ಪಿತೂರಿದಾರರನ್ನು ಬಂಧಿಸಿದರೆ ಶಾಶ್ವತ ಶಾಂತಿ: ಮಾಜಿ ಸಚಿವ ರಮಾನಾಥ ರೈ
► ದ.ಕ.ಜಿಲ್ಲೆಯಲ್ಲಿ ಸಂವಿಧಾನದ ಆಶಯ ಪಾಲಿಸಿ ► ಕೋಮು ದ್ವೇಷ ಪ್ರಕರಣ-ಪರಿಹಾರದಲ್ಲಿ ತಾರತಮ್ಯ ಬೇಡ ►ಜಾತ್ಯತೀತ ಪಕ್ಷಗಳು- ಸಮಾನ ಮನಸ್ಕರ ಸಂಘಟನೆಗಳ ಆಗ್ರಹ, ದ.ಕ. ಜಿಲ್ಲಾಧಿಕಾರಿಗೆ ಮನವಿ

ಮಂಗಳೂರು, ಆ. 19: ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮು ಸಂಬಂಧಿ ಹಿಂಸಾಚಾರವನ್ನು ತಡೆಗಟ್ಟಬೇಕು. ಸಂತ್ರಸ್ತರಿಗೆ ಸಮಾನ ನ್ಯಾಯ ಒದಗಿಸಬೇಕು ಹಾಗೂ ಸಂವಿಧಾನದ ಆಶಯಗಳನ್ನು ಪಾಲಿಸಬೇಕು ಎಂದು ಒತ್ತಾಯಿಸಿ ದ.ಕ. ಜಿಲ್ಲಾ ಜಾತ್ಯಾತೀತ ಪಕ್ಷಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಬಿಜೆಪಿ ಹೊರತು ಪಡಿಸಿ ವಿವಿಧ ರಾಜಕೀಯ ಪಕ್ಷಗಳು, ದಲಿತ, ಕಾರ್ಮಿಕ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳನ್ನು ಒಳಗೊಂಡ ಜಂಟಿ ವೇದಿಕೆಯು ಇಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರ ಜತೆ ಚರ್ಚಿಸಿತು.
ವೇದಿಕೆಯ ಅಧ್ಯಕ್ಷ ಹಾಗೂ ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಜಿಲ್ಲೆಯಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಪ್ರಕರಣಗಳಿಗೆ ಸಂಬಂಧಿಸಿ ಪಿತೂರಿದಾರರನ್ನು ಬಂಧಿಸಿ ಒಳಗೆ ಹಾಕಿದರೆ ಶಾಶ್ವತ ಶಾಂತಿ ನೆಲೆಸಲಿದೆ ಎಂದರು.
ಜಿಲ್ಲೆಯಲ್ಲಿ ನಡೆದ ಮೂರು ಕೊಲೆ ಪ್ರಕರಣಗಳಲ್ಲಿಯೂ ಜಿಲ್ಲಾಡಳಿತ ಸಮಾನ ಪರಿಹಾರವನ್ನು ನೀಡಬೇಕು. ಫಾಝಿಲ್ ಕೊಲೆ ಆರೋಪಿಗಳ ಬಂಧಿತರ ಹಿನ್ನೆಲೆ ಗೊತ್ತಿದೆ. ಆದರೆ ಪ್ರಕರಣದಲ್ಲಿ ಆರು ಮಂದಿ ಕೊಲೆಗಾರರು ಹಾಗೂ ಇತ್ತೀಚೆಗೆ ಓರ್ವ ಆಶ್ರಯ ನೀಡಿದ ವ್ಯಕ್ತಿಯನ್ನು ಬಂಧಿಸಿ ಕೇವಲ ಎಸಿಪಿ ನೇತೃತ್ವದಲ್ಲಿ ಮಾತ್ರವೇ ತನಿಖೆ ಮುಂದುವರಿಸಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕಾಗಿದೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ. ಮಂಜುನಾಥ ಭಂಡಾರಿ, ಹರೀಶ್ ಕುಮಾರ್, ಜೆಡಿಎಸ್ ಪಕ್ಷದ ಮುಖಂಡರಾದ ಸುಶೀಲ್ ನೊರೊನ್ನಾ, ಅಕ್ಷಿತ್ ಸುವರ್ಣ, ಮಾಜಿ ಶಾಸಕ ಮೊಯ್ದಿನ್ ಬಾವ ಮೊದಲಾದವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಪ್ರತಿಕ್ರಿಯಿಸಿ, ಜಿಲ್ಲಾಡಳಿತ ಸರಕಾರದ ಭಾಗ ಹಾಗೂ ಸರಕಾರದ ಮುಖವಾಗಿ ಕೆಲಸ ಮಾಡುತ್ತದೆ. ಸಂವಿಧಾನಾತ್ಮಕವಾಗಿ ಯಾವ ಕಾರ್ಯ ಮಾಡಬೇಕಿದೆಯೋ ಅದನ್ನು ಜಿಲ್ಲಾಡಳಿತ ಮಾಡಿದ್ದು, ನ್ಯೂನ್ಯತೆಗಳಿದ್ದಲ್ಲಿ ಅದನ್ನು ಸರಿಪಡಿಸಿಕೊಂಡು ಮುಂದಿನ ಕ್ರಮ ವಹಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಮಸೂದ್ ಕೊಲೆಗೆ ಸಂಬಂಧಿಸಿ ಅವರ ಮನೆಯವರೇ ಕಚೇರಿಗೆ ಭೇಟಿ ನೀಡಿ ತಮ್ಮ ಅಹವಾಲು ತೋಡಿಕೊಂಡಿದ್ದರು. ಹಾಗಾಗಿ ಅವರ ಮನೆಗೆ ಭೇಟಿ ನೀಡುವ ಅವಕಾಶ ಬಂದಿರಲಿಲ್ಲ. ಪ್ರವೀಣ್ ನೆಟ್ಟಾರು ಮನೆಗೆ ಮುಖ್ಯಮಂತ್ರಿ ಆಗಮನದ ವೇಳೆ ನಾನು ಭೇಟಿಯಾಗಿದ್ದೆ. ಫಾಝಿಲ್ ಮನೆಗೆ ಇತ್ತೀಚೆಗೆ ಭೇಟಿ ನೀಡಿದ್ದೇನೆ. ಮುಖ್ಯಮಂತ್ರಿ ತುರ್ತು ಪರಿಹಾರ ನಿಧಿ ಅವರ ವಿವೇಚನೆಗೆ ಬಿಟ್ಟದ್ದು. ಮಸೂದ್ ಕುಟುಂಬದಿಂದ ಪರಿಹಾರಕ್ಕೆ ಮನವಿ ಬಂದಿದೆ. ಪಾಝಿಲ್ ಮನೆಯಿಂದ ಬಂದರೂ ಅದನ್ನು ಸೂಕ್ತ ಕ್ರಮಕ್ಕಾಗಿ ಕಳುಹಿಸಲಾಗುವುದು ಎಂದು ಹೇಳಿದರು.
ಕೋಮು ದ್ವೇಷದ ಸರಣಿ ಕೊಲೆಗಳ ಸಂದರ್ಭ ಉದ್ವಿಗ್ನ ಸ್ಥಿತಿಯನ್ನು ನಿಭಾಯಿಸಲು ಲಾಕ್‌ಡೌನ್ ಮಾದರಿ ಕ್ರಮಗಳನ್ನು ಅನುಸರಿಸಿ ಜನಸಾಮಾನ್ಯರನ್ನು ತೊಂದರೆಗೆ ಸಿಲುಕಿಸಲಾಗಿತ್ತು. ಜಿಲ್ಲಾಡಳಿತ ನಡೆಸಿದ ಶಾಂತಿ ಸಭೆ ಕೇವಲ ಕಣ್ಣೊರೆಸುವ ತಂತ್ರವಾಗಿತ್ತು. ಜಿಲ್ಲೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ, ಸ್ಥಳೀಯ ಸಂಸದರು ಹಾಗೂ ಶಾಸಕರು ಕೂಡಾ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಜಿಲ್ಲೆಯಲ್ಲಿ ನಡೆದ ಅಹಿತಕರ ಸಂದರ್ಭ ನಡೆದುಕೊಂಡಿದ್ದಾರೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಂತೆ ಮಸೂದ್ ಹಾಗೂ ಫಾಝಿಲ್ ಕೊಲೆ ಪ್ರಕರಣದಲ್ಲೂ ಯುಎಪಿಎ ಕಾಯ್ದೆಯನ್ನು ಅನುಸರಿಸಬೇಕು. ಮೂರು ಪ್ರಕರಣಗಳನ್ನು ಎನ್‌ಐಎ ತನಿಖೆಗೆ ಹಸ್ತಾಂತರಿಸಬೇಕು. ಈ ಮೂಲಕ ಕೋಮು ಹಿಂಸಾಚಾರದ ಪ್ರಕರಣದಲ್ಲಿ ಸರಕಾರ ತಾರತಮ್ಯ ಎಸಗುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಜನರಿಗೆ ನೀಡಬೇಕು ಎಂದು ಮನವಿಯಲ್ಲಿ ಜಿಲ್ಲಾಡಳಿತವನ್ನು ಒತ್ತಾಯಿಸಲಾಗಿದೆ.
ಮನವಿ ಸಲ್ಲಿಸಿದ ನಿಯೋಗದಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ವೇದಿಕೆಯ ಕಾರ್ಯದರ್ಶಿ ಕೆ. ಯಾದವ ಶೆಟ್ಟಿ, ದಲಿತ ಮುಖಂಡರಾದ ದೇವದಾಸ್, ಅಶ್ರಫ್ ಕೆ., ಶಶಿಧರ ಹೆಗ್ಡೆ, ಸಾಹುಲ್ ಹಮೀದ್ ಹಾಗೂ ಇತರರು ಉಪಸ್ಥಿತರಿದ್ದರು.
ಅನಧಿಕೃತ ಫ್ಲೆಕ್ಸ್ ತಕ್ಷಣ ತೆರವಿಗೆ ಸೂಕ್ತ ಕ್ರಮ
ಮಂಗಳೂರಿನ ಹೊರ ವಲಯದಲ್ಲಿ ಗುರುವಾರ ಮಹಾತ್ಮ ಗಾಂಧಿ ಹಂತಕ ಗೋಡ್ಸೆಯ ಭಾವಚಿತ್ರದಿಂದ ಕೂಡಿದ ಫ್ಲೆಕ್ಸ್ ಮೂಲಕ ಶ್ರೀಕೃಷ್ಣ ಜನ್ಮಾಷ್ಟಮಿಗೆ ಶುಭ ಕೋರಲಾಗಿತ್ತು. ಈ ಬಗ್ಗೆ ಬೆಳಗ್ಗೆ 10.30ಕ್ಕೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಅದನ್ನು ತೆರವುಗೊಳಿಸಿದ್ದು ಸಂಜೆ 4.30ರ ವೇಳೆಗೆ. ಜಿಲ್ಲಾಡಳಿತದಿಂದ ನಿಧಾನಗತಿಯ ಕ್ರಮಗಳು ಶಾಂತಿ ಕದಡಲು ಕಾರಣವಾಗುತ್ತದೆ. ಮಾತ್ರವಲ್ಲದೆ ಆ ಫ್ಲೆಕ್ಸ್‌ನಲ್ಲಿ ಶುಭ ಕೋರುವವರ ಹೆಸರು ಹಾಕಿದ್ದರೂ ಅವರ ವಿರುದ್ಧ ಕ್ರಮವಾಗಿಲ್ಲ ಎಂದು ಮುನೀರ್ ಕಾಟಿಪಳ್ಳ ಜಿಲ್ಲಾಧಿಕಾರಿ ಗಮನ ಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಈ ಬಗ್ಗೆ ಇಂದು ಜಿಲ್ಲೆ ಹಾಗೂ ಮಂಗಳೂರು ಪೊಲೀಸ್ ಕಮಿಷನರೇಟ್‌ನ ಹಿರಿಯ ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ. ಅನಧಿಕೃತ ಫ್ಲೆಕ್ಸ್ ಅಥವಾ ಅನಧಿಕೃತ ವಿಷಯಗಳನ್ನು ಒಳಗೊಂಡ ಯಾವುದೇ ರೀತಿಯ ಪೋಸ್ಟರ್ ಬ್ಯಾನರ್‌ಗಳನ್ನು ತಕ್ಷಣ ತೆರವಿಗೆ ಸೂಚನೆ ನೀಡಲಾಗಿದೆ. ನಿನ್ನೆ ತೆರವುಗೊಳಿಸಲಾದ ಫ್ಲೆಕ್ಸ್‌ನಲ್ಲಿ ವಿವಾದಾತ್ಮಕ ಅಂಶಗಳನ್ನು ನೋಡಿಕೊಂಡು ಹಂತ ಹಂತವಾಗಿ ಕ್ರಮಗಳು ಆಗಲಿದೆ ಎಂದರು.
ವಾರ್ತಾಭಾರತಿಯ ನ್ಯೂಸ್ ಅಪ್ಡೇಟ್ಸ್ ನಿಮ್ಮ ವಾಟ್ಸ್ಆಪ್‌ಗೆ ತಲುಪಬೇಕೇ? ಈ ಲಿಂಕ್ https://bit.ly/3Cd3adz ಕ್ಲಿಕ್ ಮಾಡಿ ನಮ್ಮ ಗ್ರೂಪ್ Join ಆಗಿ.