ರೊಹಿಂಗ್ಯಾ ನಿರಾಶ್ರಿತರು ದಿಗ್ಬಂಧನ ಕೇಂದ್ರಗಳಲ್ಲಿಯೇ ಇರಬೇಕು, ಫ್ಲ್ಯಾಟ್‍ಗಳಿಗೆ ಸ್ಥಳಾಂತರಿಸುವಂತಿಲ್ಲ: ಕೇಂದ್ರ

ಹೊಸದಿಲ್ಲಿ: ರೊಹಿಂಗ್ಯಾ ನಿರಾಶ್ರಿತರನ್ನು ಅವರ ದೇಶಕ್ಕೆ ಕಳುಹಿಸುವ ತನಕ ಅವರನ್ನು ದಿಗ್ಬಂಧನ ಕೇಂದ್ರದಲ್ಲಿರಿಸಬೇಕೆಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. ರೊಹಿಂಗ್ಯಾ ನಿರಾಶ್ರಿತರನ್ನು ದಿಗ್ಬಂಧನ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂದು ಹೇಳಿರುವ ದಿಲ್ಲಿ ಸರಕಾರ ಅವರನ್ನೆಲ್ಲಿ ಸಾಗಿಸಲಾಗಿದೆ ಎಂದು ತಿಳಿಸಿಲ್ಲ, ಈ ಕುರಿತು ತಕ್ಷಣ ಮಾಹಿತಿ ನೀಡಬೇಕು ಎಂದು ಸಚಿವಾಲಯ ಸೂಚಿಸಿದೆ.
ರೊಹಿಂಗ್ಯಾ ಅಕ್ರಮ ವಲಸಿಗರಿಗೆ ಹೊಸದಿಲ್ಲಿಯ ಬಕ್ಕರ್ವಾಲ ಎಂಬಲ್ಲಿ ಇಡಬ್ಲ್ಯುಎಸ್ ಫ್ಲ್ಯಾಟ್‍ಗಳನ್ನು ಒದಗಿಸುವಂತೆ ಗೃಹ ವ್ಯವಹಾರಗಳ ಸಚಿವಾಲಯ ಯಾವುದೇ ಸೂಚನೆ ನೀಡಿಲ್ಲ ಎಂದು ಕೇಂದ್ರ ಇಂದು ಸ್ಪಷ್ಟೀಕರಣ ನೀಡಿದೆಯಲ್ಲದೆ ವಲಸಿಗರನ್ನು ಬೇರೆಡೆಗೆ ಸ್ಥಳಾಂತರಿಸುವಂತೆಯೂ ಸೂಚನೆ ನೀಡಿಲ್ಲ ಎಂದು ಹೇಳಿದೆ.
ರೊಹಿಂಗ್ಯಾ ನಿರಾಶ್ರಿತರು ಅವರು ಈಗ ಇರುವಲ್ಲಿಯೇ ಅವರನ್ನಿರಿಸಬೇಕು, ಅವರ ದೇಶಕ್ಕೆ ಅವರನ್ನು ವಾಪಸ್ ಕಳುಹಿಸುವ ವಿಚಾರ ಕುರಿತಂತೆ ಗೃಹ ಸಚಿವಾಲಯ ಈಗಾಗಲೇ ಪ್ರಯತ್ನಿಸುತ್ತಿದೆ ಎಂದು ಇಂದು ಸರಣಿ ಟ್ವೀಟ್‍ಗಳ ಮೂಲಕ ಸರಕಾರ ತಿಳಿಸಿದೆ.
ಇದಕ್ಕೂ ಮುಂಚೆ ಕೇಂದ್ರ ಗೃಹ ಮತ್ತು ನಗರ ವ್ಯವಹಾರಗಳ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಈ ಕುರಿತು ಮಾತನಾಡಿ ರೊಹಿಂಗ್ಯಾ ನಿರಾಶ್ರಿತರನ್ನು ದಿಲ್ಲಿ ಹೊರವಲಯದ ಬಕ್ಕರ್ವಾಲದಲ್ಲಿನ ಅಪಾರ್ಟುಮೆಂಟ್‍ಗಳಿಗೆ ಸ್ಥಳಾಂತರಿಸಲಾಗುವುದು, ಮೂಲಭೂತ ಸೌಕರ್ಯಗಳು ಮತ್ತು ಪೊಲೀಸ್ ರಕ್ಷಣೆಯನ್ನೊದಗಿಸಲಾಗುವುದು ಎಂದಿದ್ದರು. ಈ ಫ್ಲ್ಯಾಟ್‍ಗಳನ್ನು ಹೊಸದಿಲ್ಲಿ ಮುನಿಸಿಪಲ್ ಕೌನ್ಸಿಲ್ ನಿರ್ಮಿಸುತ್ತಿದೆ.
"ದೇಶದಲ್ಲಿ ಆಶ್ರಯ ಬಯಸುವ ಎಲ್ಲರನ್ನೂ ಭಾರತ ಸ್ವಾಗತಿಸಿದೆ. ಐತಿಹಾಸಿಕ ನಿರ್ಧಾರದಲ್ಲಿ ಅವರನ್ನು ಇಡಬ್ಲ್ಯುಎಸ್ ಫ್ಲ್ಯಾಟ್‍ಗಳಿಗೆ ಸ್ಥಳಾಂತರಿಸಲಾಗುವುದು" ಎಂದು ಪುರಿ ಟ್ವೀಟ್ ಮಾಡಿದ್ದರು.







