ಬಜ್ಪೆಯಲ್ಲಿ "ಚೇರ್ಲ್ ಒರು ನಾಲ್" ವಿಶೇಷ ಸ್ಪರ್ಧಾ ಕಾರ್ಯಕ್ರಮ

ಬಜ್ಪೆ, ಆ.17: ಫ್ರೆಂಡ್ರ್ಸ್ ವತಿಯಿಂದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ "ರಾಜ್ಯ ರಕ್ಷಿಸಿ" ಅಭಿಯಾನದ ಅಂಗವಾಗಿ ಸಾರ್ವಜನಿಕರಿಗಾಗಿ ಚೇರ್ಲ್ ಒರು ನಾಲ್" ಎಂಬ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.
ಊರಿನ ಹಿರಿಯ ನಾಗರಿಕರಾದ ಮುಹಮ್ಮದ್ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ನಮ್ಮದು ಕೃಷಿ ಪ್ರಧಾನವಾದ ದೇಶ. ಹಿಂದಿನ ಕಾಲದಲ್ಲಿ ಶೇ.90ಮಂದಿ ಕೃಷಿಯನ್ನೇ ಅವಲಂಬಿಸಿದ್ದರು. ಆದರೆ, ಕಾಲಚಕ್ರ ತಿರುಗಿದಂತೆ ಯುವಕರು ಕೃಷಿಕಡೆಗೆ ಗಮನ ಹರಿಸದೇ ಐಟಿ ಬಿಟಿ ಕಂಪೆನಿ, ವಿದೇಶಗಳಿಗೆ ತೆರಳಿ ಅಲ್ಲೇ ಉದ್ಯೋಗ ಮಾಡಿಕೊಂಡಿದ್ದಾರೆ. ಹೀಗಾಗಿ ಹಿಂದಿನ ಕಾಲದ ಕೆಲವರಷ್ಟೇ ಕೃಷಿ ಮಾಡಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದರು.
ಹಿಂದಿನ ಕಾಲದಲ್ಲಿ ಅನಾರೋಗ್ಯಕ್ಕೀಡಾಗುತ್ತಿದ್ದುದು ಅಪರೂಪ. ಯಾಕೆಂದರೆ ಎಲ್ಲರೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರಿಂದ ದೇಹಕ್ಕೆ ಮಣ್ಣಿನ ಅಂಶಗಳು ಸೇರಿಕೊಂಡು ಅನಾರೋಗ್ಯವನ್ನು ದೂರ ಇಡುತ್ತಿತ್ತು ಎಂದು ನುಡಿದರು. ಷರೀಫ್ ಬಜ್ಪೆ ಅವರು ಪ್ರಾಸ್ತಾವಿಕ ಮಾತನಾಡಿದರು.
"ಚೇರ್ಲ್ ಒರು ನಾಲ್" ವಿಶೇಷ ಕಾರ್ಯಕ್ರಮದ ನಿಮಿತ್ತ ಎಲ್ಲಾ ವಯಸ್ಕರಿಗೆ ವಿವಿಧ ಕೆಸರು ಗದ್ದೆಯ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಮಕ್ಕಳಿಗೆ ಓಟ, ಫುಟ್ಬಾಲ್, ನಿಧಿ ಶೋಧನೆ, ಹಗ್ಗ ಜಗ್ಗಾಟ ಮತ್ತು ಪುರುಷರಿಗೆ ಓಟ, ಫುಟ್ಬಾಲ್, ಹಗ್ಗ ಜಗ್ಗಾಟ, ಮಡಿಕೆ ಒಡೆಯುವ ಸ್ಪರ್ಧೆಯನ್ನು ಏರ್ಪಡಿಸಲಾಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಶಾಫಿ ಬಜ್ಪೆ ಭಾಗವಹಿಸಿದ್ದರು.
ಇದೇ ಸಂದರ್ಭ ಪ್ರತ್ಯೇಕ ಹಾಗೂ ತಂಡಗಳಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.







