ಬೆಂಗಳೂರಿನಲ್ಲಿ ಮುನವ್ವರ್ ಫಾರೂಕಿ ಕಾರ್ಯಕ್ರಮ ಮತ್ತೆ ರದ್ದು

ಬೆಂಗಳೂರು, ಆ.19:ಗುಜರಾತ್ ಮೂಲದ ಕಾಮಿಡಿಯನ್ ಮುನವ್ವರ್ ಫಾರೂಕಿ ಹಾಸ್ಯ ಕಾರ್ಯಕ್ರಮವೂ ಬೆಂಗಳೂರಿನಲ್ಲಿ ಎರಡನೆ ಬಾರಿಗೆ ರದ್ದಾಗಿದೆ ಎಂದು ವರದಿಯಾಗಿದೆ.
ನಗರದ ಪುಟ್ಟೇನಹಳ್ಳಿ ಸಮೀಪವಿರುವ ಎಂಎಲ್‍ಆರ್ ಕನ್ವೆನ್ಷನ್ ಸಭಾಂಗಣದಲ್ಲಿ ಮುನವ್ವರ್ ಫಾರೂಕಿ (Munawar Faruqui) ಹಾಸ್ಯ ಕಾರ್ಯಕ್ರಮ ಶುಕ್ರವಾರ ಮಧ್ಯಾಹ್ನ ಸುಮಾರಿಗೆ ಏರ್ಪಡಿಸಲಾಗಿತ್ತು.
ಆದರೆ, ಆಯೋಜಕರು ಯಾವುದೇ ಅನುಮತಿ ಪಡೆಯದ ಹಿನ್ನೆಲೆ ಕಾರ್ಯಕ್ರಮಕ್ಕೆ ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ಅನುಮತಿ ನೀಡಿಲ್ಲ. ಇನ್ನೂ, ಯಾವುದೇ ಅನುಮತಿ ಪಡೆಯದೇ ಕೇವಲ ಆನ್ ಲೈನ್‍ನಲ್ಲಿ ಮಾಹಿತಿ ನೀಡಿ ಟಿಕೆಟ್ ಮಾರಾಟ ಮಾಡಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ.
ಮಧ್ಯಾಹ್ನ 3 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮ ರದ್ದುಗೊಳಿಸಲು ದಕ್ಷಿಣ ವಿಭಾಗದ ಪೊಲೀಸರು ಸೂಚಿಸಿದ್ದು, ಅದರಂತೆ ಆಯೋಜಕರು ಕಾರ್ಯಕ್ರಮ ಕೈಬಿಟ್ಟಿದ್ದಾರೆ. ಅಲ್ಲದೆ, ಕಳೆದ ನವೆಂಬರ್ ತಿಂಗಳಿನಲ್ಲಿಯೂ ಬೆಂಗಳೂರಿನ ಅಶೋಕ್ ನಗರದಲ್ಲಿರುವ ಗುಡ್ ಶೇಫರ್ಟ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವೂ ರದ್ದುಗೊಳಿಸಲಾಗಿತ್ತು.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕ್ರಿಯಿಸಿರುವ ಮುನವ್ವರ್ ಫಾರೂಕಿ, 'ಪೊಲೀಸರ ಅನುಮತಿ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ನನ್ನ ಆರೋಗ್ಯ ಸರಿಯಿಲ್ಲ ಕಾರಣ ಬೆಂಗಳೂರು ಪ್ರವಾಸ ಕೈಬಿಟ್ಟಿದ್ದೇನೆ' ಎಂದು ತಿಳಿಸಿದ್ದಾರೆ.







