ಗೃಹ ಇಲಾಖೆಗೆ ನರರೋಗ ಬಂದಿದೆಯೇ?: ಸಚಿವ ಆರಗ ಜ್ಞಾನೇಂದ್ರಗೆ ಪ್ರಕಾಶ್ ರಾಥೋಡ್ ಪ್ರಶ್ನೆ

ಬೆಂಗಳೂರು, ಆ. 19: ‘ಗೃಹ ಮಂತ್ರಿ ಆರಗ ಜ್ಞಾನೇಂದ್ರ ಅವರೇ ನಿಮಗೆ ಮತ್ತು ನಿಮ್ಮ ಪೊಲೀಸ್ ಇಲಾಖೆಗೆ ನರ ರೋಗ ಬಂದಿದೆಯೇ?' ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಸಚೇತಕ ಪ್ರಕಾಶ್ ರಾಥೋಡ್, ಗೃಹ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೇಲೆ ಹೊಲಸು ವ್ಯಕ್ತಿತ್ವದ ಆರೆಸೆಸ್ಸ್ ಮತ್ತು ಬಿಜೆಪಿ ಕಾರ್ಯಕರ್ತರು ಮಡಿಕೇರಿಯಲ್ಲಿ ದಾಳಿಗೆ ಮುಂದಾಗಿದ್ದು ಸರಿಯಲ್ಲ. ಶಿವಮೊಗ್ಗದಲ್ಲಿ ಬಜರಂಗಿಗಳು ಪೊಲೀಸರಿಗೆ ಬಾಯಿಗೆ ಬಂದಂತೆ ಬಯ್ಯುತ್ತಾ, ಕೆಟ್ಟದಾಗಿ ಛೀಮಾರಿ ಹಾಕಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆನ್ನುವ ವರದಿಗಳಿವೆ. ಆದರೂ ಪೊಲೀಸ್ ಇಲಾಖೆ ಮತ್ತು ಗೃಹ ಮಂತ್ರಿಗಳು ನರ ರೋಗಕ್ಕೆ ತುತ್ತಾದವರಂತೆ ಬಿದ್ದಿದ್ದಾರೆ. ಇದೀಗ ನಿಮ್ಮ ಹೇಡಿತನ ಸಿದ್ದರಾಮಯ್ಯ ಅವರ ಮೇಲೆ ಪ್ರದರ್ಶಿಸಿದ್ದೀರಿ' ಎಂದು ಟೀಕಿಸಿದ್ದಾರೆ.
‘ಪೆದ್ದು ಪೆದ್ದಾಗಿ ಆಡೋ ಗೃಹಮಂತ್ರಿ, ಹುಚ್ಚುಚ್ಚಾಗಿ ಆಡುವ ಮುಖ್ಯಮಂತ್ರಿ ಇರುವ ರಾಜ್ಯದಲ್ಲಿ ಪೊಲೀಸರು ವಸೂಲಿ ಮಾಡಿಕೊಂಡು ಮಲಗಿರುತ್ತಾರೆ. ‘ಪೊಲೀಸರು ಎಂಜಲು ತಿಂದುಕೊಂಡು ನಾಯಿಗಳ ಹಾಗೆ ಬಿದ್ದಿರುತ್ತಾರೆ' ಎಂದು ಸ್ವತಃ ಗೃಹ ಮಂತ್ರಿ ಆರಗ ಜ್ಞಾನೇಂದ್ರ ಅವರೇ ನೀಡಿದ ಹೇಳಿಕೆಯನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಗೃಹ ಸಚಿವರ ಈ ಹೇಳಿಕೆಯನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಸದನದಲ್ಲೇ ಪ್ರಶ್ನಿಸಿ ಗೃಹ ಮಂತ್ರಿಗಳನ್ನು ಪೇಚಿಗೆ ಸಿಲುಕಿಸಿದ್ದರು' ಎಂದು ಅವರು ನೆನಪು ಮಾಡಿಕೊಂಡಿದ್ದಾರೆ.
ಶಿವಮೊಗ್ಗದಲ್ಲಿ ಬಜರಂಗಿಗಳು ಬಾಯಿಗೆ ಬಂದಂಗೆ ಕ್ಯಾಕರಿಸಿ ಉಗಿದು ಪೊಲೀಸರ ಕೊರಳಪಟ್ಟಿ ಹಿಡಿದು ಎಳೆದು ಮಜಾ ತಗೋತಾ ಇದ್ದಾರೆ. ಪೊಲೀಸರ ಮೇಲೆ ಹಲ್ಲೆ ಕೂಡ ನಡೆಸಿದ್ದಾರೆ. ನಿಮಗೆ ಮತ್ತು ಪೊಲೀಸ್ ಇಲಾಖೆಗೆ ನರರೋಗ ಬಂದಿದೆಯಾ @JnanendraAraga ಅವರೇ? ನಿಮ್ಮ ಮತ್ತು ನಿಮ್ಮ ಪೊಲೀಸರ ಹೇಡಿತನ @siddaramaiah ವಿರುದ್ಧ ಮಾತ್ರನಾ?ನಾಚಿಕೆ ಆಗಲ್ವಾ? pic.twitter.com/jyDbbg3v74
— Prakash Rathod (@PRathod_INC) August 19, 2022