ಬಿಜೆಪಿಯ 'ಪೇಯ್ಡ್ ನ್ಯೂಸ್' ಆರೋಪಕ್ಕೆ ಪ್ರತಿಕ್ರಿಯಿಸಿದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಹೇಳಿದ್ದೇನು?

ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ (PTI)
ಹೊಸದಿಲ್ಲಿ,ಆ.20: ನ್ಯೂಯಾರ್ಕ್ ಟೈಮ್ಸ್ ನಲ್ಲಿ ಪ್ರಕಟಗೊಂಡ ದಿಲ್ಲಿಯ ಶಿಕ್ಷಣ ವ್ಯವಸ್ಥೆಯ ಕುರಿತ ಲೇಖನವು ‘ಪಾವತಿ ಸುದ್ದಿ ’ಯಾಗಿದೆ ಎಂದು ಬಿಜೆಪಿ ಶುಕ್ರವಾರ ಮಾಡಿದ್ದ ಆರೋಪವನ್ನು ತಿರಸ್ಕರಿಸಿರುವ ಪತ್ರಿಕೆಯು ತಾನು ಸಂಪೂರ್ಣವಾಗಿ ನಿಷ್ಪಕ್ಷವಾಗಿದ್ದೇನೆ ಎಂದು ಸ್ಪಷ್ಟಪಡಿಸಿದೆ.
‘ದಿಲ್ಲಿಯ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ಪ್ರಯತ್ನಗಳ ಕುರಿತು ನಮ್ಮ ವರದಿಯು ನಿಷ್ಪಕ್ಷ,ತಳಮಟ್ಟದ ವರದಿಗಾರಿಕೆಯನ್ನು ಆಧರಿಸಿದೆ ’ಎಂದು ನ್ಯೂಯಾರ್ಕ್ ಟೈಮ್ಸ್ ನ ಬಾಹ್ಯ ಸಂವಹನಗಳ ನಿರ್ದೇಶಕ ನಿಕೋಲ್ ಟೈಲರ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಶಿಕ್ಷಣವು ಪತ್ರಿಕೆಯು ಹಲವು ವರ್ಷಗಳಿಂದಲೂ ವರದಿ ಮಾಡುತ್ತಿರುವ ವಿಷಯವಾಗಿದೆ.
ನ್ಯೂಯಾರ್ಕ್ ಟೈಮ್ಸ್ ನ ಪತ್ರಿಕೋದ್ಯಮವು ಯಾವಾಗಲೂ ಸ್ವತಂತ್ರವಾಗಿದೆ,ರಾಜಕೀಯ ಅಥವಾ ಜಾಹೀರಾತುದಾರರ ಪ್ರಭಾವದಿಂದ ಮುಕ್ತವಾಗಿದೆ ಎಂದೂ ಅವರು ಹೇಳಿದರು.
ನ್ಯೂಯಾರ್ಕ್ ಟೈಮ್ಸ್ ವರದಿಯು ಮೊದಲು ಆನ್ಲೈನ್ನಲ್ಲಿ ಆ.16ರಂದು ಮತ್ತು ಆ.18ರಂದು ಅದರ ಅಂತರರಾಷ್ಟ್ರೀಯ ಆವೃತ್ತಿಯ ಮುಖಪುಟದಲ್ಲಿ ಪ್ರಕಟವಾಗಿತ್ತು.
ರಾಷ್ಟ್ರ ರಾಜಧಾನಿಯಲ್ಲಿ ಶಿಕ್ಷಣ ವ್ಯವಸ್ಥೆಯ ಪುನಃಶ್ಚೇತನಕ್ಕಾಗಿ ಆಡಳಿತಾರೂಢ ಆಪ್ ಅನ್ನು ಪ್ರಶಂಸಿಸಿದ್ದ ವರದಿಯು, 2015ರಿಂದ ಸರಕಾರಿ ಶಾಲೆಗಳ ಪರಿವರ್ತನೆಯಲ್ಲಿ ಆಪ್ ನಾಯಕ ಮನೀಷ್ ಸಿಸೋಡಿಯಾ ಅವರ ಪಾತ್ರವನ್ನು ವಿಶೇಷವಾಗಿ ಉಲ್ಲೇಖಿಸಿತ್ತು. ದಿಲ್ಲಿಯಲ್ಲಿ ಸರಕಾರಿ ಶಾಲೆಗಳಿಗೆ ಪುನಃಶ್ಚೇತನ ನೀಡಿರುವುದು ವಿದ್ಯಾರ್ಥಿಗಳು ಪ್ರವೇಶಕ್ಕಾಗಿ ಹಾತೊರೆಯುವಂತೆ ಮಾಡಿದೆ ಎಂದು ಅದು ಹೇಳಿತ್ತು.
ದಿಲ್ಲಿ ಸರಕಾರದ ನೂತನ ಅಬಕಾರಿ ನೀತಿಯಲ್ಲಿ ಅಕ್ರಮಗಳ ಆರೋಪಗಳಿಗೆ ಸಂಬಂಧಿಸಿದಂತೆ ಶುಕ್ರವಾರ ಸಿಬಿಐ ಉಪಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರೂ ಆಗಿರುವ ಸಿಸೋಡಿಯಾರ ನಿವಾಸ ಮತ್ತು ಇತರ 20 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿತ್ತು. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಈ ದಾಳಿಗಳಿಗೂ ನ್ಯೂಯಾರ್ಕ್ ಟೈಮ್ಸ್ನಲ್ಲಿ ಪ್ರಕಟವಾಗಿದ್ದ ವರದಿಗೂ ತಳುಕು ಹಾಕಿದ್ದರು. ಆದರೆ ಬಿಜೆಪಿ ಲೇಖನವು ‘ಪಾವತಿ ಸುದ್ದಿ’ಯಾಗಿದೆ ಎಂದು ಪ್ರತಿಪಾದಿಸಿತ್ತು.
ದಿಲ್ಲಿಯ ಅಸ್ತಿತ್ವದಲ್ಲಿಲ್ಲದ ಶಿಕ್ಷಣ ಮಾದರಿಯ ಕುರಿತು ನ್ಯೂಯಾರ್ಕ್ ಟೈಮ್ಸ್ ಮತ್ತು ಖಲೀಜ್ ಟೈಮ್ಸ್ ಒಂದೇ ವ್ಯಕ್ತಿಯು ಬರೆದಿರುವ ಒಂದೇ ಲೇಖನವನ್ನು ಅಕ್ಷರಶಃ ಅವೇ ಪದಗಳೊಂದಿಗೆ ಮತ್ತು ಚಿತ್ರಗಳೊಂದಿಗೆ ಪ್ರಕಟಿಸಲು ಹೇಗೆ ಸಾಧ್ಯ ಎಂದು ಟ್ವಿಟರ್ನಲ್ಲಿ ಪ್ರಶ್ನಿಸಿದ್ದ ಬಿಜೆಪಿಯ ಐಟಿ ಕೋಶದ ಮುಖ್ಯಸ್ಥ ಅಮಿತ್ ಮಾಳವೀಯ,ಕೇಜ್ರಿವಾಲ್ ಎಷ್ಟೇ ಉತ್ತಮವಾಗಿ ಸಮರ್ಥಿಸಿಕೊಂಡರೂ ಅದು ಪಾವತಿ ಸುದ್ದಿಯಲ್ಲದೆ ಬೇರೆಯಲ್ಲ ಎಂದು ಹೇಳಿದ್ದರು.
ಇತರ ಪತ್ರಿಕೆಗಳು ವಾಡಿಕೆಯಂತೆ ಪರವಾನಿಗೆಯನ್ನು ಪಡೆದುಕೊಂಡು ನ್ಯೂಯಾರ್ಕ್ ಟೈಮ್ಸ್ನಲ್ಲಿಯ ಲೇಖನಗಳನ್ನು ಮರುಪ್ರಕಟಿಸುತ್ತವೆ ಎಂದು ಟೈಲರ್ ಒತ್ತಿ ಹೇಳಿದರು.
ಖಲೀಜ್ ಟೈಮ್ಸ್ ಸಿಂಡಿಕೇಟೆಡ್ ಲೇಖನವನ್ನು ಪ್ರಕಟಿಸಿದ್ದು,ಅದು ಮೂಲತಃ ನ್ಯೂಯಾರ್ಕ್ ಟೈಮ್ಸ್ನಲ್ಲಿ ಪ್ರಕಟವಾಗಿತ್ತು ಎನ್ನುವುದನ್ನು ಸ್ಪಷ್ಟವಾಗಿ ಉಲ್ಲೇಖಿಸಿತ್ತು. ನ್ಯೂಸ್ ಸಿಂಡಿಕೇಷನ್ ಸೇವೆಗಳಡಿ ನಿರ್ದಿಷ್ಟ ಚಂದಾ ಪಾವತಿಸುವ ಮೂಲಕ ಲೇಖನಗಳನ್ನು ಮರುಬಳಸಿಕೊಳ್ಳಬಹುದು.
ಪಾವತಿ ಸುದ್ದಿ ಆರೋಪಕ್ಕೆ ಪ್ರತಿಕ್ರಿಯಿಸಿದ ಆಪ್ ಸಂಸದ ರಾಘವ ಛಡ್ಡಾ ಅವರು, ಇದೊಳ್ಳೇ ತಮಾಷೆಯಾಗಿದೆ. ನ್ಯೂಯಾರ್ಕ್ ಟೈಮ್ಸ್ನಲ್ಲಿ ಯಾವುದೇ ಬಿಜೆಪಿ ನಾಯಕರ ಕುರಿತು ಸುದ್ದಿ ಎಂದೂ ಪ್ರಕಟಗೊಂಡಿಲ್ಲ. ಬಿಜೆಪಿ ತನ್ನನ್ನು ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವೆಂದು ಕರೆದುಕೊಳುತ್ತಿದೆ. ಅದು ಅತ್ಯಂತ ಶ್ರೀಮಂತ ಪಕ್ಷವಾಗಿದೆ. ಅವರನ್ನು ಯಾರಾದರೂ ಸ್ವೀಕರಿಸಬೇಕಿದ್ದರೆ ಅದರ ನಾಯಕರು ದಿನನಿತ್ಯ ನ್ಯೂಯಾಕರ್ರ್ ಟೈಮ್ಸ್ನ ಮುಖಪುಟದಲ್ಲಿ ಕಾಣಿಸಿಕೊಳ್ಳಬೇಕು ಎಂದರು.
ತನ್ನ ಧನ ಮತ್ತು ಅಧಿಕಾರ ಬಲವನ್ನು ಬಳಸಿಕೊಂಡು ಯಾವುದೇ ಲೇಖನ ನ್ಯೂಯಾರ್ಕ್ ಟೈಮ್ಸ್ನಲ್ಲಿ ಪ್ರಕಟಗೊಳ್ಳುವಂತೆ ಮಾಡಲು ಆಪ್ ನಾಯಕ ಸೌರಭ್ ಭಾರದ್ವಾಜ್ ಅವರು ಬಿಜೆಪಿಗೆ ಸವಾಲು ಹಾಕಿದ್ದಾರೆ. ಸುಳ್ಳು ಆರೋಪಗಳನ್ನೂ ಮಾಡಲು ಪೂರ್ವಸಿದ್ಧತೆ ಅಗತ್ಯವಾಗುತ್ತದೆ ಎಂದು ಆಪ್ ಶಾಸಕಿ ಅತಿಷಿ ಕುಟುಕಿದ್ದಾರೆ. ಪತ್ರಕರ್ತರೂ ಟ್ವಿಟರ್ನಲ್ಲಿ ಸಿಂಡಿಕೇಷನ್ ಎಂದರೆ ಎನ್ನುವುದರ ಬಗ್ಗೆ ಬಿಜೆಪಿಗೆ ಪಾಠ ಮಾಡಿದ್ದಾರೆ.







