200 ಕೋ.ರೂ. ಮೊತ್ತದ ಸುಲಿಗೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಆರೋಪಿ

ಹೊಸದಿಲ್ಲಿ: ಸುಮಾರು 200 ಕೋಟಿ ರೂ. ಮೊತ್ತದ ಸುಲಿಗೆ (200-Crore Extortion Case)ಮಾಡಿದ ಆರೋಪ ಎದುರಿಸುತ್ತಿರುವ ಸುಕೇಶ್ ಚಂದ್ರಶೇಖರ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ (Actor Jacqueline Fernandez )ಅವರನ್ನು ಆರೋಪಿ ಎಂದು ಹೆಸರಿಸಲಾಗಿದೆ.
ಸುಲಿಗೆ ಪ್ರಕರಣದ ಹಣದ ಜಾಡು ಹಿಡಿದು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಈಡಿ) ದಿಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಪೂರಕ ಆರೋಪಪಟ್ಟಿಯಲ್ಲಿ ನಟಿಯನ್ನು ಆರೋಪಿ ಎಂದು ಹೆಸರಿಸಲಾಗಿದೆ.
ಇದಕ್ಕೂ ಮುನ್ನ ನಟಿಗೆ ಸೇರಿದ ಆಸ್ತಿಯನ್ನು ಈಡಿ ಮುಟ್ಟುಗೋಲು ಹಾಕಿಕೊಂಡಿತ್ತು ಮತ್ತು ಆಕೆಯನ್ನು ಕೂಡ ವಿಚಾರಣೆ ನಡೆಸಿತ್ತು. ಎಪ್ರಿಲ್‌ನಲ್ಲಿ ಸಂಸ್ಥೆಯು ನಟಿಗೆ ಸೇರಿದ 7 ಕೋಟಿ ರೂ. ಆಸ್ತಿಯನ್ನು ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.
ಸುಲಿಗೆ ಸೇರಿದಂತೆ ಕ್ರಿಮಿನಲ್ ಚಟುವಟಿಕೆಗಳಿಂದ ಸುಕೇಶ್ ಚಂದ್ರಶೇಖರ್ ಗಳಿಸಿದ ಆದಾಯದಿಂದ ಜಾಕ್ವೆಲಿನ್ ಫೆರ್ನಾಂಡಿಸ್ ಗೆ 5.71 ಕೋಟಿರೂ. ಮೌಲ್ಯದ ವಿವಿಧ ಉಡುಗೊರೆಗಳನ್ನು ನೀಡಿದ್ದ. ಚಂದ್ರಶೇಖರ್ ಈ ಉಡುಗೊರೆಯನ್ನು ನೀಡಲು ತಮ್ಮ ದೀರ್ಘಕಾಲದ ಸಹವರ್ತಿ ಹಾಗೂ ಸಹ ಆರೋಪಿ ಪಿಂಕಿ ಇರಾನಿ ಮೂಲಕ ನಟಿಗೆ ನೀಡಿದ್ದಾರೆ ಎಂದು ಈಡಿ ಹೇಳಿಕೆಯಲ್ಲಿ ತಿಳಿಸಿತ್ತು.







