ಅಗ್ನಿಪಥ್ ಯೋಜನೆ ರದ್ದತಿ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಮಾಜಿ ಕರ್ನಲ್

ಹೊಸದಿಲ್ಲಿ: ಸೇನೆಗೆ ಅಲ್ಪಾವಧಿ ನೇಮಕ ಮಾಡಿಕೊಳ್ಳುವ ವಿವಾದಾಸ್ಪದ ಅಗ್ನಿಪಥ್ ಯೋಜನೆಯನ್ನು ರದ್ದುಪಡಿಸಬೇಕು ಹಾಗೂ 2019ರಲ್ಲಿ ನಡೆದ ಭಾರತೀಯ ವಾಯುಪಡೆ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ನೇಮಕಾತಿಯನ್ನು ರದ್ದುಪಡಿಸಬಾರದು ಎಂದು ಕೋರಿ ಸೇನೆಯ ಮಾಜಿ ಕರ್ನಲ್ ಒಬ್ಬರು ದೆಹಲಿ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಕಳೆದ ವರ್ಷ ಸ್ವಯಂ ನಿವೃತ್ತಿ ಪಡೆದ ಕರ್ನಲ್ ಅಮಿತ್ ಕುಮಾರ್ ಅವರು ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಕರ್ನಲ್ ಇದೀಗ ದೆಹಲಿ ವಕೀಲರ ಸಂಘದಲ್ಲಿ ನೋಂದಾಯಿಸಿಕೊಂಡಿದ್ದು, ಅವರು ಸಲ್ಲಿಸಿದ ಅರ್ಜಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಹ್ಮಣ್ಯಂಪ್ರಸಾದ್ ಅವರಿದ್ದ ವಿಭಾಗೀಯ ಪೀಠದಲ್ಲಿ ಈ ಅರ್ಜಿ ವಿಚಾರಣೆಗೆ ಬರಲಿದೆ.
ಇವುಗಳನ್ನು ಒಂದೇ ಪ್ರಕರಣವಾಗಿ ಪರಿಗಣಿಸಬೇಕೇ ಅಥವಾ ಪ್ರತ್ಯೇಕ ಪ್ರಕರಣಗಳಾಗಿ ಪರಿಗಣಿಸಬೇಕೇ ಎಂಬ ಬಗ್ಗೆ ಆಗಸ್ಟ್ 25ರಂದು ವಿಚಾರಣೆ ನಡೆಸಲು ನ್ಯಾಯಪೀಠ ನಿರ್ಧರಿಸಿದೆ.
ಅಗ್ನಿಪಥ್ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಎಲ್ಲ ಅರ್ಜಿಗಳನ್ನು ಇತ್ತೀಚೆಗೆ ಸುಪ್ರೀಂಕೋರ್ಟ್, ದೆಹಲಿ ಹೈಕೋರ್ಟ್‍ಗೆ ವರ್ಗಾಯಿಸಿತ್ತು. ಹೈಕೋರ್ಟ್‍ನಲ್ಲಿ ಈಗಾಗಲೇ ಇಂಥ ಹಲವು ಅರ್ಜಿಗಳು ಬಾಕಿ ಇವೆ.
ಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ಸೈನಿಕರಾಗಿ ಪ್ರವೇಶ ಪಡೆಯಲು ಈ ಹಿಂದೆ ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತೀರ್ಣರಾಗಿದ್ದ ಎಲ್ಲರಿಗೂ ತಕ್ಷಣವೇ ಸಂದರ್ಶನ ಪತ್ರ/ ಆಯ್ಕೆ ಪತ್ರಗಳನ್ನು ಕಳುಹಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅರ್ಜಿದಾರರು ಕೋರಿದ್ದಾರೆ.







