ಡೊನಾಲ್ಡ್ ಟ್ರಂಪ್ ಭಾರತ ಭೇಟಿಗೆ 38 ಲಕ್ಷ ರೂ. ವೆಚ್ಚ ಮಾಡಿದ ಕೇಂದ್ರ ಸರಕಾರ: ಆರ್ಟಿಐಯಲ್ಲಿ ಬಹಿರಂಗ

Photo: PTI
ಹೊಸದಿಲ್ಲಿ, ಆ. 18: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 36 ಗಂಟೆಗಳ ಭಾರತ ಭೇಟಿಗೆ ವಾಸ್ತವ್ಯ, ಊಟ ಹಾಗೂ ಪ್ರಯಾಣ ಮೊದಲಾದವು ಸೇರಿ ಕೇಂದ್ರ ಸರಕಾರ ಸರಿ ಸುಮಾರು 38 ಲಕ್ಷ ರೂಪಾಯಿ ವೆಚ್ಚ ಮಾಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೇಂದ್ರ ಮಾಹಿತಿ ಆಯೋಗಕ್ಕೆ ತಿಳಿಸಿದೆ.
ಚೊಚ್ಚಲ ಭಾರತ ಭೇಟಿಯ ಸಂದರ್ಭ ಡೊನಾಲ್ಡ್ ಟ್ರಂಪ್ ಅವರು ತನ್ನೊಂದಿಗೆ ಪತ್ನಿ ಮೆಲನಿಯಾ, ಪುತ್ರಿ ಇವಾಂಕ, ಅಳಿಯ ಜರೇಡ್ ಕುಶ್ನರ್ ಹಾಗೂ ಹಲವು ಉನ್ನತ ಅಧಿಕಾರಿಗಳನ್ನು ಕರೆದುಕೊಂಡು ಬಂದಿದ್ದರು. ಅವರು 2020 ಫೆಬ್ರವರಿ 24 ಹಾಗೂ 25ರಂದು ಅಹ್ಮದಾಬಾದ್, ಆಗ್ರಾ ಹಾಗೂ ಹೊಸದಿಲ್ಲಿಗೆ ಭೇಟಿ ನೀಡಿದ್ದರು.
22 ಕಿ.ಮೀ. ರೋಡ್ ಶೋನಲ್ಲಿ ಪಾಲ್ಗೊಳ್ಳಲು, ಸಬರ್ಮತಿ ಆಶ್ರಮದಲ್ಲಿ ಮಹಾತ್ಮಾ ಗಾಂಧಿ ಅವರಿಗೆ ಗೌರವ ಸಲ್ಲಿಸಲು ಹಾಗೂ ನೂತನವಾಗಿ ನಿರ್ಮಿಸಲಾದ ಮೊಟೆರಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ‘‘ನಮಸ್ತೇ ಟ್ರಂಪ್’’ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಡೊನಾಲ್ಡ್ ಟ್ರಂಪ್ ಅವರು ಫೆ. 24ರಂದು ಅಹ್ಮದಾಬಾದ್ನಲ್ಲಿ 3 ಗಂಟೆ ವ್ಯಯಿಸಿದ್ದರು. ಅನಂತರ ಅವರು ಆಗ್ರಾಕ್ಕೆ ತೆರಳಿದ್ದರು.
ಅದೇ ದಿನ ತಾಜ್ಮಹಲ್ಗೆ ಭೇಟಿ ನೀಡಿದ್ದರು. ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲು ಫೆಬ್ರವರಿ 25ರಂದು ದಿಲ್ಲಿಗೆ ಭೇಟಿ ನೀಡಿದ್ದರು. ಅಮೆರಿಕದ ಅಧ್ಯಕ್ಷ ಹಾಗೂ ಪ್ರಥಮ ಮಹಿಳೆ 2020 ಫೆಬ್ರವರಿಯಲ್ಲಿ ಭೇಟಿ ನೀಡಿದ ಸಂದರ್ಭ ಆಹಾರ, ಭದ್ರತೆ, ವಾಸ್ತವ್ಯ, ವಿಮಾನ, ಸಾಗಾಟ ಸೇರಿದಂತೆ ಭಾರತ ಸರಕಾರಕ್ಕೆ ಒಟ್ಟು ಎಷ್ಟು ವೆಚ್ಚವಾಗಿದೆ ಎಂಬುದನ್ನು ತಿಳಿಸುವಂತೆ ಕೋರಿ ಮಿಶಲ್ ಭತೇನ ಅವರು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಮಿಶಲ್ ಭತೇನಾ ಅವರು 2020 ಅಕ್ಟೋಬರ್ 24ರಂದು ಅರ್ಜಿ ಸಲ್ಲಿಸಿದ್ದರು. ಅವರ ಮೊದಲ ಅರ್ಜಿಗೆ ಯಾವುದೇ ಪ್ರತಿಕ್ರಿಯೆ ದೊರೆತಿರಲಿಲ್ಲ. ಅನಂತರ ಅವರು ಆರ್ಟಿಐ ವಿಷಯಗಳಿಗೆ ಅತ್ಯುಚ್ಚ ಮೇಲ್ಮನವಿ ಪ್ರಾಧಿಕಾರವಾದ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು. ಕೋವಿಡ್ ಕಾರಣದಿಂದ ಪ್ರತಿಕ್ರಿಯೆ ಸಲ್ಲಿಸಲು ವಿಳಂಬವಾಯಿತು ಎಂದು ಉಲ್ಲೇಖಿಸಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ 2022 ಆಗಸ್ಟ್ 4ರಂದು ಆಯೋಗಕ್ಕೆ ಮಾಹಿತಿ ನೀಡಿತ್ತು.







