ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಸರಕಾರಿ ಪ್ರಾಯೋಜಿತ: ಯು.ಟಿ.ಖಾದರ್ ಆರೋಪ

ಮಂಗಳೂರು : ಮಡಿಕೇರಿಯಲ್ಲಿ ಸಿದ್ದರಾಮಯ್ಯ ವಿರುದ್ಧ ನಡೆದ ಪ್ರತಿಭಟನೆ ನೇರವಾಗಿ ಮತ್ತು ಪರೋಕ್ಷವಾಗಿ ಬಿಜೆಪಿ ನೇತೃತ್ವದ ಸರಕಾರಿ ಪ್ರಾಯೋಜಿತ ಕೃತ್ಯ ಎಂದು ವಿಧಾನ ಸಭೆಯ ವಿಪಕ್ಷ ಉಪ ನಾಯಕ, ಶಾಸಕ ಯು.ಟಿ.ಖಾದರ್ ಆರೋಪಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯು.ಟಿ.ಖಾದರ್, ಕಾಂಗ್ರೆಸ್ ಹಿಂದಿನಿಂದಲೂ ಬಿಜೆಪಿಯ ಇಂತಹ ದಬ್ಬಾಳಿಕೆಯ ವಿರುದ್ಧ ಸೈದ್ಧಾಂತಿಕ ಹೋರಾಟ ನಡೆಸಿದೆ. ಈ ಕೃತ್ಯ ವೈಚಾರಿಕ ಮತ್ತು ಪ್ರಜಾಪ್ರಭುತ್ವದ ಬಗೆಗಿನ ಕಾಂಗ್ರೆಸ್ ಹೋರಾಟವನ್ನು ಇನ್ನಷ್ಟು ಪ್ರಬಲಗೊಳಿಸಲಿದೆ ಎಂದರು.
ಅಸಹಿಷ್ಣುತೆಯನ್ನು ಹಿಂದಿನಿಂದಲೂ ಕಾಂಗ್ರೆಸ್ ವಿರೋಧಿಸುತ್ತಾ ಬಂದಿದೆ. ಇಂತಹ ಹಿಂಸಾಚಾರದ ಪ್ರತಿಭಟನೆಯ ಮೂಲಕ ಬಿಜೆಪಿಯು ಕಾಂಗ್ರೆಸ್‌ನ ಜನಪರ ಧ್ವನಿಯನ್ನು ಮುಚ್ಚಿಸಲೆತ್ನಿಸುವುದು ಮೂರ್ಖತನದ ಪರಮಾವಧಿ. ಮಾಜಿ ಮುಖ್ಯಮಂತ್ರಿಯೊಬ್ಬರು ಬರುವಾಗ ಅಲ್ಲಿ ಸೇರಿದ್ದ ಗುಂಪನ್ನು ಚದುರಿಸುವ ಧೈರ್ಯ ತೋರುವ ಬದಲು ರಾಜ್ಯ ಸರಕಾರ ರಾಜಕೀಯ ಪಕ್ಷದ ಕೈಗೊಂಬೆಯಾಗಿ ವರ್ತಿಸಿದೆ. ರಾಜ್ಯವನ್ನು ಕೋಮುವಾದಿ ಮತ್ತು ಗೂಂಡಾಗಳ ಕೈಗೆ ಕೊಟ್ಟು ರಾಜ್ಯ ಸರಕಾರ ಮೌನ ವಹಿಸಿದೆ. ಸಮಾಜದಲ್ಲಿ ಅರಾಜಕತೆ ಸೃಷ್ಟಿಸುವವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಸರಕಾರ ವಿಫಲವಾಗಿದೆ ಎಂದು ಯು.ಟಿ.ಖಾದರ್ ಹೇಳಿದರು.
ಅನುಮತಿ ಪಡೆದು ಯಾರೇ ಬ್ಯಾನರ್, ಫ್ಲೆಕ್ಸ್ ಅಳವಡಿಸಿದರೂ, ಅದನ್ನು ತೆಗೆಯುವ, ತೆಗೆಸುವ ಅಧಿಕಾರ ಯಾರಿಗೂ ಇರುವುದಿಲ್ಲ. ತೆಗೆಯಲು ಹೇಳುವಂತಿಲ್ಲ. ಆದರೆ ಇಂತಹ ಬ್ಯಾನರ್ ಹಾಗೂ ಫ್ಲೆಕ್ಸ್ ಹಾಕುವ ಉದ್ದೇಶವೂ ಸರಿಯಾಗಿಬೇಕು. ನಮ್ಮ ಕ್ಷೇತ್ರದಲ್ಲಿಯೂ ಬ್ಯಾನರ್ ಹಾಕಿದ್ದನ್ನು ನೋಡಿ ನಗಾಡಿಕೊಂಡು ಹೋಗಿದ್ದಾರೆಯೇ ಹೊರತು ತೆಗೆಯುವ, ತೆಗೆಸಲು ಯಾರಲ್ಲೂ ಹೇಳಿಲ್ಲ. ಅನುಮತಿ ಪಡೆಯದೆ ಹಾಕಿರುವುದನ್ನು ಸಂಬಂಧಪಟ್ಟವರೇ ತೆಗೆಸಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಯು.ಟಿ.ಖಾದರ್ ಉತ್ತರಿಸಿದರು.
ಸರಕಾರದಿಂದ ನೀಡಲಾದ ಜಾಹೀರಾತಿನಲ್ಲಿ ದೇಶದ ಪ್ರಥಮ ಪ್ರಧಾನಿ ನೆಹರೂರವರ ಫೋಟೋ ಕೈ ಬಿಟ್ಟಿರುವುದನ್ನು ಉಲ್ಲೇಖಿಸಿ ಮಾತನಾಡಿದ ಯು.ಟಿ.ಖಾದರ್, ದೇಶಕ್ಕಾಗಿ ಸ್ವಾತಂತ್ರ್ಯ ಹೋರಾಟ ಮಾಡಿದ ನೆಹರೂವರ ಫೋಟೋ ಕೈಬಿಟ್ಟಿದ್ದು ಯಾವ ಉದ್ದೇಶದಿಂದ. ಸರಕಾರ ಯಾವ ಸಂದೇಶ ನೀಡುತ್ತಿದ್ದಾರೆ. ನೆಹರೂರವರ ಫೋಟೋ ಕೈಬಿಟ್ಟಿದ್ದು, ಒಳ್ಳೆಯದೇ ಆಯಿತು. ಯಾರ್ಯಾರ ಜತೆ ಅವರ ಫೋಟೋ ಬಂದರೆ ಅವರ ಘನತೆಗೆ ತೊಂದರೆ ಆಗುತ್ತಿತ್ತು ಎಂದರು.
ರಾಜ್ಯದ ಜನತೆಗೆ ನೆಮ್ಮದಿ ಬೇಕಾದರೆ ಬಿಜೆಪಿ ಸರಕಾರವನ್ನು ಕಿತ್ತೊಗೆಯಬೇಕು. ಮೂರು ಬಾರಿ ಸರ್ವೆ ಮಾಡಿದಾಗಲೂ ಗೆಲ್ಲಲು ಸಾಧ್ಯವಿಲ್ಲ ಎಂಬುದು ಬಿಜೆಪಿಗೆ ಅರಿವಾಗಿದೆ. ಹಾಗಾಗಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರ ಮೇಲೆ ಈ ರೀತಿ ಘಟನೆಗಳಿಗೆ ಸರಕಾರವೇ ಪರೋಕ್ಷ ಬೆಂಬಲ ನೀಡುತ್ತಿದೆ ಎಂದು ಯು.ಟಿ.ಖಾದರ್ ಆರೋಪಿಸಿದರು.
ಗೋಷ್ಠಿಯಲ್ಲಿ ಸದಾಶಿವ ಉಳ್ಲಾಲ್, ಸಂತೋಷ್ ಕುಮಾರ್ ಶೆಟ್ಟಿ, ದೀಪಕ್ ಪಿಲಾರ್, ಅಝೀಝ್, ದೇವಾನಂದ ಶೆಟ್ಟಿ, ಶೌಕತ್ ಅಲಿ, ಚಂದ್ರಿಕಾ ರೈ, ಫಾರೂಕ್, ಪುರುಷೋತ್ತಮ ಶೆಟ್ಟಿ, ರೆಹಮಾನ್, ಅಚ್ಚುತ ಗಟ್ಟಿ ಉಪಸ್ಥಿತರಿದ್ದರು.
ಸಾವರ್ಕರ್ ಬಗ್ಗೆ ಕಾಂಗ್ರೆಸ್ ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನಷ್ಟೆ ಹೊಂದಿದೆ. ಅವರು ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂದು ಯಾರೂ ಹೇಳಿಲ್ಲ. ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಕ್ಕೆ ಅವರನ್ನು ಅಂಡಮಾನ್ ಕತ್ತಲ ಕೋಣೆಯ ಜೈಲಿಗೆ ಹಾಕಲಾಗಿತ್ತು. ಅವರ ಹಾಗೆ 200 ರಿಂದ 300 ಜನ ಅಲ್ಲಿದ್ದರು. ಅಲ್ಲಿದ್ದ ಕೆಲವು ಹೋರಾಟಗಾರರನ್ನು ಎದೆಗೆ ಗುಂಡಿಕ್ಕಿ ಕೊಂದರೆ, ಹಲವರಿಗೆ ನೇಣು ವಿಧಿಸಲಾಯಿತು. ಕೆಲವು ಹೋರಾಟಗಾರರನ್ನು ಕಠಿಣ ಶಿಕ್ಷೆ ನೀಡಿ ಕೊಲ್ಲಲಾಯಿತು. ಆದರೆ ಸಾವರ್ಕರ್ ಬ್ರಿಟಿಷರಿಗೆ 10 ಬಾರಿ ದಯಾ ಭಿಕ್ಷೆ ಅರ್ಜಿ ಬರೆದರು. ಕ್ಷಮೆ ಕೋರಿದ ಕಾರಣ ಅವರಿಗೆ ನೇಣು ಹಾಕದೆ ಬಿಡುಗಡೆಗೊಳಿಸಲಾಯಿತು. 1924ರ ಬಳಿಕ ಸಾವರ್ಕರ್ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶಕ್ಕಾಗಿ ಹೋರಾಟ ಮಾಡಿದ ಒಂದು ಉದಾಹರಣೆ ಇತಿಹಾಸದಲ್ಲಿ ಸಿಗಲಿಕ್ಕಿಲ್ಲ. ಸ್ವಾತಂತ್ರಕ್ಕಾಗಿ ಹೋರಾಟ ಮಾಡಿ ನೇಣಿಗೆ ಹುತಾತ್ಮರಾದವರು ದೇಶಪ್ರೇಮಿಗಳೋ, ದಯಾ ಭಿಕ್ಷೆ ಕೋರಿ ಹೋರಾಟ ಮಾಡುವುದಿಲ್ಲ ಎಂದು ಹೇಳಿದವರು ದೇಶ ಪ್ರೇಮಿಗಳೇ? ನೆಹರೂವರೂ ಬ್ರಿಟಿಷರ ವಿರುದ್ಧ ಹೋರಾಟದ ಸಂದರ್ಭ ಜೈಲಿನಲ್ಲಿದ್ದಾಗ ದಯಾ ಭಿಕ್ಷೆಯ ಅರ್ಜಿಯನ್ನು ತಮ್ಮ ಪತ್ನಿಗೆ ಬರೆದಿದ್ದರು. ನೆಹರೂ ಪತ್ನಿಗೆ ಪತ್ರ ಬರೆದು ಕ್ಷಮೆ ಕೋರಿದ್ದರೆ, ಸಾವರ್ಕರ್ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದಿರುವುದು. ಅದುವೇ ನೆಹರೂ ಮತ್ತು ಸಾವರ್ಕರ್‌ಗೆ ಇರುವ ವ್ಯತ್ಯಾಸ ಎಂದು ಯು.ಟಿ.ಖಾದರ್ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.