ಉಡುಪಿಯಲ್ಲಿ ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ

ಉಡುಪಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಶುಕ್ರವಾರ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾ ಯಿತು. ನಿರ್ಜಲ ಉಪವಾಸ ದಲ್ಲಿದ್ದ ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ ಬೆಳಗ್ಗೆ ಮತ್ತು ರಾತ್ರಿ ಮಹಾಪೂಜೆ ನೆರವೇರಿಸಿದರು. ಬಳಿಕ ಮಧ್ಯರಾತ್ರಿ ೧೨:೨೧ಕ್ಕೆ ಪರ್ಯಾಯ ಸ್ವಾಮೀಜಿ ಅರ್ಘ್ಯ ಪ್ರದಾನ ಮಾಡಿದರು. ಬಳಿಕ ಉಳಿದ ಸ್ವಾಮೀಜಿಗಳು ಹಾಗೂ ಭಕ್ತರು ಸರದಿಯಂತೆ ಅರ್ಘ್ಯ ಪ್ರದಾನ ಮಾಡಿದರು.
ಬೆಳಗ್ಗೆಯಿಂದಲೇ ರಾಜ್ಯ, ಹೊರರಾಜ್ಯಗಳಿಂದ ಸಾವಿರಾರು ಸಂಖ್ಯೆ ಯಲ್ಲಿ ಭಕ್ತರು ಉಡುಪಿ ಕೃಷ್ಣ ಮಠಕ್ಕೆ ಆಗಮಿಸಿ, ದೇವರ ದರ್ಶನ ಪಡೆದರು. ಮಠದ ರಥಬೀದಿ, ರಾಜಾಂಗಣ ಪಾರ್ಕಿಂಗ್ ಪ್ರದೇಶ ಸೇರಿದಂತೆ ಮಠದ ಇಡೀ ಪರಿಸರದಲ್ಲಿ ವೇಷಧಾರಿಗಳು, ಜನಜಾತ್ರೆಯಿಂದ ಸಂಭ್ರಮದ ವಾತಾವರಣ ಕಂಡುಬಂತು.
ಮಠದಲ್ಲಿ ಜನ್ಮಾಷ್ಟಮಿ ಪ್ರಯುಕ್ತ ಇಂದು ಪುಟ್ಟಪುಟ್ಟ ಮಕ್ಕಳಿಗಾಗಿ ಮುದ್ದುಕೃಷ್ಣ ವೇಷ ಸ್ಪರ್ಧೆಗಳು ನಡೆದವು. ಹೀಗಾಗಿ ಇಡೀ ರಥಬೀದಿ ಆಸುಪಾಸಿನಲ್ಲಿ ಇಂದು ಎಲ್ಲಿ ಕಂಡರಲ್ಲಿ ಬಾಲಕೃಷ್ಣರೇ ಕಂಡುಬಂದರು. ಅವರೊಂದಿಗೆ ಯಶೋಧೆಯರು ಹಾಗೂ ಗೋಪಿಕೆಯರು ಸಹ. ಕಾಣಿಯೂರು ಮಠಾಧೀಶರು ಇಂದು ಬಾಲಕೃಷ್ಣನಿಗೆ ವಿಶೇಷವಾಗಿ ಯಶೋದಕೃಷ್ಣನ ಅಲಂಕಾರ ಮಾಡಿದರು. ಬಳಿಕ ಭೋಜನ ಶಾಲೆಯಲ್ಲಿ ಪರ್ಯಾಯ ಸ್ವಾಮೀಜಿ ಕೃಷ್ಣನಿಗೆ ಸಮರ್ಪಿಸುವ ಲಡ್ಡಿಗೆ ಮತ್ತು ಚಕ್ಕುಲಿ ತಯಾರಿಗೆ ಚಾಲನೆ ನೀಡಿದರು. ಅಷ್ಟಮಿಯ ಹಿನ್ನೆಲೆಯಲ್ಲಿ ಶ್ರೀಕೃಷ್ಣ ಮಠದ ಗರ್ಭಗುಡಿ, ಮಠದ ಸುತ್ತುಪೌಳಿ, ಚಂದ್ರಶಾಲೆ, ತೀರ್ಥ ಮಂಟಪ, ಮಧ್ವಮಂಟಪ, ಸುಬ್ರಹ್ಮಣ್ಯ ಗುಡಿ, ನವಗ್ರಹ ಗುಡಿ ಸಹಿತ ಇಡೀ ಕೃಷ್ಣ ಮಠಕ್ಕೆ ಹೂವಿನ ಅಲಂಕಾರ ಮಾಡಲಾಗಿತ್ತು.
ಭಜನಾ ಕಾರ್ಯಕ್ರಮ: ಶ್ರೀಮಠದ ಮಧ್ವಮಂಟಪದಲ್ಲಿ ಗಣೇಶ್ ಎರ್ಮಾಳ್ ಮತ್ತು ಬಳಗದಿಂದ ಬೆಳಗ್ಗೆಯಿಂದ ಸಂಜೆಯವರೆಗೆ ಭಜನಾ ಕಾರ್ಯಕ್ರಮ ನಡೆಯಿತು. ನಾಳೆ ಅಪರಾಹ್ನ ೩:೦೦ರಿಂದ ರಥಬೀದಿಯಲ್ಲಿ ವಿಟ್ಲಪಿಂಡಿ, ಮೊಸರು ಕುಡಿಕೆ ಕಾರ್ಯಕ್ರಮ ನಡೆಯಲಿದೆ.








