ರಾಘವೇಂದ್ರ ಸಹಕಾರಿ ಬ್ಯಾಂಕ್ ಹಗರಣ | ಸಾಲ ಮರುಪಾವತಿ ಮಾಡುವವರಿಗೆ 10 ದಿನಗಳಲ್ಲಿ ದಾಖಲೆ ವಾಪಸ್: ಎಸ್.ಟಿ.ಸೋಮಶೇಖರ್

ರಾಘವೇಂದ್ರ ಸಹಕಾರಿ ಬ್ಯಾಂಕ್ ಹಗರಣ | ಸಾಲ ಮರುಪಾವತಿ ಮಾಡುವವರಿಗೆ 10 ದಿನಗಳಲ್ಲಿ ದಾಖಲೆ ವಾಪಸ್: ಎಸ್.ಟಿ.ಸೋಮಶೇಖರ್
ಬೆಂಗಳೂರು, ಆ.17: ರಾಘವೇಂದ್ರ ಸಹಕಾರಿ ಬ್ಯಾಂಕ್‍ನಲ್ಲಿ ನಡೆದಿರುವ 1,294 ಕೋಟಿ ರೂ.ಗಳ ಹಗರಣಕ್ಕೆ ಸಂಬಂಧಿಸಿದಂತೆ ಸಿಒಡಿ ಹಾಗೂ ಈ.ಡಿ. ತನಿಖೆ ನಡೆಯುತ್ತಿದೆ. ಸಾಲ ಮರುಪಾವತಿ ಮಾಡುವವರಿಗೆ 10 ದಿನಗಳಲ್ಲಿ ದಾಖಲಾತಿಗಳನ್ನು ವಾಪಸ್ ನೀಡುವ ಸಂಬಂಧ ಬ್ಯಾಂಕಿನ ಆಡಳಿತಾಧಿಕಾರಿ, ರಿಸರ್ವ್ ಬ್ಯಾಂಕ್ ಹಾಗೂ ಸಿಒಡಿ ಅಧಿಕಾರಿಗಳು ಒಪ್ಪಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಬುಧವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಕರಣವು ಸಿಒಡಿ ವಿಶೇಷ ನ್ಯಾಯಾಲಯದಲ್ಲಿದೆ. ಅಲ್ಲದೆ, ಜಾರಿ ನಿರ್ದೇಶನಾಲಯ(ಈ.ಡಿ.)ಕ್ಕೂ ದಾಖಲೆಗಳು ಸಲ್ಲಿಕೆಯಾಗಿವೆ. ಸಾಲ ಮರುಪಾವತಿ ಮಾಡುವವರಿಗೆ ದಾಖಲಾತಿಗಳನ್ನು ವಾಪಸ್ ಕೊಡುವ ಸಂಬಂಧ ಜಾರಿ ನಿರ್ದೇಶನಾಲಯಕ್ಕೆ 15 ದಿನಗಳಲ್ಲಿ ಅಗತ್ಯ ಮಾಹಿತಿಗಳನ್ನು ಒದಗಿಸಲಾಗುವುದು. ಸೆ.5ರಂದು ಈ ಅಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಲಾಗುವುದು ಎಂದರು.
ಅದೇ ರೀತಿ, ವಸಿಷ್ಠ ಸಹಕಾರಿ ಬ್ಯಾಂಕ್‍ನಲ್ಲಿ ಆಗಿರುವ 272 ಕೋಟಿ ರೂ.ಗಳ ಅಕ್ರಮಕ್ಕೆ ಸಂಬಂಧಿಸಿದಂತೆಯೂ ಚರ್ಚೆ ನಡೆಸಲಾಗಿದೆ. ಸಾಲ ವಸೂಲಾತಿ ಹಾಗೂ ಠೇವಣಿದಾರರಿಗೆ ಹಣ ವಾಪಸ್ ಕೊಡುವ ಸಂಬಂಧವೂ ಚರ್ಚಿಸಿದ್ದೇವೆ. ಇದಕ್ಕೆ ಸಂಬಂಧಿಸಿದ ಸಭೆಯನ್ನು ಸೆ.5ರಂದು ನಡೆಸಲಾಗುವುದು ಎಂದು ಸೋಮಶೇಖರ್ ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2022-23ನೆ ಸಾಲಿನ ಬಜೆಟ್‍ನಲ್ಲಿ 33 ಲಕ್ಷ ರೈತರಿಗೆ 24 ಸಾವಿರ ಕೋಟಿ ರೂ.ಸಾಲ ವಿತರಿಸುವ ಗುರಿ ನೀಡಿದ್ದಾರೆ. 33 ಲಕ್ಷ ರೈತರಲ್ಲಿ 3 ಲಕ್ಷ ಹೊಸ ರೈತರಿಗೆ ಸಾಲ ನೀಡುವಂತೆ ತಿಳಿಸಲಾಗಿದೆ. ರಾಜ್ಯದಲ್ಲಿ 21 ಡಿಸಿಸಿ ಬ್ಯಾಂಕ್‍ಗಳಿದ್ದು, 5,400 ಪ್ಯಾಕ್ಸ್‍ಗಳಿವೆ. ಸ್ವಸಹಾಯ ಗುಂಪುಗಳು, ಎಸ್ಸಿ-ಎಸ್ಟಿ ಹಾಗೂ ಅಲ್ಪಾವಧಿ ಸಾಲ ನೀಡುವ ಸಂಬಂಧ 19 ಡಿಸಿಸಿ ಬ್ಯಾಂಕುಗಳಿಗೆ ಹೆಚ್ಚುವರಿ ರಿಜಿಸ್ಟ್ರಾರ್‍ಗಳನ್ನು ನೇಮಕ ಮಾಡಲಾಗಿದೆ ಎಂದು ಅವರು ಹೇಳಿದರು.
ತುಮಕೂರು ಹಾಗೂ ಕೋಲಾರ ಡಿಸಿಸಿ ಬ್ಯಾಂಕುಗಳ ವಿರುದ್ಧ ದೂರುಗಳು ಬಂದಿವೆ. ಕೋಲಾರ ಡಿಸಿಸಿ ಬ್ಯಾಂಕ್ ಮೂಲಕ ಕೆಲವು ನಿರ್ದಿಷ್ಟ ವಿಧಾನಸಭಾ ಕ್ಷೇತ್ರಗಳಿಗೆ ಮಾತ್ರ ಶೇ.3ರ ಬಡ್ಡಿದರದಲ್ಲಿ ನೀಡುತ್ತಿರುವ ಸಾಲ ನೀಡಲಾಗುತ್ತಿದೆ. ಸ್ವಸಹಾಯ ಗುಂಪುಗಳಿಗೆ ಮನಸೋಇಚ್ಛೆ ಸಾಲ ನೀಡಲಾಗುತ್ತಿದೆ ಎಂದು ಕೋಲಾರ ಸಂಸದ, ಮಾಜಿ ಶಾಸಕರು ಸೇರಿದಂತೆ ಕೆಲವರು ದೂರು ನೀಡಿದ್ದಾರೆ ಎಂದು ಅವರು ತಿಳಿಸಿದರು.
ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಕೆ.ಎನ್.ರಾಜಣ್ಣ ತಾವು ಚುನಾವಣೆಗೆ ಸ್ಪರ್ಧಿಸುವ ಕ್ಷೇತ್ರದವರಿಗೆ ಸುಮಾರು 100 ಕೋಟಿ ರೂ.ಗಳ ಸಾಲ ನೀಡಿದ್ದಾರೆ ಎಂಬ ಆರೋಪ ಬಂದಿದೆ. ಆದುದರಿಂದ, ಈ ಎರಡು ಬ್ಯಾಂಕುಗಳ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸಿ 15 ದಿನಗಳಲ್ಲಿ ಸರಕಾರಕ್ಕೆ ವರದಿ ನೀಡುವಂತೆ ಸಹಕಾರ ಇಲಾಖೆಯ ಹೆಚ್ಚುವರಿ ರಿಜಿಸ್ಟ್ರಾರ್ ಜಿ.ಎಂ.ರವೀಂದ್ರ ಅವರನ್ನು ನಿಯೋಜಿಸಲಾಗಿದೆ ಎಂದು ಸೋಮಶೇಖರ್ ಹೇಳಿದರು.
ಆ ರೀತಿಯ ಯಾವ ದೂರು ಬಂದಿಲ್ಲ: ರೈತರು ಪುನರಾವರ್ತಿತ ಸಾಲ ಪಡೆಯಲು 1,300 ರೂ.ನೀಡಬೇಕು ಎಂದು ಸಹಕಾರ ಇಲಾಖೆಯಿಂದ ಯಾವುದೆ ಆದೇಶ ಮಾಡಿಲ್ಲ. ಆ ರೀತಿ ರೈತರಿಂದ ಹಣ ಪಡೆಯಲು ಅವಕಾಶ ಇಲ್ಲ. ಸಚಿವ ಮಾಧುಸ್ವಾಮಿ ನೀಡಿರುವ ಹೇಳಿಕೆ ಕುರಿತು ನಾನು ಪ್ರತಿಕ್ರಿಯಿಸುವುದಿಲ್ಲ. ಆದರೆ, ನಾನು ಸಹಕಾರ ಇಲಾಖೆಯ ಜವಾಬ್ದಾರಿ ತೆಗೆದುಕೊಂಡು ಎರಡೂವರೆ ವರ್ಷ ಆಗಿದೆ. ಈವರೆಗೆ ನನಗಾಗಲಿ, ನಮ್ಮ ಇಲಾಖೆಗಾಗಲಿ ಆ ರೀತಿಯ ಯಾವ ದೂರು ಬಂದಿಲ್ಲ.
-ಎಸ್.ಟಿ.ಸೋಮಶೇಖರ್, ಸಹಕಾರ ಸಚಿವ







