KPSC ನೇಮಕಾತಿಯಲ್ಲಿ ಅಕ್ರಮ ಆರೋಪ: ಸರಕಾರದ ವಿರುದ್ಧ ಪ್ರತಿಭಟನೆಗೆ ಮುಂದಾದ ಅಭ್ಯರ್ಥಿಗಳು ಪೊಲೀಸ್ ವಶಕ್ಕೆ

ಬೆಂಗಳೂರು, ಆ.19: ಕೆಪಿಎಸ್ಸಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ನೇಮಕಾತಿ ಪ್ರಕ್ರಿಯೆ ನಡೆದಿದೆ ಎನ್ನಲಾದ ಅಕ್ರಮ, ಭ್ರಷ್ಟಾಚಾರ, ವಿಳಂಬನೀತಿ ವಿರೋಧಿಸಿ ರಾಜ್ಯ ಸರಕಾರದ ವಿರುದ್ಧ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆ ಮುಂಚೆಯೇ ಹೋರಾಟದ ನೇತೃತ್ವ ವಹಿಸಿದ್ದ ಹಲವರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಜರುಗಿತು.
ಶುಕ್ರವಾರ ಮುಂಜಾನೆ ಇಲ್ಲಿನ ಜ್ಞಾನಭಾರತಿ ಠಾಣಾ ಪೊಲೀಸರು ಕಾಂಗ್ರೆಸ್ ನಾಯಕಿ ಭವ್ಯಾ ನರಸಿಂಹಮೂರ್ತಿ ಸೇರಿದಂತೆ ಹಲವರನ್ನು ವಶಕ್ಕೆ ಪಡೆದರು, ಸಂಜೆ 6 ಗಂಟೆವರೆಗೂ ಠಾಣೆಯಲ್ಲಿಯೇ ಇರಿಸಿದ್ದರು.
ಕರ್ನಾಟಕ ಸ್ಪರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳ ಒಕ್ಕೂಟದಿಂದ ಶುಕ್ರವಾರ ಇಲ್ಲಿನ ಹಂಪಿನಗರ ಗ್ರಂಥಾಲಯದಿಂದ ರಾಜಭವನವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಸಾವಿರಾರು ಯುವಕರು ಪಾಲ್ಗೊಳ್ಳುವ ನಿರೀಕ್ಷೆ ಇದ್ದ ಹಿನ್ನೆಲೆ ಹೋರಾಟ ನೇತೃತ್ವ ವಹಿಸಿದ್ದ ಪ್ರಮುಖರನ್ನು ಪೊಲೀಸರು ಮುಂಜಾನೆಯೇ ವಶಕ್ಕೆ ಪಡೆದು ಮೊಬೈಲ್ ಕಸಿದುಕೊಂಡರು ಎನ್ನಲಾಗಿದೆ.
ಮೆರವಣಿಗೆಗೆ ಅವಕಾಶ ನಿರಾಕರಣೆ ಮಾಡಿದ ಪೊಲೀಸರು, ಒಂದು ಕಡೆ ಮಾತ್ರ ಪ್ರತಿಭಟನೆ ನಡೆಸಬೇಕು ಎಂದು ಸೂಚಿಸಿದರು. ಇದಾದ ಬಳಿಕ ಯುವಕರ ಮೆರವಣಿಗೆಯನ್ನು ಪೊಲೀಸರು ಮೊಟಕುಗೊಳಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಭವ್ಯಾ ನರಸಿಂಹಮೂರ್ತಿ, ರಾಜ್ಯ ಸರಕಾರವೂ ಉದ್ದೇಶಪೂರ್ವಕವಾಗಿ ನಮ್ಮ ನ್ಯಾಯಯುತ ಹೋರಾಟವನ್ನು ನಿಲ್ಲಿಸಿದೆ. ನಾವು ನಮಗೆ ಆಗಿರುವ ಅನ್ಯಾಯವನ್ನು ಪ್ರಶ್ನೆ ಮಾಡಲು ಇಲ್ಲಿ ಅವಕಾಶ ನೀಡಿಲ್ಲ. ಪೊಲೀಸರು ದೌರ್ಜನ್ಯ ನಡೆಸಿ ನಮ್ಮನ್ನು ವಶಕ್ಕೆ ಪಡೆದು. ಇದು ಇಲ್ಲಿಗೆ ನಿಲ್ಲುವುದಿಲ್ಲ, ಮುಂದಿನ ದಿನಗಳಲ್ಲಿ ಮತ್ತೆ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.







