ಭಾರತದಲ್ಲಿ ಮಲಬಾಚುವ ಕಾರ್ಮಿಕರ ಸ್ಥಿತಿ ಹೇಗಿದೆ?

ಭಾರತಕ್ಕೆ ಸ್ವಾತಂತ್ರ ಸಿಕ್ಕಿ 75 ವರ್ಷಗಳು ತುಂಬಿದರೂ ಮಲ ಬಾಚುವ ಕಾರ್ಮಿಕರಿಗೆ ಘನತೆಯಿಲ್ಲದ ಈ ಕೆಲಸದಿಂದ ಇನ್ನೂ ಮುಕ್ತಿ ದೊರಕಿಲ್ಲ. ಅವರು ಬೇರೆ ಯಾವುದೇ ಆಯ್ಕೆ ಇಲ್ಲದೆ, ಬದುಕುವುದಕ್ಕಾಗಿ ಈ ಅಮಾನವೀಯ ಕೆಲಸದಲ್ಲೇ ತೊಡಗಿಕೊಂಡಿದ್ದಾರೆ.
ತಲೆಯಲ್ಲಿ ಮಲ ಹೊರುವ ಪದ್ಧತಿಯನ್ನು ಕೊನೆಗೊಳಿಸಲು ಭಾರತವು ಕಾನೂನುಗಳನ್ನು ಮಾಡಿದೆ, ಸಮೀಕ್ಷೆಗಳನ್ನು ನಡೆಸಿದೆ ಮತ್ತು ಪುನರ್ವಸತಿ ಪ್ರಕ್ರಿಯೆಗಳನ್ನು ಜಾರಿಗೆ ತಂದಿದೆ. ಈ ನಿಟ್ಟಿನಲ್ಲಿ ಎರಡು ಕಾನೂನುಗಳು ಬಂದಿವೆ. ಅವುಗಳೆಂದರೆ ಮಲ ಹೊರುವ ಕೆಲಸವನ್ನು ಜನರಿಗೆ ವಹಿಸುವುದು ಮತ್ತು ಒಣ ಶೌಚಾಲಯಗಳ ನಿರ್ಮಾಣ (ನಿಷೇಧ) ಕಾಯ್ದೆ, 1993 ಹಾಗೂ ಮಲಹೊರುವ ಕೆಲಸ ನಿಷೇಧ ಮತ್ತು ಅಂಥ ಕೆಲಸಗಾರರ ಪುನರ್ವಸತಿ ಕಾಯ್ದೆ, 2013 (ಪಿಇಎಮ್‌ಎಸ್‌ಆರ್‌ಎ). ಈ ಕಾನೂನುಗಳು ಈ ಪದ್ಧತಿಯನ್ನು ಕಾನೂನುಬಾಹಿರಗೊಳಿಸಿರುವುದು ಮಾತ್ರವಲ್ಲ, ಮಾನವ ಮಲ ಸಾಗಿಸಲು ಜನರನ್ನು ಬಳಸುವವರಿಗೆ ಶಿಕ್ಷೆಯನ್ನೂ ವಿಧಿಸುತ್ತವೆ.
ಆದರೆ, ಈ ಕಾನೂನುಗಳ ಹೊರತಾಗಿಯೂ, ಮಲ ಬಾಚುವ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸುವುದು ಮತ್ತು ಈ ಪದ್ಧತಿಯನ್ನು ಕೊನೆಗೊಳಿಸುವುದು ಬಿಡಿ, ಈ ಕೆಲಸದಲ್ಲಿ ಎಷ್ಟು ಮಂದಿ ತೊಡಗಿಸಿಕೊಂಡಿದ್ದಾರೆ ಎನ್ನುವುದನ್ನು ನಿಖರವಾಗಿ ತಿಳಿಯಲೂ ದೇಶಕ್ಕೆ ಸಾಧ್ಯವಾಗಿಲ್ಲ. ಇದನ್ನು ಸಾಧಿಸುವುದಕ್ಕೆ ತಡೆಯಾಗಿ ಹಲವಾರು ಸುತ್ತಿನ ತಾರತಮ್ಯಗಳಿವೆ. ಅವುಗಳೆಂದರೆ, ತುಳಿತಕ್ಕೊಳಗಾದ ಜಾತಿಗಳ ಬಗ್ಗೆ ಇರುವ ಸಾಮಾಜಿಕ ತಾರತಮ್ಯ, ನೌಕರಶಾಹಿ ತಾರತಮ್ಯ ಮತ್ತು ರಾಜಕಾರಣಿಗಳು ತೋರಿಸುತ್ತಿರುವ ತಾರತಮ್ಯ. ಈ ತಾರತಮ್ಯಗಳು ಈ ತುಳಿತಕ್ಕೊಳಗಾದ ಜನರ ನೆಮ್ಮದಿಗೆ ದೊಡ್ಡ ತಡೆಯಾಗಿ ಪರಿಣಮಿಸಿವೆ. ಕೈಯಿಂದ ಮಲ ತೆಗೆಯುವವರ ಪೈಕಿ ಹೆಚ್ಚಿನವರು, ಅಂದರೆ ಸುಮಾರು ಶೇ. 97 ಮಂದಿ ಪರಿಶಿಷ್ಟ ಜಾತಿಗಳಿಗೆ ಸೇರಿದವರಾಗಿದ್ದಾರೆ.
ನೋಂದಾಯಿಸಿಕೊಳ್ಳುವುದೇ ಕಷ್ಟ
ಸರಕಾರಿ ಪುನರ್ವಸತಿ ಕಾರ್ಯಕ್ರಮಗಳ ಪ್ರಯೋಜನವನ್ನು ಪಡೆಯುವುದು ಮಲಹೊರುವ ಕಾರ್ಮಿಕರಿಗೆ ಕಠಿಣ ಕೆಲಸವಾಗಿ ಬಿಟ್ಟಿದೆ. ಯಾವುದೇ ಪುನರ್ವಸತಿ ಕಾರ್ಯಕ್ರಮದ ಪ್ರಯೋಜನವನ್ನು ಪಡೆಯಬೇಕಾದರೆ ಮೊದಲು ಅವರು ಮಲಹೊರುವ ಕಾರ್ಮಿಕರೆಂದು ಗುರುತಿಸಲ್ಪಡಬೇಕು. ಇದು ದೊಡ್ಡ ಕೆಲಸವಾಗಿದೆ. ಯಾಕೆಂದರೆ, ಹೆಚ್ಚಿನ ಕಾರ್ಮಿಕರನ್ನು ಮಲಬಾಚುವ ಕಾರ್ಮಿಕರೆಂದು ಗುರುತಿಸುವಲ್ಲಿ ಸರಕಾರಿ ಅಧಿಕಾರಿಗಳು ವಿಫಲರಾಗಿದ್ದಾರೆ. ಗುರುತು ಪತ್ರ ಪಡೆಯಲು ಈ ಕಾರ್ಮಿಕರು ಜಿಲ್ಲಾ ಕೇಂದ್ರಗಳಿಗೆ ಹಲವಾರು ಬಾರಿ ಅಲೆಯಬೇಕಾಗಿದೆ. ಆದರೂ, ಅದು ಸಿಗುವ ಸಾಧ್ಯತೆಗಳು ಕಡಿಮೆ. ಹಾಗಾಗಿ, ಹೆಚ್ಚಿನ ಮಲಬಾಚುವ ಕಾರ್ಮಿಕರಿಗೆ ಪುನರ್ವಸತಿ ಎನ್ನುವುದು ದೂರದ ಕನಸಾಗಿದೆ.
ಸಮೀಕ್ಷೆಗಳು ಮತ್ತು ಗುರುತು ಪತ್ತೆಹಚ್ಚುವ ಪ್ರಕ್ರಿಯೆಗಳಲ್ಲಿ ಎದುರಾಗುವ ಅಡೆತಡೆಗಳಿಂದಾಗಿ ಮತ್ತು ನೌಕರಶಾಹಿ ವರ್ತನೆಗಳಿಂದಾಗಿ ತಾವು ಮಲಬಾಚುವ ಕಾರ್ಮಿಕರೆನ್ನುವುದನ್ನು ಸಾಬೀತುಪಡಿಸುವುದೇ ಈ ಕಾರ್ಮಿಕರಿಗೆ ಕಷ್ಟವಾಗಿದೆ.
ಕಾರ್ಮಿಕರ ಸಾವಿನ ಸಂಖ್ಯೆ
2019 ಮತ್ತು 2022ರ ನಡುವಿನ ಅವಧಿಯಲ್ಲಿ ಸೆಪ್ಟಿಕ್ ಟ್ಯಾಂಕ್‌ಗಳನ್ನು ಶುಚಿಗೊಳಿಸುವಾಗ ದಿಲ್ಲಿಯಲ್ಲಿ 20 ಮಂದಿ ಮೃತಪಟ್ಟಿದ್ದಾರೆ. ಕರ್ನಾಟಕದಲ್ಲಿ 14 ಮಂದಿ ಮೃತಪಟ್ಟರೆ, ಮಹಾರಾಷ್ಟ್ರದಲ್ಲಿ 23 ಮಂದಿ ಪ್ರಾಣಕಳೆದುಕೊಂಡಿದ್ದಾರೆ. ಇದೇ ಅವಧಿಯಲ್ಲಿ ತಮಿಳುನಾಡಿನಲ್ಲಿ 32 ಮಂದಿ ಮೃತರಾಗಿದ್ದಾರೆ ಮತ್ತು ಉತ್ತರಪ್ರದೇಶದಲ್ಲಿ 30 ಮಂದಿ ಕೊನೆಯುಸಿರೆಳೆದಿದ್ದಾರೆ.
88,000 ಮಲಬಾಚುವ ಕಾರ್ಮಿಕರು
ಸರಕಾರದ ಅಂಕಿಸಂಖ್ಯೆಗಳ ಪ್ರಕಾರ, ಭಾರತದಲ್ಲಿ 58,098 ಮಲಬಾಚುವ ಕಾರ್ಮಿಕರಿದ್ದಾರೆ. ಆದರೆ, ಈ ಸಂಖ್ಯೆ ತೀರಾ ಕಡಿಮೆಯಾಗಿದೆ ಎಂದು ಸಾಮಾಜಿಕ ಹೋರಾಟಗಾರರು ಮತ್ತು ಈ ಕ್ಷೇತ್ರದಲ್ಲಿನ ಪರಿಣಿತರು ಹೇಳುತ್ತಾರೆ.
ಸರಕಾರವು ಏಳು ರಾಷ್ಟ್ರೀಯ ಸಮೀಕ್ಷೆಗಳನ್ನು ನಡೆಸಿದೆ. ಆದರೆ, ಅವುಗಳ ಅಂಕಿ-ಸಂಖ್ಯೆಗಳು ಪರಸ್ಪರ ತೀರಾ ಭಿನ್ನವಾಗಿವೆ. ಹಾಗಾಗಿ, ದೇಶದಲ್ಲಿ ಎಷ್ಟು ಮಲಬಾಚುವ ಕಾರ್ಮಿಕರಿದ್ದಾರೆ ಎನ್ನುವುದನ್ನು ನಿಖರವಾಗಿ ತೀರ್ಮಾನಿಸಲು ಸಾಧ್ಯವಾಗಿಲ್ಲ.
ನ್ಯಾಶನಲ್ ಸಫಾಯಿ ಕರ್ಮಚಾರಿ ಸಂಸ್ಥೆಯ ಹಣಕಾಸು ಮತ್ತು ಅಭಿವೃದ್ಧಿ ಆಯೋಗವು ಕೊನೆಯ ಸಮೀಕ್ಷೆಯನ್ನು 2018ರಲ್ಲಿ ನಡೆಸಿತು. 14 ರಾಜ್ಯಗಳಲ್ಲಿ ಈ ಸಮೀಕ್ಷೆಯನ್ನು ನಡೆಸಲಾಯಿತು. ಭಾರತದಲ್ಲಿ ಮಲ ಬಾಚುವ ಕೆಲಸದಲ್ಲಿ 87,913 ಮಂದಿ ತೊಡಗಿಸಿಕೊಂಡಿದ್ದಾರೆ ಎನ್ನುವುದನ್ನು ಸಮೀಕ್ಷೆ ಪತ್ತೆಹಚ್ಚಿತು. ಆದರೆ, ಈ ಸಮೀಕ್ಷೆಗೆ ಸೂಚನೆ ನೀಡಿದ್ದ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು, ಈ ಪೈಕಿ ಕೇವಲ ಶೇ. 4 ಮಂದಿಯನ್ನು ಮಲಬಾಚುವ ಕಾರ್ಮಿಕರು ಎಂಬುದಾಗಿ ಗುರುತಿಸಿತು.
ಮೃತಪಟ್ಟ ಕೆಲವರಿಗೆ ಪರಿಹಾರವೇ ಇಲ್ಲ
2019-22ರ ಅವಧಿಯಲ್ಲಿ ದೇಶದಲ್ಲಿ ಒಟ್ಟು 966 ಸ್ವಚ್ಛತಾ ಕಾರ್ಮಿಕರು ಕೆಲಸದ ವೇಳೆ ಮೃತಪಟ್ಟಿದ್ದಾರೆ. ಅವರ ಪೈಕಿ 742 ಮಂದಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡಲಾಗಿದೆ. 113 ಮಂದಿಗೆ 10 ಲಕ್ಷ ರೂ.ಗಿಂತ ಕಡಿಮೆ ಪರಿಹಾರ ನೀಡಲಾಗಿದೆ. ಆದರೆ, 111 ಮಂದಿಗೆ ಪರಿಹಾರವನ್ನೇ ನೀಡಲಾಗಿಲ್ಲ.
ಶೌಚಗುಂಡಿ ಶುಚಿಗೊಳಿಸಲು ರೋಬಟ್‌ಗಳು ಬರಬಹುದೇ?
2020ರಲ್ಲಿ, ಪಿಇಎಮ್‌ಎಸ್‌ಆರ್‌ಎ ಕಾನೂನಿನಲ್ಲಿರುವ ‘ಮ್ಯಾನ್‌ಹೋಲ್’ ಪದದ ಬದಲಿಗೆ ‘ಮಶೀನ್‌ಹೋಲ್’ ಪದವನ್ನು ಬಳಸುವ ತನ್ನ ಇಂಗಿತವನ್ನು ಕೇಂದ್ರ ಸರಕಾರ ಘೋಷಿಸಿತು. ಶೌಚಗುಂಡಿ ಶುದ್ಧೀಕರಣವನ್ನು ಯಾಂತ್ರೀಕೃತಗೊಳಿಸುವ ಉದ್ದೇಶವನ್ನು ಅದು ಹೊಂದಿತ್ತು. ವಾಸ್ತವವಾಗಿ, ಹಲವು ಯಂತ್ರಗಳನ್ನು ಅಭಿವೃದ್ಧಿಪಡಿಸಲಾಯಿತು ಮತ್ತು ಶೌಚಗುಂಡಿಗಳ ಶುದ್ಧೀಕರಣದಲ್ಲಿ ಬಳಸಲಾಯಿತು. ಅದರಿಂದಾಗಿ, ಮುಖ್ಯವಾಗಿ ನಗರಗಳಲ್ಲಿ ಶೌಚಗುಂಡಿಗಳಲ್ಲಿ ಏರ್ಪಡುವ ತಡೆಗಳನ್ನು ನಿವಾರಿಸುವ ಕೆಲಸ ಸುಲಭವಾಯಿತು. ಆ ಮೂಲಕ ಈ ಅಪಾಯಕಾರಿ ಕೆಲಸದಲ್ಲಿ ತೊಡಗುವಾಗ ಸಂಭವಿಸಬಹುದಾದ ಸಾವಿನ ಸಂಖ್ಯೆಗಳನ್ನು ಕಡಿಮೆಗೊಳಿಸಲಾಯಿತು.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮದರಾಸು ‘ಹೋಮೊಸೆಪ್’ ಎಂಬ ರೋಬಟನ್ನು ಅಭಿವೃದ್ಧಿಪಡಿಸಿತು. ಕೈಯಿಂದ ಮಲತೆಗೆಯುವ ಪದ್ಧತಿಯನ್ನು ಕೊನೆಗೊಳಿಸುವುದಕ್ಕೆ ಇದು ಪರಿಹಾರ ಎಂಬುದಾಗಿ ಹೇಳಲಾಗಿದೆ.
ರೋಬಟ್‌ಗಳ ನಿರ್ಮಾಣ ಮತ್ತು ಅವುಗಳ ನಿರ್ವಹಣೆಗಾಗಿ ಜನರಿಗೆ ಸಾಕಷ್ಟು ತರಬೇತಿ ನೀಡುವುದು, ತಲೆಯಲ್ಲಿ ಮಲಹೊರುವ ಪದ್ಧತಿಯನ್ನು ಕೊನೆಗೊಳಿಸುವ ಏಕೈಕ ವಿಧಾನವಾಗಿದೆ ಎಂದು ‘ಹೋಮೊಸೆಪ್’ನ್ನು ಅಭಿವೃದ್ಧಿಪಡಿಸಿರುವ ಕಂಪೆನಿಯ ಮುಖ್ಯಸ್ಥರು ಅಭಿಪ್ರಾಯಪಡುತ್ತಾರೆ.
ಆದರೆ ಈ ಯಂತ್ರವನ್ನು ಇನ್ನೂ ಬಳಕೆಗೆ ಇಳಿಸಲಾಗಿಲ್ಲ.
2018ರಲ್ಲಿ ಕೇರಳದ ಕಂಪೆನಿಯೊಂದು ‘ಬಂಡಿಕೂಟ್’ ಎಂಬ ಶೌಚಗುಂಡಿ ಶುಚಿ ಮಾಡುವ ಯಂತ್ರವನ್ನು ಅಭಿವೃದ್ಧಿಪಡಿಸಿತು. ಅದು ಕೃತಕ ಬುದ್ಧಿಮತ್ತೆ, ಸೆನ್ಸರ್‌ಗಳು ಮತ್ತು ಕ್ಯಾಮರಾಗಳ ನೆರವಿನೊಂದಿಗೆ ಮಾನವ ಚಲನೆಗಳನ್ನು ಅನುಕರಿಸಬಲ್ಲದು. ಅದು ಮ್ಯಾನ್‌ಹೋಲ್‌ಗಳ ಒಳಗೆ ಇಳಿಯಬಲ್ಲದು, ಆಚೀಚೆ ಚಲಿಸಬಲ್ಲದು, ವಿವಿಧ ಸ್ಥಳಗಳಲ್ಲಿ ಸ್ಥಿರವಾಗಿ ನಿಲ್ಲಬಹುದು, ಚರಂಡಿಗಳ ಮುಚ್ಚಳವನ್ನು ತೆರೆಯಬಲ್ಲದು, ಘನ ತ್ಯಾಜ್ಯವನ್ನು ತೆಗೆಯಬಲ್ಲದು ಮತ್ತು ಚರಂಡಿ ವ್ಯವಸ್ಥೆಗಳನ್ನು ಪರಿಶೀಲಿಸಬಲ್ಲದು.ಸುಮಾರು 250 ಬಂಡಿಕೂಟ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ ಹಾಗೂ 17 ರಾಜ್ಯಗಳಲ್ಲಿ ಕಾರ್ಯಾಚರಣೆಗೆ ಇಳಿಸಲಾಗಿದೆ.
ಇದು ನಿಮಗೆ ತಿಳಿದಿದೆಯೇ?
ಭಾರತದಲ್ಲಿ ಪ್ರತೀ 5 ದಿನಗಳಲ್ಲಿ ಮೂವರು ಶೌಚಗುಂಡಿ ಶುಚಿ ಮಾಡುವ ಕಾರ್ಮಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಕೈಯಿಂದ ಶೌಚಗುಂಡಿ ಶುಚಿ ಮಾಡುವ ಕಾರ್ಮಿಕರ ಪೈಕಿ ಶೇ. 97 ದಲಿತರು.
ತಮ್ಮ ವಿರುದ್ಧ ಅಸ್ಪಶ್ಯತೆ ಆಚರಣೆ ಮಾಡಲಾಗುತ್ತಿದೆ ಎಂಬುದಾಗಿ ಶೇ. 50 ಮಲಬಾಚುವ ಕಾರ್ಮಿಕರು ಹೇಳುತ್ತಾರೆ.
ಕರ್ನಾಟಕದಲ್ಲಿ 2021-22ರಲ್ಲಿ ನಡೆಸಿದ ಸಮೀಕ್ಷೆಯೊಂದರ ಪ್ರಕಾರ, ಬೆಂಗಳೂರಿನಲ್ಲಿ 1,424 ಮಲಹೊರುವ ಕಾರ್ಮಿಕರಿದ್ದಾರೆ.
2018ರಲ್ಲಿ ನಡೆಸಲಾದ ಸಮೀಕ್ಷೆಯ ಪ್ರಕಾರ, ಉತ್ತರಪ್ರದೇಶದಲ್ಲಿ ದೇಶದಲ್ಲೇ ಅತ್ಯಧಿಕ ಸಂಖ್ಯೆ (32,473)ಯಲ್ಲಿ ಮಲಹೊರುವ ಕಾರ್ಮಿಕರಿದ್ದಾರೆ. ಮಹಾರಾಷ್ಟ್ರದಲ್ಲಿ 6,325, ಕರ್ನಾಟಕದಲ್ಲಿ 2,927, ತಮಿಳುನಾಡಿನಲ್ಲಿ 398, ಛತ್ತೀಸ್‌ಗಡದಲ್ಲಿ ಮೂವರು ಮಲಬಾಚುವ ಕಾರ್ಮಿಕರಿದ್ದಾರೆ.
ಕೃಪೆ: www.deccanherald.com







