ತಪ್ಪು ಮಾಹಿತಿ ಹರಡುವ ಆರೋಪ: 8 ಯುಟ್ಯೂಬ್ ಚಾನೆಲ್ ನಿಷೇಧಕ್ಕೆ ಕೇಂದ್ರ ಸರಕಾರ ಆದೇಶ

ಹೊಸದಿಲ್ಲಿ, ಆ. 18: ಭಾರತದ ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧಗಳು ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿ ತಪ್ಪು ಮಾಹಿತಿ ಹರಡುತ್ತಿರುವ ಆರೋಪದಲ್ಲಿ 8 ಯುಟ್ಯೂಬ್ ಚಾನಲ್‌ಗಳು ಹಾಗೂ 1 ಪೇಸ್‌ಬುಕ್ ಖಾತೆಯನ್ನು ನಿಷೇಧಿಸುವಂತೆ ಕೇಂದ್ರ ಸರಕಾರ ಸೋಮವಾರ ನಿರ್ದೇಶನ ನೀಡಿದೆ.
8 ಯುಟ್ಯೂಬ್ ಚಾನೆಲ್‌ಗಳಲ್ಲಿ ಒಂದು ಚಾನೆಲ್ ಪಾಕಿಸ್ತಾನದಿಂದ ಕಾರ್ಯಾಚರಿಸುತ್ತಿದೆ ಎಂದು ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಈ 8 ಯುಟ್ಯೂಬ್ ಚಾನೆಲ್‌ಗಳು ಒಟ್ಟು 85.7 ಲಕ್ಷ ಚಂದಾದಾರರನ್ನು ಹೊಂದಿದ್ದು, 114 ಕೋಟಿ ವೀಕ್ಷಣೆಯನ್ನು ಪಡೆದುಕೊಂಡಿದೆ.
ಲೋಕತಂತ್ರ ಟಿವಿ, ಯು ಆ್ಯಂಡ್ ವಿ ಟಿವಿ, ಎಎಂ ರಝ್ವಿ ಚಾನಲ್, ಗೌರವ್‌ಶಾಲಿ ಪವನ್ ಮಿಥಿಲಾಂಚಲ್, ಸಿಟಾಪ್5ಟಿಎಚ್, ಸರ್ಕಾರಿ ಅಪ್‌ಡೇಟ್, ಸಬ್ ಕುಚ್ ದೇಕೋ ಹಾಗೂ ಪಾಕಿಸ್ತಾನ ಮೂಲದ ನ್ಯೂಸ್ ಕೆ ದುನಿಯಾ ಹಾಗೂ 1 ಫೇಸ್‌ಬುಕ್ ಖಾತೆಯನ್ನು ನಿಷೇಧಿಸುವಂತೆ ಕೇಂದ್ರ ಸರಕಾರ ಆದೇಶಿಸಿದೆ.
‘‘ಇದರಲ್ಲಿ ಕೆಲವು ಈ ಯುಟ್ಯೂಬ್ ಚಾನೆಲ್‌ಗಳಲ್ಲಿ ಪ್ರಸಾರವಾಗುವ ಅಂಶಗಳು ಭಾರತದಲ್ಲಿ ಧಾರ್ಮಿಕ ಸಮುದಾಯಗಳ ನಡುವೆ ದ್ವೇಷ ಹರಡುವ ಉದ್ದೇಶ ಹೊಂದಿದೆ. ಇಂತಹ ಅಂಶಗಳು ದೇಶದಲ್ಲಿ ಕೋಮು ಅಸಾಮರಸ್ಯ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಅಡ್ಡಿ ಉಂಟು ಮಾಡುವ ಸಾಮರ್ಥ್ಯ ಹೊಂದಿರುವುದು ಪತ್ತೆಯಾಗಿದೆ’’ ಎಂದು ಸಚಿವಾಲಯ ತಿಳಿಸಿದೆ.
ನಿಷೇಧಿತ ಯುಟ್ಯೂಬ್ ಚಾನೆಲ್‌ಗಳು ಭಾರತ ಸರಕಾರದಿಂದ ಧ್ವಂಸಕ್ಕೊಳಗಾದ ಧಾರ್ಮಿಕ ಕಟ್ಟಡಗಳು, ಧಾರ್ಮಿಕ ಉತ್ಸವದ ಆಚರಣೆಯ ಮೇಲಿನ ನಿಷೇಧಕ್ಕೆ ಸಂಬಂಧಿಸಿ ತಪ್ಪು ಪ್ರತಿಪಾದನೆ ಮಾಡಿವೆ ಹಾಗೂ ದೇಶದಲ್ಲಿ ಧರ್ಮ ಯುದ್ಧದ ಘೋಷಣೆ ಮಾಡಿವೆ ಎಂದು ಸರಕಾರ ಹೇಳಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆ 2021ರ ಅಡಿಯಲ್ಲಿ ತನ್ನ ತುರ್ತು ಅಧಿಕಾರ ಬಳಸಿ ಕೇಂದ್ರ ಸರಕಾರ ಈ ನಿರ್ದೇಶನ ನೀಡಿದೆ.







