ಎರಡು ದಿನದೊಳಗೆ ರಸ್ತೆ ಗುಂಡಿಗಳ ದುರಸ್ತಿ: ಶಾಸಕ ಕಾಮತ್

ಮಂಗಳೂರು, ಆ.18: ರಾಷ್ಟ್ರೀಯ ಹೆದ್ದಾರಿ ಹಾಗೂ ನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳ ಗುಂಡಿಗಳ ಪೈಕಿ ಬಹುತೇಕ ಸರಿಪಡಿಸಲಾಗಿದೆ. ಬಾಕಿಯುಳಿದ ರಸ್ತೆ ಗುಂಡಿಗಳನ್ನು ಇನ್ನೆರಡು ದಿನದೊಳಗೆ ದುರಸ್ತಿಪಡಿಸಲಾಗುವುದು ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ಇತ್ತೀಚೆಗೆ ನಡೆದ ರಸ್ತೆ ಅಪಘಾತಗಳು ಮತ್ತು ಸಾವಿನ ಪ್ರಕರಣದ ಹಿನ್ನೆಲೆಯಲ್ಲಿ ಗುರುವಾರ ಮಹಾನಗರ ಪಾಲಿಕೆಯ ಆಯುಕ್ತರು, ಮೇಯರ್, ಪಾಲಿಕೆಯ ಮುಖ್ಯ ಸಚೇತಕರು, ಅಧಿಕಾರಿಗಳ ಸಭೆ ನಡೆಸಿದ ಶಾಸಕ ಕಾಮತ್, ಮಂಗಳೂರು ನಗರ ದಕ್ಷಿಣ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ ಹಾಗೂ ಮಹಾನಗರ ಪಾಲಿಕೆಯ ರಸ್ತೆ ಗುಂಡಿಗಳನ್ನು ಮುಚ್ಚುವ ಬಗ್ಗೆ ಚರ್ಚಿಸಿದರು.
ಪಾಲಿಕೆಯಿಂದ ನೀಡಲಾಗಿರುವ ವಾಟ್ಸ್‌ಆ್ಯಪ್ ಸಂಖ್ಯೆಗೆ ಹಲವರು ಭಾವಚಿತ್ರಗಳನ್ನು ಕಳಿಸಿದ್ದಾರೆ. ಆ ಎಲ್ಲಾ ಗುಂಡಿಗಳನ್ನು ಮುಚ್ಚುವ ಕೆಲಸ ಶುಕ್ರವಾರದಿಂದ ಆರಂಭವಾಗಲಿದೆ. ನಗರದಲ್ಲಿ 2 ವರ್ಷಗಳಲ್ಲಿ ಸುರಿಯುವ ಪ್ರಮಾಣದ ಮಳೆ ಒಂದೇ ತಿಂಗಳಿನಲ್ಲಿ ಸುರಿದ ಪರಿಣಾಮ ರಸ್ತೆಯಲ್ಲಿ ಗುಂಡಿಗಳಾಗಿವೆ. ಮಳೆಯ ವೇಳೆ ಡಾಮಾರು ಹಾಕಿದರೂ ಅದು ಕಿತ್ತು ಹೋಗುವ ಕಾರಣ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು ಎಂದು ಕಾಮತ್ ತಿಳಿಸಿದರು.
ನಗರದ ವಿವಿಧ ಕಡೆಗಳಲ್ಲಿ ಸ್ಮಾರ್ಟ್‌ಸಿಟಿ, ಕೆಯುಡಿಎಫ್‌ಸಿ, ಜಲಸಿರಿ, ಗೈಲ್ ಗ್ಯಾಸ್ ಕಾಮಗಾರಿಗಳು ನಡೆಯುತ್ತಿವೆ. ಕೋವಿಡ್ ಕಾರಣಗಳಿಂದ ಸಾವಿರಾರು ವಲಸೆ ಕಾರ್ಮಿಕರು ಊರಿಗೆ ತೆರಳಿದ್ದು, ನಿರೀಕ್ಷಿತ ಮಟ್ಟದಲ್ಲಿ ಕಾರ್ಮಿಕರು ವಾಪಸಾಗದಿರುವ ಕಾರಣ 2 ವರ್ಷಗಳಿಂದ ಕಾಮಗಾರಿಯ ವಿಳಂಬವಾಗಿದೆ. ಅನುದಾನದ ಅವಧಿ ಮುಕ್ತಾಯಗೊಳ್ಳುವ ಮುನ್ನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.







