ಸುರತ್ಕಲ್: ಕುಡುಗೋಲಿನಿಂದ ಹಲ್ಲೆ, ಓರ್ವ ಆಸ್ಪತ್ರೆಗೆ ದಾಖಲು
ಜಾರ್ಖಂಡ್ ಮೂಲದ ಆರೋಪಿ ಅತುಲ್ನಿಂದ ಬಸ್ಸಿಗೂ ಕಲ್ಲು ತೂರಾಟ

ಗಾಯಾಳು ವೆಂಕಪ್ಪ
ಸುರತ್ಕಲ್, ಆ.19: ವ್ಯಕ್ತಿಯೋರ್ವ ಕುಡುಗೋಲಿನಿಂದ ಹಲ್ಲೆ ನಡೆಸಿ, ಬಸ್ಸಿಗೂ ಕಲ್ಲು ತೂರಾಟ ನಡೆಸಿದ ಘಟನೆ ಶುಕ್ರವಾರ ಮಧ್ಯಾಹ್ನ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾನ ಎಂಬಲ್ಲಿ ವರದಿಯಾಗಿದೆ.
ಹಲ್ಲೆಗೊಳಗಾದವರನ್ನು ಸುರತ್ಕಲ್ ನ ವೆಂಕಪ್ಪ ಎಂದು ತಿಳಿದು ಬಂದಿದ್ದು, ಜಾರ್ಖಂಡ್ ಮೂಲದ ಅತುಲ್ (30) ಕಲ್ಲು ಎಸೆದು ಹಲ್ಲೆ ನಡೆಸಿದಾತ ಎಂದು ತಿಳಿದು ಬಂದಿದೆ.
ಕುಡುಗೋಲಿನಿಂದ ಹಲ್ಲೆಗೊಳಗಾದ ವೆಂಕಪ್ಪ ಮತ್ತು ಸಾರ್ವಜನಿಕರಿಂದ ಹಲ್ಲೆಗೊಳಗಾದ ಅತುಲ್ ನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗೋವಾದಿಂದ ಕಾಸರಗೋಡಿಗೆ ತೆರಳುತ್ತಿದ್ದ ಆರೋಪಿ ಅತುಲ್ ಸುರತ್ಕಲ್ ರೈಲು ನಿಲ್ದಾಣದಲ್ಲಿ ಇಳಿದಿದ್ದಾರೆ. ಬಳಿಕ ಅಲ್ಲಿಂದ ಕಾನಕ್ಕೆ ತೆರಳಿದ್ದು ಅಲ್ಲಿ ತನ್ನ ಕೈಯಲ್ಲಿದ್ದ ಕುಡುಗೋಲಿನಿಂದ ಸಾರ್ವಜನಿಕರ ಮೇಲೆ ಬೀಸಿದ್ದಾನೆ ಎನ್ನಲಾಗಿದೆ. ಈ ವೇಳೆ ವೆಂಕಪ್ಪ ಎಂಬವರಿಗೆ ಗಾಯವಾಗಿದ್ದು, ತಕ್ಷಣ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಸಾರ್ವಜನಿಕರು ಆರೋಪಿಯನ್ನು ತರಾಟೆಗೆ ತೆಗೆದುಕೊಂಡು ಆತನಿಗೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಸಾರ್ವಜನಿಕರ ಹಲ್ಲೆಯಿಂದಾಗಿ ಆತನಿಗೂ ಗಾಯಗಳಾಗಿದ್ದು, ಆತನನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಗಾಯಗೊಂಡಿದ್ದ ವೆಂಕಪ್ಪ ಮತ್ತು ಆರೋಪಿ ಅತುಲ್ ಇಬ್ಬರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಾರ್ತಾಭಾರತಿಯ ನ್ಯೂಸ್ ಅಪ್ಡೇಟ್ಸ್ ನಿಮ್ಮ ವಾಟ್ಸ್ಆಪ್ಗೆ ತಲುಪಬೇಕೇ? ಈ ಲಿಂಕ್ https://bit.ly/3Cd3adz ಕ್ಲಿಕ್ ಮಾಡಿ ನಮ್ಮ ಗ್ರೂಪ್ Join ಆಗಿ.







