ಜಮ್ಮು ಕಾಶ್ಮೀರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕವಾದ ಬೆನ್ನಿಗೆ ಗುಲಾಂ ನಬಿ ಆಝಾದ್ ರಾಜೀನಾಮೆ

ಗುಲಾಂ ನಬಿ ಆಝಾದ್ (File photo/PTI)
ಹೊಸದಿಲ್ಲಿ,ಆ.17: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಝಾದ್ ಅವರು ಪಕ್ಷದ ಜಮ್ಮುಕಾಶ್ಮೀರ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ನಾಯಕತ್ವದೊಂದಿಗೆ ಇತ್ತೀಚಿನ ದಿನಗಳಲ್ಲಿ ತೀವ್ರ ಭಿನ್ನಾಭಿಪ್ರಾಯ ಹೊಂದಿದ್ದ ಆಝಾದ್ ಅವರನ್ನು ಇತ್ತೀಚೆಗಷ್ಟೇ ಜಮ್ಮುಕಾಶ್ಮೀರದಲ್ಲಿ ಪಕ್ಷದ ಚುನಾವಣಾ ಪ್ರಚಾರ ಸಮಿತಿಯ ವರಿಷ್ಠರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಆಝಾದ್ ಅವರು ಈ ಪಕ್ಷದ ಅಖಿಲ ಭಾರತ ರಾಜಕೀಯ ವ್ಯವಹಾರಗಳ ಸಮಿತಿಯ ಸದಸ್ಯರಾಗಿದ್ದರು.
ತನ್ನನ್ನು ಈಗ ಜಮ್ಮುಕಾಶ್ಮೀರದ ಚುನಾವಣಾ ಪ್ರಚಾರ ಸಮಿತಿಗೆ ನೇಮಕ ಮಾಡಿರುವುದು ತನಗಾದ ಹಿಂಬಡ್ತಿ ಎಂದು ಅವರು ಭಾವಿಸಿದ್ದಾರೆಂದು, ಕೆಲವು ನಿಕಟವರ್ತಿಗಳು ಹೇಳಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕರಾದ ಆಝಾದ್ ಅವರು ಈ ಹಿಂದೆ ಜಮ್ಮುಕಾಶ್ಮೀರದ ಮುಖ್ಯಮಂತ್ರಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕೇಂದ್ರ ಸಚಿವರಾಗಿ ಅವರು ಕಾರ್ಯನಿರ್ವಹಿಸಿದ್ದರು ಹಾಗೂ ಪಕ್ಷದ ಪ್ರಮುಖ ಹುದ್ದೆಗಳನ್ನು ಆಲಂಕರಿಸಿದ್ದರು. ಆದಾಗ್ಯೂ ಎರಡು ವರ್ಷಗಳ ಹಿಂದೆ ಪಕ್ಷದ ಸಾಂಸ್ಥಿಕ ಸಂಘಟನೆಯಲ್ಲಿ ಸಮಗ್ರ ಬದಲಾವಣೆಗೆ ಆಗ್ರಹಿಸಿ ಪಕ್ಷಾಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಪತ್ರ ಬರೆದ ಪಕ್ಷದ 23 ನಾಯಕರಲ್ಲಿ ಆಝಾದ್ ಕೂಡಾ ಒಬ್ಬರಾಗಿದ್ದರು.
ತನ್ನ ನಿಕಟವರ್ತಿ ಗುಲಾಮ್ ಅಹ್ಮದ್ ಮೀರ್ ಅವರನ್ನು ಪಕ್ಷದ ಜಮ್ಮುಕಾಶ್ಮೀರ ಘಟಕದ ಅಧ್ಯಕ್ಷ ಸ್ಥಾನದಿಂದ ಕೈಬಿಟ್ಟ ಕೆಲವೇ ವಾರಗಳ ಬಳಿಕ ಆಝಾದ್ ರಾಜೀನಾಮೆ ಸಲ್ಲಿಸಿದ್ದಾರೆ. ಮಿರ್ ಅವರು ಪಕ್ಷದ ಅಧ್ಯಕ್ಷ ಹುದ್ದೆಯನ್ನು ಕಳೆದ ತಿಂಗಳು ತೊರೆದಿದ್ದರು.
ಕೇಂದ್ರಾಡಳಿತ ಜಮ್ಮುಕಾಶ್ಮೀರದಲ್ಲಿ ಮಹತ್ವದ ಸಾಂಸ್ಥಿಕ ಬದಲಾವಣೆಗಳನ್ನು ಮಾಡಿರುವ ಕಾಂಗ್ರೆಸ್ ಪಕ್ಷವು ಮೀರ್ ಅವರ ಸ್ಥಾನದಲ್ಲಿ ವಿಕಾರ್ ರಸೂಲ್ ವಾನಿ ಅವರನ್ನು ಪಕ್ಷಾಧ್ಯಕ್ಷರನ್ನಾಗಿ ನೇಮಿಸಿತ್ತು.
ಜಮ್ಮುಕಾಶ್ಮೀರದ ಚುನಾವಣಾ ಪ್ರಚಾರ ಸಮಿತಿ, ರಾಜಕೀಯ ವ್ಯವಹಾರಗಳ ಸಮಿತಿ, ಸಮನ್ವಯ ಸಮಿತಿ, ಪ್ರಣಾಳಿಕೆ ಸಮಿತಿ, ಪ್ರಚಾರ ಹಾಗೂ ಪ್ರಕಟಣಾ ಸಮಿತಿ, ಶಿಸ್ತುಕ್ರಮ ಸಮಿತಿ ಹಾಗೂ ಚುನಾವಣಾ ಪ್ರಚಾರ ಸಮಿತಿಯನ್ನು ಸೋನಿಯಾ ಅವರು ಬುಧವಾ ರಚಿಸಿದ್ದರು.
ಮತದಾರ ಪಟ್ಟಿಯ ಅಂತಿಮಗೊಳಿಸುವಿಕೆ ಹಾಗೂ ಕ್ಷೇತ್ರಗಳ ಮರುವಿಂಗಡಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಜಮ್ಮುಕಾಶ್ಮೀರದಲ್ಲಿ ಚುನಾವಣೆಗಳನ್ನು ನಡೆಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಆದಾಗ್ಯೂ ಚಳಿಗಾಲ ಸಮೀಪಿಸುತ್ತಿರುವುದರಿಂದ ಕ್ಷೇತ್ರಗಳ ಪುನರ್ವಿಂಗಡಣೆ ಹಾಗೂ ಮತದಾರ ಪಟ್ಟಿಯ ಪರಿಷ್ಕರಣೆ ಪೂರ್ಣಗೊಳ್ಳುವ ಸಾಧ್ಯತೆ ಕ್ಷೀಣವಾಗಿರುವುದರಿಂದ, ಚುನಾವಣೆ ಈ ವರ್ಷ ನಡೆಯುವ ಸಾಧ್ಯತೆ ಕಡಿಮೆಯೆನ್ನಲಾಗಿದೆ.







