ಬಂಜಾರರ ಧಾರ್ಮಿಕ ಕ್ಷೇತ್ರದಲ್ಲಿ RSS ಶಿಬಿರಕ್ಕೆ ಅನುಮತಿ ಖಂಡಿಸಿ ಆ.21ಕ್ಕೆ ಸೂರಗೊಂಡನಕೊಪ್ಪ ಚಲೋ
ಬೆಂಗಳೂರು, ಆ.18: ಬಂಜಾರ ಸಮುದಾಯದ ಕುಲಗುರು ಸಂತ ಸೇವಾಲಾಲ್ ಅವರ ಜನ್ಮಸ್ಥಳ ಸೂರಗೊಂಡನಕೊಪ್ಪ ಭಾಯಾಗಡ್‍ನಲ್ಲಿ ಆರೆಸ್ಸೆಸ್ ಸಂಘಟನೆಗೆ ಶಿಬಿರ ನಡೆಸಲು ನೀಡಿರುವ ಅನುಮತಿಯನ್ನು ಹಿಂಪಡೆಯುವಂತೆ ಆಗ್ರಹಿಸಿ, ಆ.21ರಂದು ‘ಸೂರಗೊಂಡನಕೊಪ್ಪ ಚಲೋ’ಗೆ ಮಾಜಿ ಸಂಸದೆ ಬಿ.ಟಿ.ಲಲಿತಾನಾಯಕ್ ಕರೆ ನೀಡಿದ್ದಾರೆ.
ಗುರುವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ಭಾಯಾಗಡ್ ಇಡೀ ಬಂಜಾರ ಜನಾಂಗವು ಭಾವೈಕ್ಯತೆಯಿಂದ ಸೇರುವ ಪವಿತ್ರ ಸ್ಥಳವಾಗಿದೆ. ಅಲ್ಲದೆ, ಅದು ಬಂಜಾರ ಸಮುದಾಯಕ್ಕೆ ಸಂಬಂಧಿಸಿದಂತಹ ಸಂಸ್ಕೃತಿ, ಸಾಹಿತ್ಯ ಆಚರಣೆಗಾಗಿ ಇರುವ ಪ್ರದೇಶವಾಗಿದೆ. ಆದರೆ ಒಂದು ರಾಜಕೀಯ ಪ್ರೇರಿತ ಸಂಘಟನೆಯು ಶಿಬಿರ ನಡೆಸುವುದು ಇಡೀ ಸಮುದಾಯಕ್ಕೆ ವಿರುದ್ಧವಾಗಿದೆ. ಈ ಸ್ಥಳವನ್ನು ಯಾವುದೇ ಕಾರಣಕ್ಕೂ ರಾಜಕೀಯಗೊಳಿಸಬಾರದು ಎಂದು ಸರಕಾರಕ್ಕೆ ಮನವಿ ಸಲ್ಲಿಸಿದರು.
ಆ.21ರ ‘ಸೂರಗೊಂಡನಕೊಪ್ಪ ಚಲೋ’ಗೆ ಅಂಗವಾಗಿ ಸೂರಗೊಂಡನಕೊಪ್ಪದ ಸಂತ ಸೇವಾಲಾಲ್ ಜನ್ಮಸ್ಥಳ ಮಹಾಮಠದ ಆವರಣದಲ್ಲಿ ಸ್ವಾಭಿಮಾನಿ ಬಂಜಾರರ ಸಮಾವೇಶವನ್ನು ನಡೆಸಲಾಗುವುದು. ಸಮುದಾಯದ ಅಭಿವೃದ್ಧಿಗಾಗಿ ಬೇಡಿಕೆಗಳನ್ನು ಸಮಾವೇಶದಲ್ಲಿ ಚರ್ಚಿಸಲಾಗುವುದು ಎಂದು ಅವರು ಹೇಳಿದರು.