ಉಚಿತ ವಿದ್ಯುತ್,ಉಚಿತ ನೀರಿನ ಭರವಸೆಯನ್ನು ಪುಕ್ಕಟೆ ಕೊಡುಗೆಗಳು ಎಂದು ಪರಿಗಣಿಸಲು ಸಾಧ್ಯವೇ?:ಸುಪ್ರೀಂಕೋರ್ಟ್ ಪ್ರಶ್ನೆ

ಹೊಸದಿಲ್ಲಿ,ಆ.17: ಉಚಿತ ಕೊಡುಗೆಗಳು ಹಾಗೂ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳು ಇವೆರಡರ ನಡುವೆ ವ್ಯತ್ಯಾಸವನ್ನು ಕಾಣುವುದು ತುಂಬಾ ಕಷ್ಟವೆಂದು ಸುಪ್ರೀಂಕೋರ್ಟ್ ಬುಧವಾರ ಅಭಿಪ್ರಾಯಿಸಿದೆ. ಉಚಿತ ಶಿಕ್ಷಣ ಹಾಗೂ ಕುಡಿಯುವ ನೀರಿನ ಭರವಸೆಗಳನ್ನು ಉಚಿತಕೊಡುಗೆಯೆಂದು ಘೋಷಿಸಲು ಸಾಧ್ಯವೇ ಎಂದು ಅದು ಪ್ರಶ್ನಿಸಿದೆ.
ಚುನಾವಣಾ ಪ್ರಚಾರದ ಸಂದರ್ಭಗಳಲ್ಲಿ ರಾಜಕೀಯ ಪಕ್ಷಗಳು ಮತದಾರರಿಗೆ ‘ಉಚಿತ ಕೊಡುಗೆಗಳ ’ ಭರವಸೆ ನೀಡುವುದಕ್ಕೆ ಅವಕಾಶ ನೀಡಕೂಡದೆಂದು ಕೋರಿ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ ಅರ್ಜಿಯ ಆಲಿಕೆಯನ್ನು ನಡೆಸುತ್ತಿರುವ ಭಾರತದ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ತ್ರಿಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ಕೇಳಬೇಕೆಂದು ಆಗ್ರಹಿಸಿ ಆಮ್ ಆದ್ಮಿಪಕ್ಷ, ಕಾಂಗ್ರೆಸ್ ಹಾಗೂ ಡಿಎಂಕೆಯಂತಹ ರಾಜಕೀಯ ಪಕ್ಷಗಳು ಸುಪ್ರೀಂಕೋರ್ಟ್ಗೆ ಮಧ್ಯಪ್ರವೇಶ (ಇಂಟರ್ವೆನ್ಶನ್) ಅರ್ಜಿಯನ್ನು ಸಲ್ಲಿಸಿದ್ದವು. ರಾಜಕೀಯ ಪಕ್ಷಗಳು ಭರವಸೆ ನೀಡುವುದನ್ನು ತಡೆಯಲು ನಮಗೆ ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ರಮಣ ಬುಧವಾರ ವಿಚಾರಣೆಯ ಸಂದರ್ಭ ಮೌಖಿಕವಾಗಿ ತಿಳಿಸಿದರು.
‘‘ಇಲ್ಲಿ ಮೂಡಿಬರುವ ಪ್ರಶ್ನೆಯೇನೆಂದರೆ ಯಾವುದು ಸರಿಯಾದ ಭರವಸೆಗಳು ಎಂಬುದಾಗಿದೆ?. ಉಚಿತ ಶಿಕ್ಷಣವನ್ನು ನೀಡುವ ಭರವಸೆಯನ್ನು ಉಚಿತ ಕೊಡುಗೆ ಎಂದು ಬಣ್ಣಿಸಲು ಸಾಧ್ಯವೇ?, ಉಚಿತ ಕುಡಿಯುವ ನೀರು, ಕನಿಷ್ಠ ಅಗತ್ಯ ಯೂನಿಟ್ನಷ್ಟು ಉಚಿತ ವಿದ್ಯುತ್ ಇತ್ಯಾದಿ ಭರವಸೆಗಳನ್ನು ಉಚಿತ ಕೊಡುಗೆಗಳು ಎಂದು ಪರಿಗಣಿಸಬೇಕೇ ಅಥವಾ ಉಚಿತ ಇಲೆಕ್ಟ್ರಾನಿಕ್ ಉಪಕರಣಗಳ ವಿತರಣೆಯನ್ನು ಸಾಮಾಜಿಕ ಕಲ್ಯಾಣ ಕಾರ್ಯಕ್ರಮ ಎಂದು ಬಣ್ಣಿಸಲು ಸಾಧ್ಯವೇ ? ಎಂದು ನ್ಯಾಯ ಪೀಠ ಅರ್ಜಿದಾರರನ್ನು ಪ್ರಶ್ನಿಸಿತು.
ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಸಾರ್ವಜನಿಕ ಹಣವನ್ನು ಖರ್ಚು ಮಾಡುವ ಸರಿಯಾದ ಮಾರ್ಗವೆಂದರೆ ಯಾವುದು ಎಂಬುದೇ ನ್ಯಾಯಾಲಯವನ್ನು ಮುಂದಿರುವ ಪ್ರಶ್ನೆಯಾಗಿದೆ ಎಂದು ರಮಣ ತಿಳಿಸಿದರು.
ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷಗಳು ನೀಡುವ ಭರವಸೆಗಳು ಅವುಗಳ ಗೆಲುವಿಗೆ ಕಾರಣವಾಗುತ್ತವೆ. ಇದೇ ವೇಳೆ ಮಹಾತ್ಮಾ ಗಾಂಧೀಜಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಂತಹ ಕಾರ್ಯಕ್ರಮಗಳು ಜನಸಾಮಾನ್ಯರು ಘನತೆಯಿಂದ ಬದುಕುವುದಕ್ಕೆ ಅವಕಾಶ ಮಾಡಿಕೊಟ್ಟಿದೆಯೆಂದು ಅವರು ಹೇಳಿದರು. ಉಚಿತ ಕೊಡುಗೆಗಳು ಎಂದರೆ ಯಾವುವು ಎಂಬ ಬಗ್ಗೆ ಸಂಬಂಧಪಟ್ಟ ಎಲ್ಲಾ ಪಕ್ಷದಾರರ ಅಹವಾಲುಗಳನ್ನು ಆಲಿಸುವುದಾಗಿಯೂ ನ್ಯಾಯಪೀಠ ತಿಳಿಸಿತು.
ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಆಗಸ್ಟ್ 22ರಂದು ನಡೆಸಲಿದೆ.







