ಮಂಗಳೂರಿನ ಛಾಯಾಚಿತ್ರಗ್ರಾಹಕ ವಿವೇಕ್ ಗೌಡಗೆ ಅಸ್ಕಾರಿ ಪ್ರಶಸ್ತಿ

ಮಂಗಳೂರು : ಮಂಗಳೂರು ಮೂಲದ ಯುವ ಛಾಯಾಗ್ರಾಹಕ ವಿವೇಕ್ ಗೌಡ 2022ರ ಪ್ರತಿಷ್ಠಿತ ಅಸ್ಕಾರಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಆ.20ರಂದು ಬೆಂಗಳೂರಿನಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.
ಕರ್ನಾಟಕದ ಯುವ ಛಾಯಾಗ್ರಾಹಕರನ್ನು ಪ್ರೋತ್ಸಾಹಿಸಲು ಶಾರುಖ್ ಅಸ್ಕರಿ ಹಮೀದ್ ಸ್ಮರಣಾರ್ಥ ೧೯೯೭ರಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಯನ್ನು ಬೆಂಗಳೂರಿನ ಯೂತ್ ಫೋಟೋಗ್ರಾಫಿಕ್ ಸೊಸೈಟಿ (ವೈಪಿಎಸ್) ಪ್ರತೀ ವರ್ಷ ಆಯೋಜಿಸುತ್ತದೆ. ಕರ್ನಾಟಕ ರಾಜ್ಯದ ೩೫ ವಷರ್ಕ್ಕಿಂತ ಕಡಿಮೆ ವಯಸ್ಸಿನ ಛಾಯಾಗ್ರಾಹಕರು ನಾಲ್ಕು ಫೋಟೋಗಳ ಸರಣಿಯೊಂದಿಗೆ ಭಾಗವಹಿಸಲು ಅರ್ಹರಾಗಿರುತ್ತಾರೆ.
ವಿವೇಕ್ ಗೌಡ ‘ಇಂಥಾ ಮೀನುಗಾರರು’ ಶೀರ್ಷಿಕೆಯ ಛಾಯಾಚಿತ್ರ ಸರಣಿಗಾಗಿ ಈ ಪ್ರಶಸ್ತಿಯನ್ನು ಪಡೆದಿದ್ದಾರೆ. ಮ್ಯಾನ್‌ಮಾರ್‌ನ (ಬರ್ಮಾ) ಇನ್ಲೆ ಸರೋವರದ ಸಾಂಪ್ರದಾಯಿಕ ಸಮುದಾಯವಾದ ’ಇಂಥಾ’ ಮೀನುಗಾರರ ಅಳಿಯುತ್ತಿರುವ ಮೀನುಗಾರಿಕಾ ಪದ್ದತಿಗಳನ್ನು ಸರಣಿಯು ದಾಖಲಿಸುತ್ತದೆ.
ಪ್ರವಾಸಿ ಛಾಯಾಗ್ರಾಹಕ ಶ್ರೀನಾಥ್ ನಾರಾಯಣ್, ಸೃಜನಾತ್ಮಕ ಛಾಯಾಗ್ರಾಹಕ ಗಿರೀಶ್ ಮಾಯಾಚಾರಿ, ಯೂತ್ ಫೋಟೋಗ್ರಾಫಿಕ್ ಸೊಸೈಟಿಯ ಜಂಟಿ ಕಾರ್ಯದರ್ಶಿ ಪ್ರೇಮಾ ಕಾಕಡೆ ಅವರನ್ನು ಒಳಗೊಂಡ ತೀರ್ಪುಗಾರರ ತಂಡವು ಆಯ್ಕೆ ಮಾಡಿದ ಇಬ್ಬರು ವಿಜೇತರಲ್ಲಿ ವಿವೇಕ ಗೌಡ ಒಬ್ಬರಾಗಿದ್ದಾರೆ. ಈ ವರ್ಷದ ಎರಡೂ ಬಹುಮಾನಗಳನ್ನು ಮಂಗಳೂರಿನ ಛಾಯಾಗ್ರಾಹಕರಿಗೆ ನೀಡಿರುವುದು ವಿಶೇಷವಾಗಿದೆ. ಹುಲಿ ಮರಿಗಳ (ಪಿಲಿವೇಷ) ಭಾವಚಿತ್ರಕ್ಕಾಗಿ ಶ್ರವಣ್ ಬಿ.ಎಂ ಅವರಿಗೆ ಪ್ರಶಸ್ತಿ ಘೋಷಿಸಲಾಗಿದೆ.