ಮರಳು ಅಕ್ರಮ ಸಾಗಾಟ ತಡೆಗೆ ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಸೂಚನೆ
► ಅನಧಿಕೃತ, ವಿವಾದಾತ್ಮಕ-ದ್ವೇಷಪೂರಿತ ಫ್ಲೆಕ್ಸ್ ತೆರವಿಗೆ ಕ್ರಮ ► ಡಿಜೆ ಹಾಗೂ ಧ್ವನಿವರ್ಧಕಗಳ ಬಳಕೆಗೆ ನ್ಯಾಯಾಲಯಗಳ ನಿರ್ದೇಶನ ಪಾಲನೆ

ಮಂಗಳೂರು, ಆ.19: ಮರಳು ಅಕ್ರಮ ಸಾಗಾಟದ ತಡೆಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಪೊಲೀಸರೊಂದಿಗೆ ತಂಡವಾಗಿ ಕಾರ್ಯನಿರ್ವಸುವಂತೆ ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸೂಚಿಸಿದರು.
ಅಕ್ರಮ ಮರಳುಗಾರಿಕೆ ತಡೆ, ಅನಧಿಕೃತ ಫ್ಲಾಕ್ಸ್ ತೆರವು ಹಾಗೂ ಹಬ್ಬ ಆಚರಣೆಯ ಸಂದರ್ಭ ಡಿಜೆ ಹಾಗೂ ಧ್ವನಿವರ್ಧಕಗಳ ಬಳಕೆಯ ಬಗ್ಗೆ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉಳ್ಳಾಲ, ಕೋಟೆಪುರ, ಸೋಮೇಶ್ವರ, ಉಚ್ಚಿಲ, ಪೇರಿಬೈಲು, ತಲಪಾಡಿ ಮತ್ತಿತರ ಕಡೆ ಮರಳು ಅಕ್ರಮ ಸಾಗಾಟವಾಗುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಅದನ್ನು ತಡೆಗಟ್ಟಲು ಜಿಲ್ಲಾಡಳಿತದಿಂದ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಅಧಿಕಾರಿಗಳ ನಿಯೋಜನೆ ಹಾಗೂ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಈ ಸ್ಥಳಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿಗಳನ್ನು ಪರಿಶೀಲಿಸಬೇಕು, ತಡರಾತ್ರಿ ಸಂಚರಿಸುವ ವಾಹನಗಳ ಮೇಲೆ ಕಣ್ಣಿಡಬೇಕು, ಮುಖ್ಯವಾಗಿ ಪೊಲೀಸ್ ಚೆಕ್ ಪೋಸ್ಟ್‌ಗಳಲ್ಲಿ ಮತ್ತಷ್ಟು ಎಚ್ಚರ ವಹಿಸಬೇಕು ಎಂದು ಡಿಸಿ ಸೂಚಿಸಿದರು.
ಅಕ್ರಮ ಮರಳುಗಾರಿಕೆ ತಡೆಯಲು ಅಳವಡಿಸಿರುವ ಸಿಸಿಟಿವಿಗಳ ಫೂಟೇಜ್ ಪರಿಶೀಲಿಸಿ ವರದಿ ನೀಡಬೇಕು. ಮರಳು ಅಕ್ರಮ ಸಾಗಾಣಿಕೆಯ ಬಗ್ಗೆ ಪ್ರಕರಣ ದಾಖಲಿಸಬೇಕು ಎಂದು ತನ್ನ ಅಧೀನ ಅಧಿಕಾರಿಗಳಿಗೆ ಆದೇಶಿಸಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಸಂಬಂಧಿಸಿದ ವಾಹನಗಳ ಪರವಾನಗಿಯನ್ನು ರದ್ದು ಪಡಿಸಿ, ಆ ವಾಹನಗಳನ್ನು ವಶಕ್ಕೆ ಪಡೆಯುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳೂರು ನಗರ ಸೇರಿದಂತೆ ಜಿಲ್ಲಾದ್ಯಂತ ಅಧಿಕೃತ ಸ್ಥಳಗಳಲ್ಲಿ ಅನಧಿಕೃತ ಫ್ಲೆಕ್ಸ್ ಹಾಕುವ, ದ್ವೇಷಪೂರಿತ ಹಾಗೂ ವಿವಾವಾದಾತ್ಮಕ ಫ್ಲೆಕ್ಸ್‌ಗಳನ್ನು ಹಾಕುವ ಹಾಗೂ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಫ್ಲೆಕ್ಸ್‌ಗಳನ್ನು ಹಾಕುವವರ ವಿರುದ್ಧ ಪೊಲೀಸರ ಸಹಕಾರದಲ್ಲಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ಗ್ರಾಪಂ ಮಟ್ಟದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ವಿವಾದಾತ್ಮಕ ಅಥವಾ ದ್ವೇಷ ಸಾರುವ ಸಂದೇಶದ ಫ್ಲೆಕ್ಸ್‌ಗಳು ಕಂಡುಬಂದ ಕೂಡಲೇ ಅವುಗಳನ್ನು ಸಂಬಂಧಿಸಿದ ಸ್ಥಳದ ಅಧಿಕಾರಿಗಳು ಪೊಲೀಸರ ಸಹಕಾರ ಪಡೆದು ತೆರವುಗೊಳಿಸಬೇಕು. ಅಧಿಕೃತ ಸ್ಥಳಗಳಲ್ಲಿ ಫ್ಲೆಕ್ಸ್ ಹಾಕುವ ಮುನ್ನ ಸಂಬಂಧಿಸಿದ ಅಧಿಕಾರಿಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಅದನ್ನು ಮುದ್ರಿಸಿದವರ ವಿವರ ದಾಖಲಿಸುವಂತೆ ಸೂಚಿಸಬೇಕು. ಅನುಮತಿ ಪಡೆಯದೆ ಫ್ಲೆಕ್ಸ್ ಅಳವಡಿಸಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು, ಈ ನಿಟ್ಟಿನಲ್ಲಿ ಫ್ಲೆಕ್ಸ್ ಪ್ರಿಂಟರ್‌ಗಳ ಸಭೆ ಕರೆಯಲಾಗುವುದು ಎಂದು ಡಿಸಿ ಹೇಳಿದರು.
ಹೈಕೋರ್ಟ್‌ನ ಆದೇಶ ಹಾಗೂ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳನ್ವಯ ಡಿಜೆ ಸೆಟ್ ಹಾಗೂ ಧ್ವನಿವರ್ಧಕಗಳನ್ನು ಬಳಸಬೇಕು. ಈ ಬಗ್ಗೆ ಜಿಲ್ಲಾ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ನಿಭಾಯಿಸಬೇಕಾದ ಕರ್ತವ್ಯಗಳ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಮಂಗಳೂರು ನಗರ ವ್ಯಾಪ್ತಿಯಲ್ಲಿ ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರು, ಮಂಗಳೂರು ಮಹಾನಗರ ಪಾಲಿಕೆಯ ಇಂಜಿನಿಯರ್‌ಗಳನ್ನು ಒಳಗೊಂಡ ತಂಡವನ್ನು ರಚಿಸಲಾಗಿದೆ. ನ್ಯಾಯಾಲಯದ ಆದೇಶವನ್ನು ಈ ತಂಡವು ಪಾಲಿಸಬೇಕು ಎಂದು ಡಿಸಿ ಸೂಚನೆ ನೀಡಿದರು.
ದ.ಕ.ಜಿಪಂ ಸಿಇಒ ಡಾ. ಕುಮಾರ್, ಜಿಲ್ಲಾ ಎಸ್ಪಿ ಋಷಿಕೇಶ್ ಭಗವಾನ್ ಸೋನಾವಣೆ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್, ಪರಿಸರ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಮಹೇಶ್ ಕುಮಾರ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕ ಲಿಂಗರಾಜು, ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಹರೀಶ್ ಕುಮಾರ್, ತಹಶೀಲ್ದಾರ್‌ಗಳಲ್ಲದೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.