ಎಲ್ಲಾ ಶಾಲಾ-ಕಾಲೇಜುಗಳಲ್ಲಿ ರಾಷ್ಟ್ರಗೀತೆ ಹಾಡುವುದು ಕಡ್ಡಾಯಗೊಳಿಸಿದ ರಾಜ್ಯ ಸರಕಾರ

ಬೆಂಗಳೂರು, ಆ. 17: ರಾಜ್ಯದ ಎಲ್ಲ ಸರಕಾರಿ ಮತ್ತು ನೋಂದಾಯಿತ ಖಾಸಗಿ ಅನುದಾನಿತ/ಅನುದಾನ ರಹಿತ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರತಿದಿನ ಮುಂಜಾನೆ ಸಾಮೂಹಿಕ ಪ್ರಾರ್ಥನೆ ವೇಳೆ ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆ ಹಾಡಿಸುವುದನ್ನು ಕಡ್ಡಾಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಬುಧವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರಕಾರದ ಅಪರ ಕಾರ್ಯದರ್ಶಿ ಚಂದ್ರಶೇಖರ್ ಆದೇಶ ಹೊರಡಿಸಿದ್ದು, ಶಾಲೆ ಮತ್ತು ಕಾಲೇಜುಗಳಲ್ಲಿ ವಿಧ್ಯಾರ್ಥಿಗಳು ಒಂದೆಡೆ ಸೇರಿ ಸಾಮೂಹಿಕ ಪ್ರಾರ್ಥನೆ ಗೆ ಸ್ಥಳಾವಕಾಶ ಕೊರತೆ ಇದ್ದರೆ ತರಗತಿಯ ಕೊಠಡಿಗಳಲ್ಲಿ ಪ್ರತಿದಿನ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಿದೆ ಎಂದು ತಿಳಿಸಲಾಗಿದೆ.
ಕರ್ನಾಟಕ ಶಿಕ್ಷಣ ಕಾಯಿದೆ 1983ರ ಸೆಕ್ಷನ್ 7(2) ಜಿ ಅನ್ವಯ ಸಂವಿಧಾನದಲ್ಲಿ ಹೇಳಲಾಗಿರುವ ನಾಗರಿಕ ಪ್ರಜ್ಞೆ ಯನ್ನು ವಿದ್ಯಾರ್ಥಿಗಳಿಗೆ ಬೋಧಿಸುವ ಹಾಗು ಸಂವಿಧಾನ ಅನುಸರಿಸುವ ದೃಷ್ಟಿಯಿಂದ ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಯನ್ನು ಗೌರವಿಸುವ ಸಂಸ್ಕೃತಿಯ ನ್ನು ಬೆಳೆಸಲು ಮೇಲ್ಕಂಡ ಕ್ರಮ ವಹಿಸಲಾಗಿದೆ ಎಂದು ತಿಳಿಸಲಾಗಿದೆ.