ಸಿದ್ದರಾಮಯ್ಯ ಕಾರಿನ ಮೇಲೆ ದಾಳಿಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಖಂಡನೆ

ಉಡುಪಿ : ಕೊಡಗು ಜಿಲ್ಲೆಯಲ್ಲಿ ಮಳೆಹಾನಿಗೆ ಒಳಗಾದ ಪ್ರದೇಶಗಳ ವೀಕ್ಷಣೆಗೆ ತೆರಳಿದ್ದ, ಸಂವಿಧಾನಾತ್ಮಕ ಹುದ್ದೆ ಹೊಂದಿದ ವಿರೋಧಪಕ್ಷದ ನಾಯಕ ರಾದ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದು ಪ್ರತಿಭಟನೆ ಮಾಡಿದ ಬಿಜೆಪಿ ನಡೆ ಖಂಡನೀಯ. ಇದು ಸರಕಾರದ ಭದ್ರತಾ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಸಿದ್ದರಾಮಯ್ಯ ಈಗಾಗಲೇ ಹಲವಾರು ಬಾರಿ ಕೊಡಗು ಜಿಲ್ಲೆಯಲ್ಲಿ ಸಂಚಾರ ಮಾಡಿದ್ದಾರೆ. ಆಗ ಇಲ್ಲದ ಪ್ರತಿಭಟನೆ ಈಗ ಪ್ರತ್ಯಕ್ಷ ಆಗಲು ಕಾರಣವೇನು ಎಂದು ಪ್ರಶ್ನಿಸಿದ ಹೇಳಿಕೆ, ರಾಜ್ಯದಲ್ಲಿ ಕಾಂಗ್ರೆಸ್ ಗೆಲುವಿನ ಬಗ್ಗೆ ಸಮೀಕ್ಷೆಗಳು ಬಂದ ನಂತರ ಬಿಜೆಪಿ ಹತಾಶೆಯಿಂದ ಈ ಕೆಲಸ ಮಾಡಿಸುತ್ತಿದೆ. ವಿರೋಧ ಪಕ್ಷದ ನಾಯಕನಾಗಿ ಜನರ ಸಮಸ್ಯೆ ಆಲಿಸಲು ತೆರಳಿದ ಸಿದ್ದರಾಮಯ್ಯನವರ ಮೇಲೆ ಮೊಟ್ಟೆ ಎಸೆದಿರುವುದು ಹಿಂದೂ ಸಂಸ್ಕೃತಿಯೇ ಎಂದು ಬಿಜೆಪಿ ಹೇಳಬೇಕು ಎಂದು ವ್ಯಂಗ್ಯವಾಡಿದೆ.
ಪ್ರಜಾಪ್ರಭುತ್ವ ರಾಷ್ಟದಲ್ಲಿ ಅಭಿಪ್ರಾಯಗಳನ್ನು ತಿಳಿಸಲು ಸರ್ವರಿಗೂ ಅಧಿಕಾರವಿದೆ. ಇದರಿಂದ ಕಾಂಗ್ರೆಸ್ ಪಕ್ಷದ ಮಾನಸಿಕ ಸ್ಧೈರ್ಯವನ್ನು ಕುಗ್ಗಿಸಲು ಸಾಧ್ಯವಿಲ್ಲ.ಸಂವಿಧಾನಾತ್ಮಕ ಹುದ್ದೆ ಹೊಂದಿರುವವರಿಗೆ ರಕ್ಷಣೆ ಕೊಡಲಾಗದ ಸರಕಾರ, ಜನಸಾಮಾನ್ಯನಿಗೆ ರಕ್ಷಣೆ ನೀಡು ಸಾಧ್ಯವೇ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ ರಾವ್ ಕಿದಿಯೂರು ಸರಕಾರವನ್ನು ಪ್ರಶ್ನಿಸಿದ್ದಾರೆ.





