ಕೋಮು ಸಾಮರಸ್ಯ ಕಾಪಾಡುವುದು ನಮ್ಮ ಮೊದಲ ಆದ್ಯತೆ: ಉಡುಪಿ ಜಿಲ್ಲಾ ಎಸ್ಪಿ ಹಾಕೆ ಅಕ್ಷಯ್ ಮಚ್ಚೀಂದ್ರ

ಹಾಕೆ ಅಕ್ಷಯ್ ಮಚ್ಚೀಂದ್ರ
ಉಡುಪಿ : ಉಡುಪಿ ಜಿಲ್ಲೆಯಲ್ಲಿ ಕೋಮು ಸಾಮರಸ್ಯ ಕಾಪಾಡುವುದು ನಮ್ಮ ಮೊತ್ತ ಮೊದಲ ಆದ್ಯತೆಯಾಗಿದೆ. ಶಾಂತಿ ಸುವ್ಯವಸ್ಥೆ ಹಾಗೂ ಸೌಹಾರ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು. ಈ ಜಿಲ್ಲೆಯ ಜನ ಒಳ್ಳೆಯವರಿದ್ದಾರೆ ಮತ್ತು ಬುದ್ಧಿವಂತರಿದ್ದಾರೆ. ಪ್ರಗತಿಪರ ಜಿಲ್ಲೆ ಎನಿಸಿರುವ ಉಡುಪಿಯ ಜನ ಕೋಮು ಸೂಕ್ಷ್ಮ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತಾರೆ ಎಂಬ ನಿರೀಕ್ಷೆ ನಮಗೆ ಇದೆ ಎಂದು ಉಡುಪಿ ಜಿಲ್ಲಾ ನೂತನ ಪೊಲೀಸ್ ಅಧೀಕ್ಷಕ ಹಾಕೆ ಅಕ್ಷಯ್ ಮಚ್ಚೀಂದ್ರ ಹೇಳಿದ್ದಾರೆ.
ಉಡುಪಿ ಜಿಲ್ಲಾ ನಿಗರ್ಮನ ಪೊಲೀಸ್ ಅಧೀಕ್ಷಕ ಎನ್.ವಿಷ್ಣುವರ್ಧನ್ ಅವರಿಂದ ಬುಧವಾರ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಉಡುಪಿ ಜಿಲ್ಲಾ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿರುವುದು ತುಂಬಾ ಹೆಮ್ಮೆ ಎನಿಸುತ್ತದೆ. ಉಡುಪಿ ಜಿಲ್ಲೆಗೆ ಒಳ್ಳೆಯ ಹೆಸರು ಇದೆ. ಸುಸಂಸ್ಕೃತ ಜಿಲ್ಲೆಯಾಗಿ, ಶೈಕ್ಷಣಿಕ, ಪ್ರವಾಸೋದ್ಯಮದಲ್ಲಿ ಸಾಕಷ್ಟು ಹೆಸರುವಾಸಿಯಾಗಿದೆ. ಉಡುಪಿ ಜಿಲ್ಲೆ ರಚನೆಯಾಗಿ ಈ ವರ್ಷಕ್ಕೆ 25 ವರ್ಷಗಳಾಗಿವೆ. ಇಂತಹ ಸಂದರ್ಭದಲ್ಲಿ ನನಗೆ ಈ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ ಎಂದು ಅವರು ತಿಳಿಸಿದರು.
ಜನಸ್ನೇಹಿಯಾಗಿ ಕರ್ತವ್ಯ
ಮುಂದಿನ ದಿನಗಳಲ್ಲಿ ಆದ್ಯತೆ ಮೇರೆಗೆ ಜನರ ನಿರೀಕ್ಷೆಗೆ ತಕ್ಕಂತೆ, ಜನಸ್ನೇಹಿ ಯಾಗಿ, ಜನರ ಅಗತ್ಯತೆಗಳನ್ನು ತಿಳಿದುಕೊಂಡು ಒಳ್ಳೆಯ ಕೆಲಸ ಮಾಡಲಾಗುವುದು. ಸಾರ್ವಜನಿಕರು, ಕಿರಿಯ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಎಲ್ಲರೊಂದಿಗೆ ಸಮನ್ವಯ ಸಾಧಿಸಿ ಉತ್ತಮವಾಗಿ ಕಾರ್ಯನಿರ್ವಹಿಸಲಾಗುವುದೆಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು, ಪ್ರಮುಖ ಅಪರಾಧ ಪ್ರಕರಣಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವುದು ಮತ್ತು ಸಂಚಾರ ನಿಯಂತ್ರಣ ಹಾಗೂ ಎಲ್ಲ ಅಕ್ರಮ ಚಟುವಟಿಕೆಗಳ ವಿರುದ್ಧ ಕ್ರಮ ಜರಗಿಸು ವುದು ನಮ್ಮ ಇಲಾಖೆಯ ಪ್ರಮುಖ ಆದ್ಯತೆಯಾಗಿದೆ ಎಂದರು.
ಫೋನ್ ಇನ್ಗೆ ಚಿಂತನೆ
ಜನರು ಯಾವುದೇ ಸಮಸ್ಯೆ ಇದ್ದರೂ ನನ್ನೊಂದಿಗೆ ಹಾಗೂ ಇಲಾಖೆಯ ಅಧಿಕಾರಿಗಳೊಂದಿಗೆ ನೇರವಾಗಿ ಸಂಪರ್ಕ ಸಾಧಿಸಿ ಯಾವುದೇ ವಿಚಾರ, ಸಮಸ್ಯೆಗೆ ಪರಿಹಾರ ಅಥವಾ ನಮ್ಮ ಸಹಾಯವನ್ನು ಪಡೆಯಬಹುದು. ಈ ನಿಟ್ಟಿನಲ್ಲಿ ಫೋನ್ ಇನ್ ಕಾರ್ಯಕ್ರಮ ನಡೆಸುವ ಬಗ್ಗೆ ಮುಂದೆ ನಿರ್ಧಾರ ಮಾಡಲಾಗುವುದು ಎಂದು ಎಸ್ಪಿ ಅಕ್ಷಯ್ ಹೇಳಿದರು.
ಪೊಲೀಸ್ ಮತ್ತು ಜನರ ನಡುವಿನ ಅಂತರವನ್ನು ಕಡಿಮೆ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು. ನಿರಂತರ ಜನ ಸಂಪರ್ಕ ಸಭೆ, ಇಲಾಖೆ ಅಧಿಕಾರಿಗಳೊಂದಿಗೆ ಮುಕ್ತ ಸಂವಾದ ನಡೆಸಲು ಅವಕಾಶ ಮಾಡಿಕೊಡಲಾಗುವುದು. ಜನರಿಗೆ ಠಾಣಾ ಮಟ್ಟದಲ್ಲಿ ದೂರು ನೀಡಲು ಭಯ ಇದ್ದರೆ ಮೇಲಾಧಿಕಾರಿ ಗಳನ್ನು ನೇರವಾಗಿ ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.
ಡ್ರಗ್ಸ್ ಮಾಫಿಯಾ ತಡೆಗೆ ಕ್ರಮ
ಜಿಲ್ಲೆಯ ಮಣಿಪಾಲ ಸೇರಿದಂತೆ ಎಲ್ಲ ಕಡೆಗಳಲ್ಲಿ ನಡೆಯುತ್ತಿರುವ ಡ್ರಗ್ಸ್ ಮಾಫಿಯಾ ದಂಧೆಯನ್ನು ತಡೆಗಟ್ಟಲು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗುವುದು. ಈ ಮಾಫಿಯಾದಿಂದ ಬಂದ ಹಣ ಭಯೋತ್ಪಾದನಾ ಚಟುವಟಿಕೆಗಳಿಗೆ ಹೋಗುತ್ತಿದೆ. ಅಲ್ಲದೆ ನಮ್ಮ ರಾಷ್ಟ್ರದ ಯುವ ಸಂಪತ್ತನ್ನು ಹಾಳು ಮಾಡುವ ಈ ಕೆಟ್ಟ ಚಟುವಟಿಕೆಯನ್ನು ನಾವು ತಡೆಗಟ್ಟುತ್ತೇವೆ ಎಂದು ನೂತನ ಎಸ್ಪಿ ಅಕ್ಷಯ್ ಎಂ.ಹಾಕೆ ತಿಳಿಸಿದರು.
ನಗರದಲ್ಲಿ ನಡೆಯುತ್ತಿರುವ ಸಾವರ್ಕರ್ ಫ್ಲೆಕ್ಸ್ ವಿವಾದದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ವಿವಾದದ ಬಗ್ಗೆ ನಿಗರ್ಮನ ಎಸ್ಪಿ ವಿಷ್ಣುವರ್ಧನ್ ಅವರ ಜೊತೆ ಮಾತನಾಡಿ ತಿಳಿದುಕೊಳ್ಳುತ್ತೇನೆ. ಈ ಪ್ರಕರಣ ಯಾವ ರೀತಿ ಆರಂಭಗೊಂಡಿದೆ ಎಂಬುದನ್ನು ತಿಳಿದುಕೊಂಡು ಕ್ರಮ ತೆಗೆದುಕೊಳ್ಳಲಾಗು ವುದು ಎಂದು ಅವರು ಹೇಳಿದರು.
ಮೂರನೇ ಪ್ರಯತ್ನದಲ್ಲಿ ಐಪಿಎಸ್
ಮೂಲತಃ ಮಹಾರಾಷ್ಟ್ರ ರಾಜ್ಯದ ನಾಸಿಕ್ ಜಿಲ್ಲೆಯವರಾಗಿರುವ ಅಕ್ಷಯ್ ಎಂ.ಹಾಕೆ, 2015ನೆ ಐಪಿಎಸ್ ಬ್ಯಾಚಿನವರಾಗಿದ್ದಾರೆ. 2011ರಲ್ಲಿ ಕಂಪ್ಯೂಟರ್ ಇಂಜಿನಿಯರ್ ಪದವಿ ಮಾಡಿದ ಇವರು, ಯುಪಿಎಸ್ಸಿ ಪರೀಕ್ಷೆಯ ಮೂರು ಪ್ರಯತ್ನದಲ್ಲಿ ಐಪಿಎಸ್ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಮೊದಲ ಪ್ರಯತ್ನದಲ್ಲಿ ಡಿಫೆನ್ಸ್ ಸರ್ವಿಸ್ ಮತ್ತು ಎರಡನೇ ಪ್ರಯತ್ನದಲ್ಲಿ ಫಾರಿನ್ ಸರ್ವಿಸ್ಗೆ ಆಯ್ಕೆಯಾಗಿದ್ದರು.
ಐಪಿಎಸ್ ತರಬೇತಿ ಮುಗಿಸಿಕೊಂಡು ದ.ಕ. ಜಿಲ್ಲೆಯಲ್ಲಿ ಆರು ತಿಂಗಳ ಕಾಲ ಪ್ರೊಭೇಷನರಿ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದರು. ನಂತರ ಗುಲ್ಬರ್ಗಾದಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರಾಗಿ, ರಾಜ್ಯ ಗುಪ್ತಚಾರದಲ್ಲಿ ಎಸ್ಪಿಯಾಗಿ, ಚಿಕ್ಕಮಗಳೂರು ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಚಿಕ್ಕಮಗಳೂರಿನಿಂದ ಆ.6ರಂದು ವರ್ಗಾವಣೆಗೊಂಡ ಇವರು, 10 ದಿನಗಳ ಬಳಿಕ ಉಡುಪಿ ಜಿಲ್ಲಾ ನೂತನ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.








