಾಂಗಣ, ಗೀತಾಮಂದಿರ ನಿರ್ಮಾಣ ಸಂದರ್ಭ ವಿಶೇಷ ಮುತುವರ್ಜಿ ವಹಿಸಿದ್ದ ಮಧ್ವರಾಜ್ ಭಟ್‌ರನ್ನು ಪೇಜಾವರ ಹಿರಿಯಶ್ರೀಗಳು ಶ್ರೀಕೃಷಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಿದ್ದರು. ನೇಪಾಳ, ಗುಜರಾತ್‌ನ ದ್ವಾರಕಾ, ದ.ಕ, ಉಡುಪಿ, ಬೆಂಗಳೂರು, ಕೋಲಾರ, ಕುಂಭಾಶಿ ಅಯ್ಯಪ್ಪ ಸ್ವಾಮಿ ದೇವಾಲಯ, ಸಹಿತ ಹಲವೆಡೆ ದೇವಸ್ಥಾನ ಮತ್ತು ಮಠಗಳ ಮರು ನಿರ್ಮಾಣ ಕಾಮಗಾರಿಗೆ ನಕ್ಷೆ ಗಳನ್ನು ತಯಾರಿಸಿ ಕಟ್ಟಡಗಳ ನಿರ್ಮಾಣಕ್ಕೆ ರೂಪು ರೇಷೆಗಳನ್ನು ತಯಾರಿಸಿ ಕೊಡುತ್ತಿದ್ದರು.
ಸಾತ್ವಿಕ ಸ್ವಭಾವದ, ಜನಾನುರಾಗಿಯಾಗಿದ್ದ ಮಧ್ವರಾಜ್ ಭಟ್ ಪತ್ನಿ,ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಅಷ್ಟಮಠಗಳ ಯತಿಗಳು, ಉಡುಪಿ ಶಾಸಕ ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್‌ಮಧ್ವರಾಜ್ ಸಹಿತ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.